ಭಾರತದ ಪುತ್ರನಿಗೇಕೆ ಸ್ವಾತಂತ್ರ್ಯವನ್ನು ನಿರಾಕರಿಸಲಾಗುತ್ತಿದೆ?

Update: 2019-08-15 14:06 GMT

ಹೊಸದಿಲ್ಲಿ, ಆ.15: 73ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿರುವ ಮಾಜಿ ವಿತ್ತಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು,ಕಾಶ್ಮೀರ ಮೂಲದ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಅವರನ್ನು ಸರಕಾರವು ನಡೆಸಿಕೊಂಡಿರುವ ರೀತಿಯನ್ನು ತರಾಟೆಗೆತ್ತಿಕೊಂಡಿದ್ದಾರೆ.

ಫೈಸಲ್ ಅವರು ಬುಧವಾರ ವಿದೇಶಕ್ಕೆ ಪ್ರಯಾಣಿಸಲು ದಿಲ್ಲಿ ವಿಮಾನ ನಿಲ್ದಾಣವನ್ನು ತಲುಪಿದಾಗ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅವರನ್ನು ಶ್ರೀನಗರಕ್ಕೆ ವಾಪಸ್ ಕಳುಹಿಸಲಾಗಿದ್ದು,ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಗೃಹಬಂಧನದಲ್ಲಿರಿಸಲಾಗಿದೆ.

‘ಭಾರತದ ಮತ್ತು ಕಾಶ್ಮೀರದ ಪುತ್ರ ಶಾ ಫೈಸಲ್‌ಗೇಕೆ ಸ್ವಾತಂತ್ರವನ್ನು ನಿರಾಕರಿಸಲಾಗಿದೆ? ಕೆಲವೇ ವರ್ಷಗಳ ಹಿಂದೆ ಅವರು ಐಎಎಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾಗ ಅವರನ್ನು ‘ಹೀರೋ’ ಮಾಡಿ ಸಂಭ್ರಮಿಸಲಾಗಿತ್ತು,ಇಂದು ಅವರು ಹೇಗೆ ಸಾರ್ವಜನಿಕ ಸುರಕ್ಷತೆಗೆ ಬೆದರಿಕೆಯಾಗಿದ್ದಾರೆ ’ಎಂದು ಚಿದಂಬರಂ ಗುರುವಾರ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

 ಜಮ್ಮು-ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಗೃಹಬಂಧನದಲ್ಲಿರಿಸಿರುವ ವಿಷಯವನ್ನೂ ಪ್ರಸ್ತಾಪಿಸಿರುವ ಅವರು,ಆ.6ರಿಂದ ಈ ಮೂವರು ನಾಯಕರಿಗೆ ಸ್ವಾತಂತ್ರವನ್ನೇಕೆ ನಿರಾಕರಿಸಲಾಗಿದೆ? ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ವಿರುದ್ಧ ಹೋರಾಡಿದ್ದ ರಾಜಕೀಯ ನಾಯಕರನ್ನೇಕೆ ಬಂಧಿಸಲಾಗಿದೆ ಎಂದೂ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News