ಕಾದಂಬರಿಗಳ ಓದು ಹೊಸ ಅನುಭವ ನೀಡುತ್ತದೆ: ಡಾ.ಸ.ಚಿ.ರಮೇಶ್

Update: 2019-08-14 18:43 GMT

ಬೆಂಗಳೂರು, ಆ.14: ಕಾದಂಬರಿಗಳನ್ನು ಓದುವುದರಿಂದ ಹೊಸ ವಿಚಾರ, ಅನುಭವ ಹಾಗೂ ತಿಳುವಳಿಕೆ ನೀಡುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದ ಕಸಾಪದಲ್ಲಿ ರಾಷ್ಟ್ರೀಯ ಲೋಕಕಲಾ ಪರಿಷತ್ ವತಿಯಿಂದ ಮದನ್ ಪಟೇಲ್ ಅವರ ಮಹಾಮಾಯೆ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾದಂಬರಿಗಳನ್ನು ಓದುವುದರಿಂದ ಅದು ನಮಗೆ ಮತ್ತೊಂದು ಮುಖದ ದರ್ಶನ ನೀಡುತ್ತದೆ. ಹೊಸತನಕ್ಕೆ ತೆರೆದುಕೊಳ್ಳುತ್ತಾ ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೋಕವನ್ನು ಪರಿಚಯಿಸುತ್ತದೆ. ಆದುದರಿಂದಲೇ ಕಾದಂಬರಿಗಳು ತನ್ನ ವಿಶಿಷ್ಟ, ವಿಭಿನ್ನತೆಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಓದುಗರನ್ನು ಹೆಚ್ಚು ಸೆಳೆಯುವಲ್ಲಿ ಕಾದಂಬರಿಗಳು ಪ್ರಸಿದ್ಧಿ ಪಡೆದಿವೆ. ಕಾದಂಬರಿಗಳು ಓದುಗರಲ್ಲಿ ಕುತೂಹಲ, ಮನರಂಜನೆ ಹಾಗೂ ವೈಜ್ಞಾನಿಕ ವಿಚಾರಗಳನ್ನು ಉಣಬಡಿಸುತ್ತವೆ. ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಎಸ್.ಎಲ್.ಭೈರಪ್ಪ, ಕುವೆಂಪು, ತೇಜಸ್ವಿ ಸೇರಿದಂತೆ ಅನೇಕರ ಕಾದಂಬರಿಗಳು ಮರು ಓದಿಸುವಂತಿದೆ. ಅವರ ಅನೇಕ ಕಾದಂಬರಿಗಳು ಮರು ಮುದ್ರಣಗೊಂಡಿರುವುದೇ ಅದಕ್ಕೆ ಸಾಕ್ಷಿಯಾಗಿದೆ ಎಂದು ರಮೇಶ್ ತಿಳಿಸಿದರು.

ಕರ್ನಾಟಕ ಸಂಸ್ಕೃತ ವಿವಿಯ ನಿವೃತ್ತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಸಮಾಜದಲ್ಲಿರುವ ಭೋಗ ಸಂಸ್ಕೃತಿ ಮನುಷ್ಯನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಲೇಖಕ ಮದನ್ ಪಟೇಲ್ ಕಾದಂಬರಿ ಮೂಲಕ ತಿಳಿಸಿದ್ದಾರೆ. ಲೈಂಗಿಕತೆಯ ಎದುರು ನೈತಿಕತೆ ಮಂಡಿಯೂರಿ ಕೂತು ಮುಕ್ತ ರೋಚಕತೆಯು ಕಾದಂಬರಿಯನ್ನು ಆವರಿಸಿಕೊಳ್ಳುತ್ತದೆ ಎಂದು ಹೇಳಿದರು.

ಕಾದಂಬರಿಯು ಆಧುನಿಕ ಬೀಭತ್ಸಗಳನ್ನು ಚಿಂತನೆ ಮಾಡಿಸುತ್ತದೆ. ಆಧುನಿಕ ಜಗತ್ತಿನ ತಾತ್ವಿಕ ಪ್ರಮೇಯವನ್ನು ಕಾದಂಬರಿಯಲ್ಲಿ ನಿರೂಪಿಸಿದ್ದಾರೆ. ಸಾಹಿತ್ಯ ಹಾಗೂ ಕಲಾವಿದನಾಗಿ ಎರಡು ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಯನ್ನು ಮದನ್ ಮಾಡಿದ್ದಾರೆ. ಅಂಗೈಯಲ್ಲಿಯೇ ಪ್ರಪಂಚವಿದ್ದಂತೆ ಕಾದಂಬರಿಯಿದ್ದು, ಓದುಗರನ್ನು ಆಯಸ್ಕಾಂತದಂತೆ ಸೆಳೆಯುತ್ತದೆ ಎಂದು ಅವರು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್, ಲೇಖಕ ಮದನ್ ಪಟೇಲ್, ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News