'ಫೋನ್ ಕದ್ದಾಲಿಕೆ' ಆರೋಪದ ಬಗ್ಗೆ ಮೌನ ಮುರಿದ ಮಾಜಿ ಸಿಎಂ ಸಿದ್ದರಾಮಯ್ಯ

Update: 2019-08-15 14:13 GMT

ಬೆಂಗಳೂರು, ಆ.15: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆಯೇನೋ ಎಂಬಂತೆ ಭಾಸವಾಗುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆಯಿಲ್ಲದವರು ಆಡಳಿತದ ಚುಕ್ಕಾಣಿ ಹಿಡಿದಾಗ ಇಂತಹ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ 73ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂದಿಗ್ಧ ಪರಿಸ್ಥಿತಿಯಿಂದ ದೇಶವನ್ನು ಹೊರತರುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ದೇಶದ ಸ್ವಾತಂತ್ರಕ್ಕಾಗಿ ಲಕ್ಷಾಂತರ ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ. ವರ್ಷಾನುಗಟ್ಟಲೆ ಸೆರೆವಾಸ ಅನುಭವಿಸಿದ್ದಾರೆ. ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರ್‌ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಇವರ್ಯಾರು ಕೂಡ ಸ್ವಾರ್ಥಕ್ಕಾಗಿ ಹೋರಾಡಿದವರಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಸ್ವಾತಂತ್ರಕ್ಕಾಗಿ ಬಲಿದಾನಗೈದ ಎಲ್ಲ ಹುತಾತ್ಮರನ್ನು ಸ್ಮರಿಸುತ್ತಾ ದೇಶದ ಐಕ್ಯತೆ, ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ಜೊತೆಗೆ ಜಾತ್ಯತೀತ ಹಾಗೂ ಪರಧರ್ಮ ಸಹಿಷ್ಣು ಮನೋಭಾವನೆಯನ್ನು ಬೆಳೆಸಿಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ. ಆಗ ಮಾತ್ರ ನಮಗೆ ದೊರೆತ ಸ್ವತಂತ್ರ ಸಾರ್ಥಕವಾಗುತ್ತದೆ ಎಂಬುದು ನನ್ನ ಭಾವನೆ ಎಂದು ಅವರು ಹೇಳಿದರು.

ದೇಶದ ಐಕ್ಯತೆ, ಸಮಗ್ರತೆ, ಸಾಮಾಜಿಕತೆ ಉಳಿಸಬೇಕಿದೆ. ಸ್ವಾತಂತ್ರದ 72ನೇ ವರ್ಷಾಚರಣೆ ಮುಗಿಸಿ 73ನೇ ವರ್ಷಕ್ಕೆ ನಾವು ಕಾಲಿರಿಸಿದ್ದೇವೆ. ಎಲ್ಲರಿಗೂ ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು. ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಫೋನ್ ಕದ್ದಾಲಿಕೆ ಗಂಭೀರ ಅಪರಾಧ: ಫೋನ್ ಕದ್ದಾಲಿಕೆ ಮಾಡುವುದು ಗಂಭೀರವಾದ ಅಪರಾಧ. ಬಿಜೆಪಿಯವರು ಆರೋಪಿಸುತ್ತಿರುವಂತೆ ಫೋನ್ ಕದ್ದಾಲಿಕೆ ನಡೆದಿದೆಯೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ಮಾಡಲಿ. ಒಂದು ವೇಳೆ ಫೋನ್ ಕದ್ದಾಲಿಕೆ ಮಾಡಿರುವುದು ದೃಢಪಟ್ಟರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News