370ನೇ ವಿಧಿ ರದ್ದತಿ ಪ್ರಶ್ನಿಸಿದ ಅರ್ಜಿ ನಾಳೆ ವಿಚಾರಣೆ

Update: 2019-08-15 15:02 GMT

ಹೊಸದಿಲ್ಲಿ, ಆ.15: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಹಾಗೂ ಅಲ್ಲಿ ಮಾಧ್ಯಮದ ಕಾರ್ಯನಿರ್ವಹಣೆಗೆ ನಿರ್ಬಂಧ ವಿಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಶುಕ್ರವಾರ (ಆಗಸ್ಟ್ 16ರಂದು) ಸುಪ್ರೀಂಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳಲಿದೆ. ನ್ಯಾಯವಾದಿ ಎಂಎಲ್ ಶರ್ಮ ಮತ್ತು ‘ಕಾಶ್ಮೀರ್ ಟೈಮ್ಸ್’ನ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ, ನ್ಯಾಯಾಧೀಶರಾದ ಎಸ್‌ಎ ಬೊಬ್ಡೆ ಮತ್ತು ಎಸ್‌ಎ ನಝೀರ್ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠ ಹೇಳಿದೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಒಪ್ಪಿಗೆ ಪಡೆಯದೆ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದು ಅಕ್ರಮ ಎಂದು ನ್ಯಾಯವಾದಿ ಶರ್ಮ ಮೇಲ್ಮನವಿ ಸಲ್ಲಿಸಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್ ಇಂಟರ್‌ನೆಟ್, ಸ್ಥಿರ ದೂರವಾಣಿ ವ್ಯವಸ್ಥೆ ಸಹಿತ ಎಲ್ಲಾ ಸಂಪರ್ಕ ವ್ಯವಸ್ಥೆಗಳನ್ನು ಮರು ಸ್ಥಾಪಿಸುವ ಮೂಲಕ ಮಾಧ್ಯಮದ ಕಾರ್ಯನಿರ್ವಹಣೆಗೆ ಆಗಿರುವ ಅಡ್ಡಿಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತೆ ಅನುರಾಧಾ ಮನವಿ ಮಾಡಿಕೊಂಡಿದ್ದಾರೆ. ಆಗಸ್ಟ್ 4ರಿಂದ ಎಲ್ಲಾ ಸಂಪರ್ಕ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿರುವುದರಿಂದ ಕಾಶ್ಮೀರ ಮತ್ತು ಜಮ್ಮುವಿನ ಕೆಲವು ಪ್ರದೇಶಗಳನ್ನು ದೇಶದ ಇತರ ಭಾಗಗಳಿಂದ ಪ್ರತ್ಯೇಕಿಸಲಾಗಿದೆ. ಆದ್ದರಿಂದ ಮಾಧ್ಯಮದವರಿಗೆ ತಮ್ಮ ವೃತ್ತಿ ನಿರ್ವಹಿಸಲು ಹಾಗೂ ವರದಿ ಮಾಡುವ ಹಕ್ಕು ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷವಾಗಿರುವ ನ್ಯಾಷನಲ್ ಕಾನ್ಫರೆನ್ಸ್ ಕೂಡಾ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಜಮ್ಮು ಕಾಶ್ಮೀರಕ್ಕೆ ಸಂವಿಧಾನಬದ್ಧವಾಗಿ ನೀಡಿರುವ ಸ್ಥಾನಮಾನವನ್ನು ಬದಲಾಯಿಸುವ ಮೂಲಕ ಜನತೆಯ ಒಪ್ಪಿಗೆಯಿಲ್ಲದೆ ಅವರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಆದ್ದರಿಂದ ಸಂಸತ್ತಿನಲ್ಲಿ ಅಂಗೀಕಾರ ಪಡೆದಿರುವ ಮಸೂದೆ ಹಾಗೂ ರಾಷ್ಟ್ರಪತಿಯವರ ಆದೇಶ ಅಸಾಂವಿಧಾನಿಕವಾಗಿದ್ದು ಇದನ್ನು ಅಸಿಂಧು ಮತ್ತು ನಿಷ್ಕ್ರಿಯ ಎಂದು ಘೋಷಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News