ಕಾನೂನಿನ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇವೆ: ಕೋರ್ಟ್ ತೀರ್ಪಿನ ನಂತರ ಪೆಹ್ಲೂ ಖಾನ್ ಕುಟುಂಬ

Update: 2019-08-15 07:44 GMT
File Photo: HT

ಜೈಪುರ್ : "ನಾವು ಕಾನೂನಿನ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇವೆ. ಕಳೆದ ಎರಡೂವರೆ ವರ್ಷಗಳಿಂದ ನಾವು ನ್ಯಾಯಕ್ಕಾಗಿ ಕಾದಿದ್ದೆವು. ನಮಗೆ ನ್ಯಾಯ ದೊರೆತು ನನ್ನ ತಂದೆಯ ಆತ್ಮಕ್ಕೆ ಶಾಂತಿ ಲಭಿಸುವುದೆಂಬ ನಂಬಿಕೆಯಿತ್ತು, ಆದರೆ ನಮ್ಮ ಭರವಸೆಗಳೆಲ್ಲಾ ನುಚ್ಚುನೂರಾಗಿವೆ,'' ಎಂದು  ರಾಜಸ್ಥಾನದ ಆಳ್ವಾರ್ ನಲ್ಲಿ ಸ್ವಘೋಷಿತ ಗೋರಕ್ಷಕರಿಂದ ಗುಂಪು ಥಳಿತಕ್ಕೊಳಗಾಗಿ ಮೃತಪಟ್ಟ ಹೈನುಗಾರ ಪೆಹ್ಲೂ ಖಾನ್ ಅವರ ಹಿರಿಯ ಪುತ್ರ ಇರ್ಷಾದ್ ಖಾನ್ ನೋವಿನಿಂದ ನುಡಿಯುತ್ತಾರೆ.

ಎರಡು ವರ್ಷಗಳ ಹಿಂದೆ ನಡೆದ ಪೆಹ್ಲೂ ಖಾನ್ ಗುಂಪು ಹತ್ಯೆ ಪ್ರಕರಣದ ಆರು ಆರೋಪಿಗಳನ್ನು ಆಲ್ವಾರ್ ನ್ಯಾಯಾಲಯವು ಬುಧವಾರ  ದೋಷಮುಕ್ತಗೊಳಿಸಿದ ನಂತರ ಇರ್ಷಾದ್ ಆಡಿದ ಮಾತುಗಳಿವು.

ನ್ಯಾಯಾಲಯದ ತೀರ್ಪು ಅವರಿಗೆ ಅಚ್ಚರಿ ಮೂಡಿಸಿದೆ. "ನನ್ನ ತಂದೆಯನ್ನು ಗುಂಪೊಂದು ಥಳಿಸಿ ಸಾಯಿಸಿದೆ ಎಂಬುದಕ್ಕೆ ನಮ್ಮಲ್ಲಿ ಎಲ್ಲಾ ಸಾಕ್ಷ್ಯಾಧಾರಗಳಿದ್ದವು. ಪೊಲೀಸರೂ ಮರಣೋತ್ತರ ಪರೀಕ್ಷಾ ವರದಿ ಸಹಿತ ಎಲ್ಲಾ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು,'' ಎಂದು 27 ವರ್ಷದ ಇರ್ಷಾದ್ ನುಡಿಯುತ್ತಾರೆ.

ಬುಧವಾರ ನ್ಯಾಯಾಲಯದ ತೀರ್ಪು ಹೊರಬಿದ್ದಾಗ ಪೆಹ್ಲೂ ಖಾನ್ ಕುಟುಂಬದ ಯಾರೊಬ್ಬರೂ ಹಾಜರಿರಲಿಲ್ಲ. ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಕುಟುಂಬ ಹೈಕೋರ್ಟಿಗೆ ಅಪೀಲು ಸಲ್ಲಿಸುವ ಸಾಧ್ಯತೆಯಿದೆ ಎಂದು ಅವರ ವಕೀಲ ಕಾಸಿಂ ಖಾನ್ ಹೇಳಿದ್ದಾರೆ.

ಈ ವರ್ಷದ ಮೇ 24ರಂದು ರಾಜಸ್ಥಾನ ಪೊಲೀಸರು ರಾಜಸ್ಥಾನ ಗೋಹತ್ಯೆ ನಿಷೇಧ ಕಾಯಿದೆ 1995 ಅನ್ವಯ ಪೆಹ್ಲೂ ಖಾನ್ ಹಾಗೂ ಅವರ ಪುತ್ರರಾದ ಇರ್ಷಾದ್ ಹಾಗೂ ಆರಿಫ್ ವಿರುದ್ಧ ಗೋಕಳ್ಳಸಾಗಾಟದ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News