ಎಲ್ಲಿ ಮನಕಳುಕಿರದೋ...

Update: 2019-08-15 04:48 GMT

ವಿಶ್ವ ಕವಿ ರವೀಂದ್ರನಾಥ ಠಾಗೋರರು ತಾನು ಬದುಕುವ ನಾಡು ಹೇಗಿರಬೇಕು ಎನ್ನುವುದನ್ನೇ ಪ್ರಾರ್ಥನೆಯ ರೂಪದಲ್ಲಿ ಬರೆದಿದ್ದಾರೆ. ಅದು ಕೇವಲ ಬ್ರಿಟಿಷರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಕವಿತೆಯಷ್ಟೇ ಅಲ್ಲ. ಇಷ್ಟಕ್ಕೂ ಠಾಗೋರರು ರಾಷ್ಟ್ರೀಯವಾದಿಯಾಗಿರಲಿಲ್ಲ. ಅವರ ಚಿಂತನೆ ವ್ಯಕ್ತಿಯ ಆತ್ಮ ಸ್ವಾತಂತ್ರವನ್ನು ಗುರಿಯಾಗಿಸಿಕೊಂಡಿತ್ತು. ವಿಭಜನೆಯ ಎಲ್ಲ ಗಡಿಗಳನ್ನೂ ಅವರು ಮೀರಲು ಪ್ರಯತ್ನಿಸಿದವರು. ಆದುದರಿಂದಲೇ ‘ಎಲ್ಲಿ ಮನಕಳುಕಿರದೋ, ಎಲ್ಲಿ ತಲೆ ಬಾಗಿರದೋ, ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ....’ ಎಂಬ ಕವಿತೆಯನ್ನು ಬರೆಯುವುದಕ್ಕೆ ಅವರಿಗೆ ಸಾಧ್ಯವಾಯಿತು. ಎಲ್ಲಿ ಮನಕ್ಕೆ ಭಯ ಇಲ್ಲವೋ, ಎಲ್ಲಿ ತನ್ನ ತಲೆ ಗುಲಾಮತನಕ್ಕೆ ಬಾಗುವುದಿಲ್ಲವೋ, ಎಲ್ಲಿ ತಿಳಿವಿಗೆ ತೊಡಕು ಬರುವುದಿಲ್ಲವೋ ಅಂತಹ ನಾಡಿನಲ್ಲಿ ಬದುಕಲು ಬಯಸುತ್ತೇನೆ ಎಂದು ಕವಿ ಠಾಗೋರರು ಹೇಳುತ್ತಾರೆ. ಅಷ್ಟೇ ಅಲ್ಲ, ಸತ್ಯದ ಅಗಾಧತೆಯಿಂದ ಹೊರಹೊಮ್ಮುವ ಮಾತುಗಳಿರುವ ನಾಡಿನಲ್ಲಿ,ಎಲ್ಲಿ ದಣಿವಿರದ ಸಾಧನೆಗೆ ಪ್ರೋತ್ಸಾಹ ಸಿಗುತ್ತದೆಯೋ, ಸದಾ ಸುವಿಚಾರದ ಜಲದ ಒಸರು ಬರುವ ನಾಡಿನಲ್ಲಿ, ಅಂತಹದೊಂದು ಜಾಗೃತ ನಾಡಿನಲ್ಲಿ ಬದುಕುವ ಕನಸನ್ನು ರವೀಂದ್ರರು ಕಾಣುತ್ತಾರೆ. ಅಂದರೆ, ಈ ನಾಡು ಯಾವ ಕಡೆಗೆ ಮುನ್ನಡೆಯಬೇಕು ಎನ್ನುವ ಬಯಕೆಯನ್ನು ಈ ಪದ್ಯದಲ್ಲಿ ವ್ಯಕ್ತಪಡಿಸಿದ್ದರು. ಇಡೀ ದೇಶ ಸ್ವಾತಂತ್ರಕ್ಕಾಗಿ ಹಪಹಪಿಸುತ್ತಿದ್ದ ಸಂದರ್ಭದಲ್ಲಿ ರವೀಂದ್ರರು ಬರೆದ ಪದ್ಯ ಇದು. ಸ್ವಾತಂತ್ರವೆಂದರೆ ಏನು ಎನ್ನುವುದನ್ನೂ ಈ ಪದ್ಯದ ಮೂಲಕವೇ ಅವರು ವಿಶ್ವಕ್ಕೆ ತಿಳಿಸಿದ್ದಾರೆ.
  
  ಈ ನಾಡು ಕವಿ ರವೀಂದ್ರರು ಕನಸಿದ ನಾಡಾಗಿ ಉಳಿದಿದೆಯೇ? ‘ಭಯವಿಲ್ಲದ ನಾಡು, ಪ್ರಭುತ್ವಕ್ಕೆ ತಲೆ ಬಾಗದ ನಾಡು, ತಿಳಿವಿಗೆ ತೊಡಕು ಬಾರದಂತಹ ನಾಡು’ ನಮ್ಮದಾಗಿದೆಯೇ ಎಂಬ ಪ್ರಶ್ನೆ ಈ ಬಾರಿಯ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಕಾಶ್ಮೀರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಈ ಹಿಂದೆಯೂ ಕಾಶ್ಮೀರ ನಮ್ಮದೇ ಆಗಿತ್ತು ಎನ್ನುವುದನ್ನು ಮರೆತು, ‘ಕಾಶ್ಮೀರವನ್ನು ನಮ್ಮದಾಗಿಸಿಕೊಂಡಿದ್ದೇವೆ’ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ಕಾಶ್ಮೀರದ ರಾಜಕೀಯ ನಾಯಕರು ಗೃಹ ಬಂಧನದಲ್ಲಿದ್ದಾರೆ. ಅಲ್ಲಿಗೆ ತೆರಳುವುದಕ್ಕೆ ಪ್ರಯತ್ನಿಸುತ್ತಿರುವ ಎಲ್ಲ ನಾಯಕರನ್ನ್ನು ಬಂಧಿಸಿ ಜೈಲಿಗೆ ತಳ್ಳಲಾಗುತ್ತಿದೆ. ಪತ್ರಿಕೆಗಳು ಸ್ತಬ್ಧವಾಗಿವೆ. ಇಡೀ ಕಾಶ್ಮೀರ ಸೇನೆಯ ಮುಷ್ಟಿಯೊಳಗೆ ಸಿಲುಕಿಕೊಂಡಿದೆ. ಪ್ರಭುತ್ವ ಸೇನೆಯನ್ನು ಮುಂದಿಟ್ಟು ಭಯದ ಮೂಲಕ ಕಾಶ್ಮೀರದಲ್ಲಿ ಆಡಳಿತ ನಡೆಸುತ್ತಿದೆ. ಕಾಶ್ಮೀರ ನಮ್ಮದೇ ನೆಲವಾಗಿದ್ದರೆ, ಈ ಹಿಂದಿನಂತೆ ನಮಗೇಕೆ ಅದರೊಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ? ಕಾಶ್ಮೀರವನ್ನು ಯಾಕೆ ಕತ್ತಲಲ್ಲಿಡಲಾಗಿದೆ? ಪೆಲೆಟ್ ಗುಂಡಿಗೆ ಅಲ್ಲಿನ ನಾಗರಿಕರು ಯಾಕೆ ಬಲಿಯಾಗುತ್ತಿದ್ದಾರೆ? ಇವೆಲ್ಲವೂ ಸ್ವಾತಂತ್ರದ ಲಕ್ಷಣಗಳೇ? ಸರಕಾರದಿಂದ ಜನರು ಉತ್ತರವನ್ನು ಬಯಸುತ್ತಿದ್ದಾರೆ. ಬಹುಶಃ ಕಾಶ್ಮೀರದ ಭೌಗೋಳಿಕವಾದ ನೆಲವನ್ನಷ್ಟೇ ಸರಕಾರ ನಮ್ಮದಾಗಿದೆ ಎಂದು ಹೇಳುತ್ತಿದೆ. ಠಾಗೋರರ ಕವಿತೆಯ ಆಶಯಗಳಂತೆ, ಕಾಶ್ಮೀರ ನಮ್ಮದಾಗಿಲ್ಲ ಎನ್ನುವುದನ್ನು ಅಲ್ಲಿ ನೆರೆದಿರುವ ನಮ್ಮ ಸೇನೆಯೇ ಸ್ಪಷ್ಟಪಡಿಸುತ್ತಿದೆ. ಕಾಶ್ಮೀರದೊಳಗಿರುವ ವಿದ್ಯಾವಂತ ನಾಯಕರ ಪ್ರಶ್ನೆಗಳನ್ನು ದಮನಿಸಲಾಗುತ್ತಿದೆ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯುವ ಹಕ್ಕು ಭಾರತೀಯರಾದ ನಮಗೂ ಇಲ್ಲದಂತಾಗಿದೆ. ಇದು ಕೇವಲ ಕಾಶ್ಮೀರಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದನ್ನೂ ನಾವು ಗಮನಿಸಬೇಕಾಗಿದೆ.

ತಮ್ಮದೇ ನೆಲದಲ್ಲಿ ಭಯ, ಆತಂಕದಿಂದ ದಿನ ಕಳೆಯುತ್ತಿರುವವರು ಕಾಶ್ಮೀರಿಗಳಷ್ಟೇ ಅಲ್ಲ. ಇತ್ತ ಅಸ್ಸಾಮಿನಲ್ಲೂ ಅಲ್ಲಿನ ನಾಗರಿಕರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕಳೆದ ಐದಾರು ದಶಕಗಳಿಂದ ಅಸ್ಸಾಮಿನಲ್ಲಿ ಬದುಕುತ್ತಿರುವ ನಾಗರಿಕರು, ಇದೀಗ ಪೌರತ್ವವನ್ನು ಸಾಬೀತು ಪಡಿಸಿ ಎಂಬ ಒತ್ತಡಕ್ಕೆ ಒಳಗಾಗಿದ್ದಾರೆ. ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲದವರು ಅನಾಮತ್ತಾಗಿ ಬಂಧನ ಕೇಂದ್ರಗಳಿಗೆ ವರ್ಗಾವಣೆಗೊಳ್ಳುತ್ತಿದ್ದಾರೆ. ಠಾಗೋರರು ಬಯಸುವ ‘ಮನಕೆ ಅಳುಕಿರದ ನಾಡಾಗಿ’ ಅಸ್ಸಾಂ ಉಳಿದಿಲ್ಲ. ಒಂದೆಡೆ ನೆರೆ, ಮಗದೊಂದೆಡೆ ತಮ್ಮದೇ ಸರಕಾರದ ದಬ್ಬಾಳಿಕೆಗೆ ಆ ನೆಲ ನಲುಗಿ ಹೋಗುತ್ತಿದೆ. ಇತರ ರಾಜ್ಯಗಳಲ್ಲಾದರೂ ಠಾಗೋರರು ಬಯಸಿದ ನಾಡಿದೆಯೇ ಎಂದು ತಡಕಾಡಿದರೆ, ಅಲ್ಲೂ ನಿರಾಶೆಯೇ ಕಾಡುತ್ತದೆ. ರಾಜಸ್ಥಾನದ ಆಲ್ವಾರ್‌ನಲ್ಲಿ ವೃದ್ಧ ಕೃಷಿಕ ಪೆಹ್ಲೂಖಾನ್ ಎಂಬ ರೈತನನ್ನು ಥಳಿಸಿ ಕೊಂದ ಆರು ಆರೋಪಿಗಳನ್ನು ಅಲ್ಲಿನ ನ್ಯಾಯಾಲಯ ಬಿಡುಗಡೆ ಮಾಡಿದೆ. ನಾವೆಲ್ಲರೂ ಸ್ವಾತಂತ್ರ ದಿನವನ್ನು ಆಚರಿಸುವ ಒಂದು ದಿನ ಮೊದಲು ಇದು ನಡೆದಿದೆ. ಬಹುಶಃ ಈ ದೇಶ ಅನುಭವಿಸುತ್ತಿರುವ ಸ್ವಾತಂತ್ರಕ್ಕೆ ಈ ತೀರ್ಪು ಸ್ಪಷ್ಟ ವ್ಯಾಖ್ಯಾನವಾಗಿದೆ. ಸಮಾಜದಲ್ಲಿ ದುಷ್ಟ ಶಕ್ತಿಗಳು ಹೇಗೆ ವಿಜೃಂಭಿಸುತ್ತಿವೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಸತ್ಯ ಹೇಳಿದ ಸಂಜೀವ್ ಭಟ್ ಜೈಲು ಸೇರಿದ್ದಾರೆ. ಮಾನವಹಕ್ಕು ಹೋರಾಟಗಾರರು ನಗರ ನಕ್ಸಲ್ ಹೆಸರಿನಲ್ಲಿ ಬಂದಿಯಾಗಿದ್ದಾರೆ. ಪತ್ರಕರ್ತರು ಸತ್ಯ ಹೇಳುವ ಧೈರ್ಯವನ್ನು ನಿಧಾನಕ್ಕೆ ಕಳೆದುಕೊಳ್ಳುತ್ತಿದ್ದಾರೆ. ಅಳಿದುಳಿದ ಪತ್ರಕರ್ತರು ಪ್ರಭುತ್ವಕ್ಕೆ ಮಾರಾಟವಾಗುತ್ತಿದ್ದಾರೆ.

ಎಲ್ಲೆಡೆಯೂ ‘ತಿಳಿವಿಗೆ ತೊಡಕೇ’ ಎದುರಾಗುತ್ತಿದೆೆ. ವಿಜ್ಞಾನವನ್ನು ರಾಜಕಾರಣಿಗಳು ಅಣಕಿಸುತ್ತಿದ್ದಾರೆ. ‘ಗೋವು ಆಮ್ಲಜನಕವನ್ನು ಸೇವಿಸಿ ಆಮ್ಲಜನಕವನ್ನು ಹೊರಬಿಡುತ್ತದೆ’ ಎನ್ನುವ ಮಾತುಗಳನ್ನು ಮುಖ್ಯಮಂತ್ರಿ ಎಂದು ಕರೆಸಿಕೊಂಡವರೇ ಸಾರ್ವಜನಿಕ ವೇದಿಕೆಗಳಲ್ಲಿ ಆಡುತ್ತಿದ್ದಾರೆ. ಗೋಮೂತ್ರದಿಂದ ಕ್ಯಾನ್ಸರ್ ವಾಸಿಯಾಗುತ್ತದೆ ಎನ್ನುತ್ತಾರೆ. ಮಂತ್ರಪಠಣದಿಂದ ಕೃಷಿ ಅಭಿವೃದ್ಧಿ ಹೊಂದುತ್ತದೆ ಎಂದು ಕರೆ ನೀಡುತ್ತಾರೆ. ಎಲ್ಲ ಗಡಿಗಳನ್ನು ಅಳಿಸಿ ಜನ-ಮನವನ್ನು ಒಂದಾಗಿಸುವ ಠಾಗೋರರ ಚಿಂತನೆಗಳ ಬದಲಿಗೆ ಇಡೀ ದೇಶವನ್ನು ವಿಚ್ಛಿದ್ರಗೊಳಿಸಿದ ಮನು ಚಿಂತನೆಯನ್ನು ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ಎಲ್ಲರಿಗೂ ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿಗಳನ್ನು ನೀಡುವ ಭರವಸೆಗಳು ಹುಸಿಯಾಗುತ್ತಿವೆ. ಜಾತೀಯತೆ ಮತ್ತಷ್ಟು ಬಲವಾಗಿ ಬೇರೂರುತ್ತಿದೆ. ದುರ್ಬಲರನ್ನು ಇನ್ನಷ್ಟು ದುರ್ಬಲರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ದಲಿತರ ಪ್ರತಿಭಟನೆಗಳನ್ನು, ಚಳವಳಿಗಳನ್ನು ಬಗ್ಗು ಬಡಿದು ಅವರ ನಾಯಕರನ್ನು ವಿವಿಧ ಆರೋಪಗಳಲ್ಲಿ ಜೈಲಿಗೆ ತಳ್ಳುತ್ತಿದ್ದರೆ, ಇತ್ತ ಮೇಲ್ಜಾತಿಯ ನಾಯಕರ ಪ್ರತಿಭಟನೆಗಳಿಗೆ ಮಣಿದು ಅವರಿಗೆ ಮೀಸಲಾತಿಯನ್ನು ಮೊಗೆದು ಕೊಡುವುದಕ್ಕೆ ಸರಕಾರ ಮುಂದಾಗಿದೆ.

ಬೀದಿಗಳಲ್ಲಿ ರೌಡಿಗಳು, ಗೂಂಡಾಗಳು ಸಂಸ್ಕೃತಿ ರಕ್ಷಕರಾಗಿ, ಗೋರಕ್ಷಕರಾಗಿ ಮೆರೆಯುತ್ತಿದ್ದರೆ, ಹೈನೋದ್ಯಮಿಗಳು, ಕೃಷಿಕರು ನಾಶ, ನಷ್ಟ ಅನುಭವಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ‘ಭಾರತ ಬದಲಾಗುತ್ತಿದೆ’ ನಿಜ. ಆದರೆ ಈ ಬದಲಾವಣೆ ಯಾವ ದಿಕ್ಕಿನ ಕಡೆಗೆ ಸಾಗುತ್ತಿದೆ ಎನ್ನುವುದು ಕೂಡ ಮುಖ್ಯವಾಗಿದೆ. ಈ ದೇಶದ ಸ್ವಾತಂತ್ರಕ್ಕಾಗಿ ಲಕ್ಷಾಂತರ ಜನರು ಪ್ರಾಣ ತೆತ್ತಿದ್ದಾರೆ. ದುರದೃಷ್ಟವಶಾತ್, ಇಂದು ದೇಶವು ಬ್ರಿಟಿಷರ ಜೊತೆಗೆ ಕೈಜೋಡಿಸಿದವರ ಕೈಯಲ್ಲಿ ನಲುಗತೊಡಗಿದೆ. ಸಿಕ್ಕಿದ ಸ್ವಾತಂತ್ರದ ಬೆಲೆಯನ್ನು ಶ್ರೀಸಾಮಾನ್ಯರು ಮರೆತಿದ್ದಾರೆ ಮಾತ್ರವಲ್ಲ, ಒಂದು ಕಾಲದಲ್ಲಿ ತಮ್ಮನ್ನು ಶೋಷಿಸಿದ ಚಿಂತನೆಯ ಕೈಗೆ ಮತ್ತೆ ತಮ್ಮನ್ನು ಒಪ್ಪಿಸಲು ಹೊರಟಿದ್ದ್ಜಾರೆ. ಹಿಂದೆ ಶತ್ರು ನಮ್ಮ ಎದುರುಗಡೆಯೇ ಇದ್ದ. ಹೋರಾಟ ಕಷ್ಟವಿರಲಿಲ್ಲ. ಆದರೆ ಇಂದು, ಶತ್ರುಗಳು ನಮ್ಮವರ ವೇಷದಲ್ಲೇ ಇದ್ದಾರೆ. ಈ ಶತ್ರುವನ್ನು ಬ್ರಿಟಿಷರ ಕಾಲದಲ್ಲಿ ಅಂಬೇಡ್ಕರ್ ಸ್ಪಷ್ಟವಾಗಿ ಗುರುತಿಸಿದ್ದರು. ಬ್ರಿಟಿಷರಿಗಿಂತ ಇವರೇ ಅಪಾಯಕಾರಿಗಳು, ಇವರ ಕೈಗೆ ದೇಶ ಒಪ್ಪಿಸಿ ಹೋಗಬೇಡಿ ಎಂದು ಬ್ರಿಟಿಷರಲ್ಲಿ ಮನವಿ ಮಾಡಿದ್ದರು. ಅವರ ಭಯ ಇದೀಗ ನಿಜವಾಗುತ್ತಿದೆ. ಅಂಬೇಡ್ಕರ್ ವಿಚಾರಧಾರೆಗಳನ್ನು ಜಾಗೃತಿಗೊಳಿಸುವ ಮೂಲಕವೇ ನಾವಿಂದು ಮತ್ತೆ ಆ ಶತ್ರುವನ್ನು ಎದುರಿಸಬೇಕಾಗಿದೆ. ಇದಕ್ಕೆ ಹೊರತಾದ ಬೇರಾವ ದಾರಿಯೂ ನಮ್ಮ ಮುಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News