ಡೆಂಗ್ ತಡೆಗೆ 200 ಮಂದಿ ಸ್ವಯಂ ಸೇವಕರ ನಿಯೋಜನೆ: ಮೇಯರ್ ಗಂಗಾಂಬಿಕೆ

Update: 2019-08-14 18:07 GMT

ಬೆಂಗಳೂರು, ಆ.14: ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಡೆಂಗ್ ಪ್ರಕರಣ ಕಂಡು ಬಂದಿರುದ 50 ವಾರ್ಡ್‌ಗಳಿಗೆ ಹೆಚ್ಚುವರಿಯಾಗಿ 200 ಮಂದಿ ಸ್ವಯಂ ಸೇವಕರನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.

ಬುಧವಾರ ಮಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ರಾಜಧಾನಿಯಲ್ಲಿನ ಡೆಂಗ್ ಪ್ರಕರಣ ಹಾಗೂ ಪ್ಲಾಸ್ಟಿಕ್ ನಿಷೇಧ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಜನವರಿಯಿಂದ ಇದುವರೆಗೆ 5,006 ಡೆಂಗ್ ಪ್ರಕರಣಗಳು ದಾಖಲಾಗಿವೆ. ಪೂರ್ವ, ಮಹದೇವಪುರ ಹಾಗೂ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಆದ್ದರಿಂದ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ 50 ವಾರ್ಡ್‌ಗಳಿಗೆ ತಲಾ ನಾಲ್ಕು ಮಂದಿಯಂತೆ 200 ಸ್ವಯಂ ಸೇವಕರನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಸ್ವಯಂ ಸೇವಕರನ್ನು ಒಂದು ತಿಂಗಳ ಅವಧಿಗೆ ನಿಯೋಜನೆ ಮಾಡಿಕೊಳ್ಳಲಾಗುತ್ತಿದ್ದು, ಅವಶ್ಯಕತೆಯಿದ್ದಲ್ಲಿ ಮತ್ತೆ ಎರಡು ತಿಂಗಳಿಗೆ ನಿಯೋಜನೆ ಮಾಡಿಕೊಳ್ಳಲಾಗುವುದು. ಎಲ್ಲಾ 198 ವಾರ್ಡ್‌ಗಳಲ್ಲೂ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾಯಕರ್ತೆಯರು ಮನೆ- ಮನೆಗೆ ತೆರಳಿ ಸೊಳ್ಳೆ ಉತ್ಪತ್ತಿ ಆಗುವ ಬಗ್ಗೆ ಕರಪತ್ರಗಳನ್ನು ನೀಡಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಜೊತೆಗೆ ಡೆಂಗ್ ಪ್ರಕರಣಗಳು ಕಂಡು ಬಂದಿರುವ ಬಗ್ಗೆ ಸಮೀಕ್ಷೆ ಕೂಡಾ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಾರಕ್ಕೆ ಎರಡು-ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಬಿಡುವ ಕಡೆ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದೆ. ಈ ಸಂಬಂಧ ನಾಗರಿಕರಲ್ಲಿ ಶುದ್ಧ ನೀರಿನಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತವೆ. ಆದ್ದರಿಂದ ನೀರು ಸಂಗ್ರಹಿಸಿಟ್ಟುಕೊಂಡಿದ್ದರೆ, ಅದರ ಮೇಲೆ ಸರಿಯಾಗಿ ಮುಚ್ಚಳಗಳನ್ನು ಮುಚ್ಚಲು ಸೂಚಿಸಬೇಕು. ಅಲ್ಲದೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳ ಬಳಿ ಮಳೆ ನೀರು ಸಂಗ್ರಹವಾಗದಂತೆ ಮನೆ ಮಾಲಕರು ಹಾಗೂ ಗುತ್ತಿಗೆದಾರರಿಗೆ ಪಾಲಿಕೆ ಆರೋಗ್ಯಾಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಒಂದು ವಾರ್ಡ್‌ಗೆ 3ರಿಂದ ನಾಲ್ಕು ಗನ್‌ಮ್ಯಾನ್‌ಗಳನ್ನು ಪಾಗಿಂಗ್ ಮತ್ತು ಔಷಧಿ ಸಿಂಪಡಿಸಲು ನಿಯೋಜಿಸಲಾಗಿದೆ. ರೇಡಿಯೋ, ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಹಾಗೂ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಹೆಚ್ಚು ಪ್ರಕರಣ ಕಂಡುಬಂದಿರುವ 50 ವಾರ್ಡ್‌ಗಳಲ್ಲಿ ಆಟೋಗಳಲ್ಲಿ ಧ್ವನಿ ವರ್ಧಕಗಳನ್ನು ಅಳವಡಿಸಿ ಡೆಂಗ್ ಪ್ರಕರಣ ಹರಡುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ಎಲ್ಲಾ ಶಾಲಾ ಮಕ್ಕಳ ಸಹಯೋಗದಲ್ಲಿ ನಗರಾದ್ಯಂತ ಜಾಗೃತಿ ಜಾಥಾ ಆಯೋಜಿಸುವ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸಲು ಪಾಲಿಕೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಜುಲೈ 15 ರಿಂದ ಇದುವರೆಗೆ ಪಾಲಿಕೆ ಎಲ್ಲಾ ವಾರ್ಡ್‌ಗಳಲ್ಲಿ ಆರೋಗ್ಯಾಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಜಪ್ತಿ ಮಾಡುವ ಜೊತೆಗೆ ದಂಡ ವಿಧಿಸುತ್ತಿದ್ದಾರೆ. ಅದರಂತೆ ಇಲ್ಲಿಯವರೆಗೆ 24 ಟನ್ ಪ್ಲಾಸಿಕ್ ಜಪ್ತಿ ಮಾಡಿದ್ದು, 2.8 ಕೋಟಿ ರೂ. ದಂಡ ವಿಧಿಸಿದ್ದಾರೆ ಎಂದು ಹೇಳಿದರು.

ಪ್ಲಾಸ್ಟಿಕ್ ಕೈಚೀಲದ ಬದಲು ಪೇಪರ್, ಬಟ್ಟೆ, ಜ್ಯೂಟ್ ಬ್ಯಾಗ್ (ನಾರಿನಿಂದ ತಯಾರಿಸಿದ ಕೈ ಚೀಲ) ಹಾಗೂ ಜೈವಿಕ ಪದಾರ್ಥಗಳಿಂದ ತಯಾರಿಸಿದ ಬ್ಯಾಗನ್ನು ಬಳಸಬಹುದಾಗಿದೆ. ಇದೇ ರೀತಿ ಬೇರೆ ಪ್ಲಾಸ್ಟಿಕ್ ಉತ್ಪನ್ನಗಳ ಬದಲು ಯಾವುದನ್ನು ಬಳಸಬಹುದು ಎಂಬುದರ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರು ದಿನಗಳ ಕಾಲ ಪ್ಲಾಸ್ಟಿಕ್ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಹಾಗೂ ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ನಗರದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕಾದರೆ ಬಿಬಿಎಂಪಿಯ ಜೊತೆ ಪೊಲೀಸ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡಾ ಕೈ ಜೋಡಿಸಬೇಕು.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

ಮಾರುಕಟ್ಟೆಗಳ ಮೇಲೆ ದಾಳಿ

ಮಾರುಕಟ್ಟೆಗಳಲ್ಲಿಯೇ ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆ ಮುಂದಿನ ವಾರದಿಂದ ಎಲ್ಲಾ ಪಾಲಿಕೆ ಸದಸ್ಯರುಗಳು ಹಾಗೂ ಅಧಿಕಾರಿಗಳ ಸಹಯೋಗದಲ್ಲಿ ಎಲ್ಲಾ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವ ಮಳಿಗೆಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಗುತ್ತದೆ. ಜೊತೆಗೆ ಪರ್ಯಾಯವಾಗಿ ಬಟ್ಟೆ, ಪೇಪರ್ ಹಾಗೂ ಜ್ಯೂಟ್ ಬ್ಯಾಗ್‌ಗಳನ್ನು ಬಳಸುವಂತೆ ವ್ಯಾಪಾರಸ್ಥರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಮೇಯರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News