ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಿಂಹಪಾಲು ದೊರಕಿಸಿಕೊಡಲು ಬದ್ಧ: ಸಿಎಂ ಯಡಿಯೂರಪ್ಪ

Update: 2019-08-15 15:22 GMT

ಬೆಂಗಳೂರು, ಆ 15: ರಾಜ್ಯದಲ್ಲಿನ ಉದ್ಯೋಗಗಳಲ್ಲಿ ಅಧಿಕಾಂಶ ಕನ್ನಡಿಗರಿಗೇ ಸಿಗಬೇಕು ಎಂಬುದು ನಮ್ಮ ಸರಕಾರದ ನಿಲುವಾಗಿದ್ದು, ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಿಂಹಪಾಲು ದೊರಕಿಸಿಕೊಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.

ಗುರುವಾರ ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ 73 ನೆ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿನ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿರುವುದು ಗಮನಿಸಿದ್ದೇನೆ ಎಂದು ಹೇಳಿದರು.

ಈ ನೆಲದ ಭಾವನೆಗಳನ್ನು ಗೌರವಿಸಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಒದಗಿಸಿಕೊಡಲು ನಮ್ಮ ಸರಕಾರ ಬದ್ಧವಿದೆ. ರಾಜ್ಯದಲ್ಲಿರುವವರಿಗೆ ಅಧಿಕ ಕನ್ನಡಿಗರಿಗೆ ದೊರೆಯಬೇಕು ಎಂಬುದು ನಮ್ಮ ನಿಲುವು. ಈ ನಿಟ್ಟಿನಲ್ಲಿ ಕನ್ನಡಿಗರ ಸ್ವಾಭಿಮಾನ, ಗೌರವ ಹಾಗೂ ಉದ್ಯೋಗಾವಕಾಶಗಳಿಗೆ ಧಕ್ಕೆ ಬರದಂತೆ ಎಚ್ಚರವಹಿಸುತ್ತೇವೆ ಎಂದು ಅವರು ಘೋಷಿಸಿದರು.

ಪ್ರವಾಹದ ಪರಿಹಾರಕ್ಕೆ ಆದ್ಯತೆ: ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 45 ವರ್ಷಗಳಲ್ಲಿ ಕಾಣದಂತಹ ಭೀಕರ ಪ್ರಕೃತಿ ವಿಕೋಪವನ್ನು ಎದುರಿಸುತ್ತಿದ್ದೇವೆ. 22 ಜಿಲ್ಲೆಗಳ 103 ತಾಲೂಕುಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. ಇದರ ನಡುವೆ 5 ಜಿಲ್ಲೆಗಳಲ್ಲಿ ಮಳೆಯಾಗದೇ ಬರ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರವು ಜನರ ನೆರವಿಗೆ ನಿಲ್ಲಲಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ರಾಜ್ಯಾದ್ಯಂತ ಪ್ರವಾಹದಿಂದಾಗಿ 61 ಮಂದಿ ಸಾವನ್ನಪ್ಪಿದ್ದಾರೆ. 6,97,948 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 859 ಜಾನುವಾರುಗಳು ಸಾವನ್ನಪ್ಪಿದ್ದು, 51,460 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. 1,224 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 3,96,617 ಜನರಿಗೆ ಆಶ್ರಯ ನೀಡಲಾಗಿದೆ. ಮನೆಮಠ, ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಆಹಾರ, ವಸ್ತ್ರ, ಹೊದಿಕೆ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯಕ್ಕೆ ಕೇಂದ್ರ ಸರಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ. ಕೇಂದ್ರ ಹಣಕಾಸು ಸಚಿವರು, ಗೃಹಸಚಿವರು ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿಗೆ ಎಲ್ಲ ರೀತಿಯ ಮಾಹಿತಿಯನ್ನು ನೀಡಲಾಗಿದೆ. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ ಹಾಗೂ ಸಂಸದರು, ಸಂಘ ಸಂಸ್ಥೆಗಳು ಎಲ್ಲ ರೀತಿಯ ನೆರವು ನೀಡುತ್ತಿದ್ದಾರೆ. ಹೆಚ್ಚಿನ ನೆರವು ನೀಡುವ ಕುರಿತು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದರು.

ರಾಜ್ಯದಲ್ಲಿರುವ ದೀನದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ಸರಕಾರ ಬದ್ಧವಾಗಿದೆ. ನಾನು ಮುಖ್ಯಮಂತ್ರಿಯಾದ ಒಂದೇ ಗಂಟೆಯಲ್ಲಿ ನೇಕಾರರ 100 ಕೋಟಿ ಸಾಲವನ್ನು ಮನ್ನಾ ಮಾಡಿದ್ದೇನೆ. ರೈತರಿಗೆ ನೀಡುತ್ತಿದ್ದ 6 ಸಾವಿರ ಪ್ರೋತ್ಸಾಹದ ಜೊತೆಗೆ ಸರಕಾರ ಎರಡು ಕಂತುಗಳಲ್ಲಿ 4000 ರೂ. ನೀಡುವ ಯೋಜನೆಗೆ ನಿನ್ನೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯ ಹಿತ ಕಾಪಾಡಲು ಬದ್ಧವಾಗಿದ್ದೇವೆ ಎಂದು ಅವರು ಹೇಳಿದರು.

ದುರ್ಬಲ ವರ್ಗಗಳ ಕಲ್ಯಾಣ: ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರಿಗೂ ಸುರಕ್ಷತೆ ಒದಗಿಸಲು ಸರಕಾರ ಬದ್ಧವಾಗಿದೆ. ದುರ್ಬಲ ವರ್ಗದ ಸಮುದಾಯಗಳು ಉತ್ತಮ ಜೀವನ ನಡೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಯಡಿಯೂರಪ್ಪ ನುಡಿದರು.

ಶೀಘ್ರವೇ ಕೈಗಾರಿಕಾ ನೀತಿ ಜಾರಿ: ಹಿಂದುಳಿದ ಪ್ರದೇಶಗಳು, ಎರಡು ಮತ್ತು 3ನೆ ಹಂತದ ಕೇಂದ್ರಗಳಿಗೆ ಬಂಡವಾಳವನ್ನು ಆಕರ್ಷಿಸುವ, ವಿನೂತನ ತಂತ್ರಜ್ಞಾನವನ್ನು ಒಳಗೊಂಡ ಹೆಚ್ಚು ಉದ್ಯೋಗ ಸೃಷ್ಟಿಗೆ ಅವಕಾಶವಿರುವ ವಲಯಗಳಿಗೆ ಆದ್ಯತೆ ನೀಡುವ ನೂತನ ಕೈಗಾರಿಕಾ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದರು.

ನಾನು ಈ ಹಿಂದೆ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಜವಳಿ ನೀತಿಯನ್ನು ಜಾರಿ ಮಾಡಿದ್ದೆ. ಈವರೆಗೂ ಎರಡು ಜವಳಿ ನೀತಿಗಳನ್ನು ಜಾರಿಗೊಳಿಸಲಾಗಿದೆ. 2019-24ರ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿಯನ್ನು ಈ ಸಾಲಿನಲ್ಲೇ ಜಾರಿ ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವರಿದ್ದರು.

ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸುಸ್ಥಿರ, ರಚನಾತ್ಮಕ ಪ್ರವಾಸೋದ್ಯಮ ಅಭಿವೃದ್ಧಿಗೆ ನಮ್ಮ ಸರಕಾರ ಆದ್ಯತೆ ನೀಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಸಂವಿಧಾನದ 370 ನೆ ವಿಧಿಯ ಸೇರ್ಪಡೆಗೆ ಸ್ವತಃ ಅಂಬೇಡ್ಕರ್ ಅವರೇ ವಿರೋಧ ವ್ಯಕ್ತಪಡಿಸಿದ್ದರು. ದೇಶದ ಅಖಂಡತೆಗೆ ಇದರಿಂದ ಧಕ್ಕೆಯಾಗುವುದು ಎಂದು ಅವರು ಭಾವಿಸಿದ್ದರು. ಪ್ರಧಾನಿ ಮೋದಿ ಅದನ್ನು ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರೂಪಿಸಿದ್ದಾರೆ.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News