‘ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಾಟ’ ಭಾರತೀಯರ ಪಾಲಿಗೆ ಹೆಮ್ಮೆ: ಅರವಿಂದ ಲಿಂಬಾವಳಿ

Update: 2019-08-15 12:58 GMT

ಬೆಂಗಳೂರು, ಆ.15: ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲೂ ತ್ರಿವರ್ಣ ಧ್ವಜ ಹಾರಾಟವಾಗಿರುವುದು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಗುರುವಾರ ಕೆ.ಆರ್.ಪುರದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬೆಂಗಳೂರು ಪೂರ್ವ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 73ನೇ ಸಾಲಿನ ಸ್ವಾತಂತ್ರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಶ್ಮೀರ ಭಾರತದ ಕಳಶ. ಆದರೂ, ಅಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಹಾರಿಸಲು ಸಾಧ್ಯವಾಗಿರಲಿಲ್ಲ. ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಅಖಂಡ ಭಾರತದ ದೃಷ್ಟಿಯಿಂದ ಜಮ್ಮು ಮತ್ತು ಕಾಶ್ಮೀರವನ್ನು ಒಂದುಗೂಡಿಸಲು ಪ್ರಯತ್ನಿಸಿದ್ದರು. ಆದರೆ, ಅವರ ಕನಸು ನನಸಾಗದೇ ಹಾಗೇ ಉಳಿದಿತ್ತು ಎಂದು ಅವರು ಹೇಳಿದರು. ಆದರೆ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನದ ಕಲಂ 370 ಹಾಗೂ 35(ಎ) ವಿಧಿಯನ್ನು ರದ್ದುಗೊಳಿಸುವ ಮೂಲಕ ದಿಟ್ಟ ನಿರ್ಧಾರವನ್ನು ಕೈಗೊಂಡರು. ಅದರ ಪರಿಣಾಮವಾಗಿ ಇವತ್ತು ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಾಡುವಂತಾಗಿದೆ ಎಂದು ಅವರು ಹೇಳಿದರು.

ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ನಮ್ಮ ರಾಜ್ಯದಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದ ಆಡಳಿತದಲ್ಲಿ ಅಭಿವೃದ್ಧಿಯ ಪರ್ವ ಪುನಃ ಆರಂಭಗೊಳ್ಳಲಿದೆ. ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿರುವ ಸರಕಾರಗಳ ಕಾರ್ಯವನ್ನು ಎಲ್ಲರೂ ಸ್ಮರಿಸಿಕೊಳ್ಳಲೇಬೇಕು ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ಈ ಕ್ಷೇತ್ರದ ಶಾಸಕರಾಗಿದ್ದ ಬಸವರಾಜ ಹಾಗೂ ನಂದೀಶ್ ರೆಡ್ಡಿ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿದ್ದರು. ಕೆ.ಆರ್.ಪುರ, ಮಹದೇವಪುರ, ಬ್ಯಾಟರಾಯನಪುರ, ಸರ್ವಜ್ಞ ನಗರ ಸೇರಿದಂತೆ ಬೆಂಗಳೂರು ಹೊರ ವಲಯದ 14 ಕ್ಷೇತ್ರಗಳಲ್ಲೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಪ್ರತಿಯೊಬ್ಬರಿಗೂ ಆರೋಗ್ಯ, ವಸತಿ ಹಾಗೂ ಶಿಕ್ಷಣ ಸಿಗಬೇಕು ಎಂದು ಅವರು ಪ್ರತಿಪಾದಿಸಿದರು.

ದೇಶದ ಗಡಿ ಕಾಯುವುದು, ದೇಶದಲ್ಲಿ ಆಂತರಿಕವಾಗಿ ಸಮಸ್ಯೆಗಳು ಎದುರಾದಾಗ ಸ್ಥಳೀಯ ಪೊಲೀಸರೊಂದಿಗೆ ಎನ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಸೇನೆಯ ಜವಾನರು ತಮ್ಮ ಪ್ರಾಣದ ಹಂಗನ್ನು ತೊರೆದು ಜನ ಸಾಮಾನ್ಯರ ಪ್ರಾಣ ಹಾಗೂ ಆಸ್ತಿ-ಪಾಸ್ತಿಗಳ ರಕ್ಷಣೆಗೆ ನಿಲ್ಲುತ್ತಾರೆ. ಅವರ ಸೇವೆಯನ್ನು ಎಷ್ಟು ಶ್ಲಾಘಿಸಿದರೂ ಸಾಲದು ಎಂದು ಅರವಿಂದ ಲಿಂಬಾವಳಿ ಹೇಳಿದರು.

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಬಹುತೇಕ ಜಿಲ್ಲೆಗಳು ಬಾಧಿತವಾಗಿವೆ. ಸಚಿವ ಸಂಪುಟ ಇಲ್ಲದೇ ಇದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರೇ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ, ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಸರಕಾರದ ಜೊತೆ ನಾಗರಿಕ ಬಂಧುಗಳಿಂದ ಬರುತ್ತಿರುವ ಸಹಾಯ ಅಭೂತಪೂರ್ವವಾದದ್ದು ಎಂದು ಅವರು ತಿಳಿಸಿದರು.

ಬೆಂಗಳೂರು ಪೂರ್ವ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ತೇಜಸ್ ಕುಮಾರ್ ಮಾತನಾಡಿ, ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಹೋರಾಟಗಾರರ ಆಶಯಕ್ಕೆ ಅನುಗುಣವಾಗಿ ನಾವು ನಡೆದುಕೊಳ್ಳಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ವಾತಂತ್ರದ ಪರಿಣಾಮ ಅರ್ಥವಾಗಬೇಕು ಎಂದರು.

ನಮ್ಮ ದೇಶ ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ವಿವಿಧತೆಯಲ್ಲಿ ಏಕತೆಯನ್ನು ನಮ್ಮ ದೇಶ ಹೊಂದಿರುವುದು, ಇದರ ಸಾಂಸ್ಕೃತಿಕ ಶ್ರೀಮಂತಿಕೆಯ ಹೆಮ್ಮೆ. ನಮ್ಮ ದೇಶ ಇವತ್ತು ಚಂದ್ರನಲ್ಲಿಗೆ ಉಪಗ್ರಹವನ್ನು ಕಳುಹಿಸಿಕೊಡುವಷ್ಟು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಲೀಂ ಪಾಷ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News