ಈ ರೈಲು ಪ್ಲಾಟ್‌ಫಾರಂ ಗಾಯಕಿಗೆ ಈಗ ತಾರಾ ಪಟ್ಟ !

Update: 2019-08-14 08:01 GMT
ಫೋಟೊ: timesofindia

ಹೊಸದಿಲ್ಲಿ: ಕೆದರಿದ ಕೂದಲು, ಮಾಸಲು ಮುಖದ ಈ ಗಾಯಕಿಗೆ ಹಳಿಯಲ್ಲಿ ಚಲಿಸುವ ರೈಲಿನ ಹಿಮ್ಮೇಳ; ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸದ್ದುಗದ್ದಲವೇ ತಾಳ ವಾದ್ಯ.. ಇದೆಲ್ಲದರ ನಡುವೆ "ಲಾ..ಲಾ..ಲಾ..ಲಾ.. ಏಕ್ ಪ್ಯಾರ್ ಕಾ ನಗ್ಮಾ ಹೇ..ಮೌಜೋಂ ಕಿ ರವಾನಿ ಹೆ" ಎಂದು ತನ್ಮತಯತೆಯಿಂದ ಹಾಡುತ್ತಿರುವ 59 ವರ್ಷ ವಯಸ್ಸಿನ ರಾನು ಮರಿಯಾ ಮಂಡಲ್ ಇದೀಗ ರಾಷ್ಟ್ರಮಟ್ಟದ ಸೂಪರ್‌ಸ್ಟಾರ್ ಗಾಯಕಿ!

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾಘಾಟ್ ರೈಲು ನಿಲ್ದಾಣದ ಪ್ರಯಾಣಿಕ ಸೆರೆಹಿಡಿದ ಎರಡು ನಿಮಿಷದ ವಿಡಿಯೊ, ಈ ಅಲೆಮಾರಿ ಎಲೆಮರೆಯ ಕಾಯಿಯ ಭವಿಷ್ಯವನ್ನೇ ಬದಲಿಸಿದೆ.

ತವರು ರಾಜ್ಯದ ಸಾವಿರಾರು ಮಂದಿಗೆ ಇಂದು ಈಕೆ ರಾನು ದೀ. ಹಲವು ರೇಡಿಯೊ ಚಾನಲ್, ಚಿತ್ರ ನಿರ್ಮಾಣ ಸಂಸ್ಥೆಗಳು, ಸ್ಥಳೀಯ ಕ್ಲಬ್, ದೂರದ ಕೇರಳದ ಧಾರ್ಮಿಕ ಸಂಸ್ಥೆಗಳಿಂದ ಕರೆ ಬರುತ್ತಿದೆ. 10 ವರ್ಷದಿಂದ ಸಂಪರ್ಕದಲ್ಲಿಲ್ಲದ ಪುತ್ರಿ ಜತೆಗೂ ಸಂಪರ್ಕ ಏರ್ಪಟ್ಟಿದೆ.

ಮನೋಜ್ ಕುಮಾರ್, ಜಯಾ ಬಚ್ಚನ್ ಮತ್ತು ನಂದಾ ಅಭಿನಯದ 1972ರ ಶೋರ್ ಚಿತ್ರದ ಹಾಡಿನ ಕುರಿತ ವೀಡಿಯೊವನ್ನು ಫೇಸ್‌ಬುಕ್ ಮೊಮೆಂಟ್ಸ್‌ಗೆ ಅಪ್‌ಲೋಡ್ ಮಾಡಲಾಗಿದೆ. ರಾಣಾಘಾಟ್ ನಿಲ್ದಾಣದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಮನೆಯಿಂದ ನಡೆದುಕೊಂಡು ಬಂದು, ಪ್ಲಾಟ್‌ಫಾರಂನಲ್ಲಿ ಬೆಂಚ್ ಮೇಲೆ ಕುಳಿತು ಹಾಡಲು ತೊಡಗುತ್ತಾಳೆ. ಈ ಹಾಡನ್ನು ಅತೀಂದ್ರ ಚಕ್ರವರ್ತಿ ಎಂಬುವವರು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿ, ಇಡೀ ದೇಶಕ್ಕೆ ಬಿತ್ತರಿಸಿದ್ದಾರೆ.

"ಬೆಂಗಾಲಿ ಬ್ಯಾಂಡ್ ಒಂದು ನಮ್ಮನ್ನು ಸಂಪರ್ಕಿಸಿದ್ದು, ಈ ತಿಂಗಳೇ ಈಕೆಯನ್ನು ವೇದಿಕೆ ಮೇಲೆ ನೋಡಲಿದ್ದೀರಿ" ಎಂದು ಇಂಥ ಸಾವಿರಾರು ಕರೆಗಳನ್ನು ಸ್ವೀಕರಿಸುತ್ತಿರುವ ಚಕ್ರವರ್ತಿ ಹೇಳುತ್ತಾರೆ.

"ರಿಯಾಲಿಟಿ ಶೋ ನಿರ್ಮಾಪಕರೊಬ್ಬರು ಕರೆ ಮಾಡಿ, ವಿಮಾನ ಟಿಕೆಟ್ ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ ಆಕೆಗೆ ಗುರುತಿನ ಪತ್ರವೂ ಇಲ್ಲದಿರುವುದರಿಂದ ಸಾಧ್ಯವಾಗಲಿಲ್ಲ. ಕೊಲ್ಕತ್ತಾದ ಹಲವು ನಿರ್ಮಾಪಕರು ಹಿನ್ನೆಲೆ ಗಾಯನಕ್ಕಾಗಿ ಬೇಡಿಕೆ ಸಲ್ಲಿಸಿದ್ದಾರೆ" ಎಂದು ವಿವರಿಸಿದ್ದಾರೆ.

ಮಂಡಲ್ ಅವರ ಮೊದಲ ವೀಡಿಯೊವನ್ನು ಕಳೆದ ಅಕ್ಟೋಬರ್‌ನಲ್ಲಿ ನೆರೆಮನೆಯ ತಪನ್ ದಾಸ್ ಎಂಬವರು ಅಪ್‌ಲೋಡ್ ಮಾಡಿದ್ದರು. ಆದರೆ ಅದು ಹೆಚ್ಚಿನ ಗಮನ ಸೆಳೆಯಲಿಲ್ಲ. ಇದೀಗ ಹಲವು ಚಿತ್ರ ನಿರ್ಮಾಪಕರು ಆಕೆಯ ಮನೆಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಕೇರಳದ ವೃದ್ಧಾಶ್ರಮವೊಂದರಿಂದಲೂ ಕರೆ ಮಾಡಿ, ವೃದ್ಧಾಶ್ರಮದಲ್ಲಿ ಉಚಿತ ಊಟ- ವಸತಿಯ ಭರವಸೆ ನೀಡಲಾಗಿದೆ.

ಸಂಗೀತದಲ್ಲಿ ತರಬೇತಿ ಪಡೆಯುವ ಅವಕಾಶ ಸಿಕ್ಕಿಲ್ಲ. ಆದಾಗ್ಯೂ ಲತಾ ಮಂಗೇಷ್ಕರ್, ಕಿಶೋರ್ ಕುಮಾರ್, ಮೊಹ್ಮದ್ ರಫಿ ಮತ್ತು ಮುಖೇಶ್ ಅವರ ಹಾಡುಗಳು ಇಷ್ಟ ಎಂದು ಹೇಳುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News