ಇಷ್ಟೊಂದು ಪೂರ್ವ-ಷರತ್ತುಗಳೊಂದಿಗೆ ರಾಹುಲ್ ಅವರನ್ನು ಆಹ್ವಾನಿಸಿರಲಿಲ್ಲ: ಜಮ್ಮು ಕಾಶ್ಮೀರ ರಾಜ್ಯಪಾಲ

Update: 2019-08-14 07:07 GMT

ಜಮ್ಮು: ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು 'ಪೂರ್ವ-ಷರತ್ತುಗಳನ್ನು' ಮುಂದಿಟ್ಟಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ರಾಜ್ಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕಿಡಿ ಕಾರಿದ್ದಾರೆ. ರಾಹುಲ್ ಅವರು ತಮ್ಮೊಂದಿಗೆ ವಿಪಕ್ಷ ನಾಯಕರುಗಳ ನಿಯೋಗ ಕರೆತರಲೂ ಅನುಮತಿ ಕೇಳಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆಂದು ಮಲಿಕ್ ಆರೋಪಿಸಿದ್ದಾರೆ.

ಕಾಶ್ಮೀರದಲ್ಲಿ ಹಿಂಸೆಯ ಘಟನೆಗಳ ಕುರಿತಾದ ಕೆಲ ವರದಿಗಳನ್ನು ಉಲ್ಲೇಖಿಸಿ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್, "ನಿಮಗೆ ವಿಮಾನ ಕಳುಹಿಸುತ್ತೇನೆ, ಇಲ್ಲಿಗೆ ಬಂದು ಪರಿಸ್ಥಿತಿ ಪರಿಶೀಲಿಸಿ ನಂತರ ಮಾತನಾಡಿ'' ಎಂದು ಹೇಳಿದ್ದರೆ ರಾಹುಲ್ ಅವರ ಆಹ್ವಾನವನ್ನು ಸ್ವೀಕರಿಸಿ ಸುದ್ದಿಗೆ ಗ್ರಾಸವಾಗಿದ್ದರು.

ಆದರೆ ಆಹ್ವಾನ ಸ್ವೀಕರಿಸುವುದರ ಜತೆಗೆ ತಮ್ಮೊಂದಿಗೆ ವಿಪಕ್ಷಗಳ ನಿಯೋಗವನ್ನೂ ಕರೆತರುವುದಾಗಿ ಹಾಗೂ  ದಿಗ್ಬಂಧನದಲ್ಲಿರುವ ರಾಜ್ಯದ ಮುಖ್ಯವಾಹಿನಿ ನಾಯಕರನ್ನು, ಜತೆಗೆ ಜನರು ಹಾಗೂ ಸೈನಿಕರನ್ನೂ ತಮಗೆ ಭೇಟಿಯಾಗಲು  ಅವಕಾಶ ನೀಡಬೇಕೆಂದು ರಾಹುಲ್ ಕೇಳಿದ್ದಾರೆ, ಎಂದು ಮಲಿಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಇಷ್ಟೊಂದು ಪೂರ್ವ-ಷರತ್ತುಗಳೊಂದಿಗೆ ತಾವು ರಾಹುಲ್ ಅವರನ್ನು ಆಹ್ವಾನಿಸಿರಲಿಲ್ಲ ಎಂದು ಹೇಳಿರುವ ಮಲಿಕ್ ಈ ವಿಚಾರ ಪರಿಶೀಲಿಸಲು ಸ್ಥಳೀಯ ಪೊಲೀಸ್ ಹಾಗೂ ಆಡಳಿತಕ್ಕೆ ತಿಳಿಸಿದ್ದಾರೆ.

"ಕಾಶ್ಮೀರ ಕುರಿತಂತೆ ಗಡಿಯಾಚೆಗಿನಿಂದ ಬಂದ ನಕಲಿ ಸುದ್ದಿಗಳನ್ನು ರಾಹುಲ್ ನಂಬಿರಬಹುದು, ಕಾಶ್ಮೀರ ಕಣಿವೆಯಲ್ಲಿ ಶಾಂತಿಯಿರುವ ಕುರಿತಂತೆ ವಿವಿಧ ಭಾರತೀಯ ವಾಹಿನಿಗಳು ಪ್ರಸಾರ ಮಾಡಿದ ಸುದ್ದಿಗಳನ್ನು ಅವರು ಪರಿಶೀಲಿಸಬೇಕು,''ಎಂದೂ ಈ ಹಿಂದೆ ರಾಜ್ಯಪಾಲರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News