ನೋಡುಗರ ಮನಸೆಳೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ದೃಶ್ಯ ರೂಪಕ

Update: 2019-08-15 15:46 GMT

ಬೆಂಗಳೂರು, ಆ.15: ನಗರದ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ 73 ನೆ ಸ್ವಾತಂತ್ರ ದಿನಾಚರಣೆ ಅಂಗವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರು ಮುಗಿಲು ಮುಟ್ಟುವಂತೆ ಕರತಾಡನ ಮಾಡಿ ಮೆಚ್ಚುಗೆ ಪಡೆದುಕೊಂಡವು.

ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದ ವೀರರ ಮತ್ತು ವೀರನಾರಿಯರ ವೇಷಧಾರಿಗಳು. ಮೈ ಮೇಲೆ ತ್ರಿವರ್ಣ ರಂಗು, ಬಾನಂಗಳದಲ್ಲಿ ಹಾರಾಡುತ್ತಿದ್ದ ತ್ರಿವರ್ಣ ಬಲೂನ್‌ಗಳು, ರಾಷ್ಟ್ರ ಧ್ವಜದ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನೋಡುಗರ ಕಣ್ಮನ ಸೆಳೆದವು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು 100 ವರ್ಷಗಳು ಕಳೆಯುತ್ತಿವೆ. ಈ ಹತ್ಯಾಕಾಂಡ ಭಾರತ ಸ್ವಾತಂತ್ರ ಹೋರಾಟದಲ್ಲಿನ ಪ್ರಮುಖ ಅಧ್ಯಾಯ. ಈ ಸಂದರ್ಭದಲ್ಲಿ ದೇಶಕ್ಕಾಗಿ ಮಡಿದವರ ಸ್ಮರಣೆಗಾಗಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಭೀಕರ ದುರಂತವನ್ನು ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಹೆರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 600 ವಿದ್ಯಾರ್ಥಿಗಳು ಮನಮುಟ್ಟುವಂತೆ ನೃತ್ಯ ರೂಪಕದಲ್ಲಿ ಪ್ರದರ್ಶಿಸಿದ್ದು ಪ್ರೇಕ್ಷಕರು ಮುಗಿಲು ಮುಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೇಳುತ್ತಿದ್ದ ಭಾರತೀಯರ ಕೂಗಿಗೆ ಪ್ರತೀಕಾರವಾಗಿ ಬ್ರಿಟಿಷರು ಜಲಿಯನ್ ವಾಲಾಬಾಗ್‌ನಲ್ಲಿ ಹತ್ಯಾಕಾಂಡ ನಡೆಸಿದರು. ಈ ಕೃತ್ಯದಿಂದ ಸಾವಿರಾರು ಮಂದಿ ಮೃತಪಟ್ಟರು. ಇದರ ದೃಶ್ಯ ರೂಪವನ್ನು ಮಕ್ಕಳು ಪ್ರೇಕ್ಷಕರಿಗೆ ಕಟ್ಟಿಕೊಟ್ಟರು.

ಮಹಿಳೆಯರು ಮಕ್ಕಳು ಸೇರಿ ಸಾವಿರಾರು ಮಂದಿ ಬೈಸಾಕಿ ಹಬ್ಬ ಆಚರಿಸಲು ಸೇರಿದ್ದರು. ಇದೇ ವೇಳೆ ಬ್ರಿಟಿಷರ ವಿರುದ್ಧವೂ ಅಲ್ಲಿ ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸೈನಿಕರೊಂದಿಗೆ ಅಲ್ಲಿಗೆ ಬಂದ ಬ್ರಿಟಿಷ್ ಜನರಲ್ ಡಯರ್ ಸೈನಿಕರಿಗೆ ಗುಂಡಿನ ಮಳೆಗರೆಯುವಂತೆ ಆಜ್ಞೆಯಿತ್ತ. ಸುಮಾರು 15 ನಿಮಿಷಗಳ ಕಾಲ ನಡೆದ ಗುಂಡಿನ ಮಳೆಗೆ ನೂರಾರು ಮಂದಿ ಸ್ಥಳದಲ್ಲೆ ಬಲಿಯಾದರು. ಇದರಿಂದ ತಪ್ಪಿಸಿಕೊಳ್ಳಲೆಂದು ದಿಕ್ಕುಪಾಲಾಗಿ ಓಡಿದ ಕೆಲ ಜನರು ಅಲ್ಲಿದ ಬಾವಿಗೆ ಬಿದ್ದು ಪ್ರಾಣಬಿಟ್ಟರು ಹಾಗೂ ಕೆಲವರು ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ಬಿಟ್ಟ ದೃಶ್ಯವನ್ನು ಕಂಡು ಎಲ್ಲರೂ ಮೂಕ ಪ್ರೇಕ್ಷಕರಾದರು.

ಬೆಂಗಳೂರು ದಕ್ಷಿಣ ವಲಯ ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ 650 ಶಾಲಾ ಮಕ್ಕಳು ಭಾರತಾಂಬೆಯ ಮಡಿಲಿನ ಮಕ್ಕಳು ನಾವು ಎನ್ನುವಂತೆ ಅತ್ಯದ್ಭುತ ನೃತ್ಯದೊಂದಿಗೆ ಹೆಜ್ಜೆ ಹಾಕುವ ಮೂಲಕ ಭರತಖಂಡದ ಜನರ ತ್ಯಾಗವನ್ನು ಪ್ರದರ್ಶಿಸಿದರು. ಭಾರತೀಯ ನಾಗರಿಕರ ರಕ್ತದ ಕಣ ಕಣದಲ್ಲೂ ಸ್ವಾತಂತ್ರ ಸಂಭ್ರಮವನ್ನು ಎದ್ದು ಕಾಣುವಂತೆ ನೃತ್ಯ ರೂಪಕಕ್ಕೆ ಹೆಜ್ಜೆ ಹಾಕಿದ ಈ ಮಕ್ಕಳ ಮನಮೋಹಕ ನೃತ್ಯ ಎಲ್ಲರ ಮನಸೂರೆಗೊಂಡಿತು. ಸ್ವಾತಂತ್ರ ಒಂದು ರಾತ್ರಿ, ಒಂದು ದಿನ, ಒಂದು ವರ್ಷ, ಒಂದು ಶತಮಾನದಲ್ಲಿ ಬರಲಿಲ್ಲ. ಅದು ಹಲವಾರು ಶತಮಾನಗಳ ಕಾಲ ಎಡೆಬಿಡದೆ ನಡೆದ ಒಂದು ದೊಡ್ಡ ತ್ಯಾಗದ ಸಂಗ್ರಾಮ ಬಲಿದಾನ ಎಂಬಂತೆ ಶಾಲಾ ವಿದ್ಯಾರ್ಥಿಗಳು ಭಾರತಾಂಬೆಯ ಸ್ವಾತಂತ್ರದ ಹಬ್ಬವನ್ನು ನೃತ್ಯದ ಮೂಲಕ ಪ್ರದರ್ಶಿಸಿದರು. ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನ 26 ಸದಸ್ಯರು ಸುಮಾರು 12 ನಿಮಿಷಗಳ ಕಾಲ ಜಿಮ್ನಾಸ್ಟಿಕ್ಸ್ ಅನ್ನು ರೋಮಾಂಚಕಾರಿಯನ್ನಾಗಿ ಪ್ರದರ್ಶನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣರಾದರು. ವೆಲ್ಲಿಂಗ್‌ಟನ್ ಮದ್ರಾಸ್ ರೆಜಿಮೆಂಟಲ್ ಸೆಂಟರ್‌ನ 13 ಸದಸ್ಯರು ಸುಮಾರು 12 ನಿಮಿಷಗಳ ಕಾಲ ಪ್ರದರ್ಶಿಸಿದ ಕಲರಿಪಯಟ್ಟು ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ಗಮನ ಸೆಳೆದ ಪಥಸಂಚಲನ: 73 ನೆ ಸ್ವಾತಂತ್ರ್ಯ ದಿನಾಚರಣೆಗೆ ಮಾಣೆಕ್ ಷಾ ಪರೇಡ್ ಮೈದಾನ ಸಾಕ್ಷಿಯಾಯಿತು. ಸಮಾರಂಭದಲ್ಲಿ ಗಡಿ ಭದ್ರತಾ ಪಡೆ, ರಾಜ್ಯ ಪೊಲೀಸ್ ಪಡೆ ಹಾಗೂ ವಿದ್ಯಾರ್ಥಿ ತಂಡಗಳು ಚಿತ್ತಾಕರ್ಷಕ ಪಥ ಸಂಚಲನ ನಡೆಸಿದರೆ, ವಿವಿಧ ಶಾಲೆಗಳ ಮಕ್ಕಳು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಮುಖ್ಯಮಂತ್ರಿ ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದರು. ಅದೇ ವೇಳೆಗೆ ವಾಯುಪಡೆಯ ಹೆಲಿಕಾಪ್ಟರ್ ಆಗಸದಿಂದ ಗುಲಾಬಿ ಹೂ ದಳಗಳನ್ನು ಸುರಿಸಿತು. ನಂತರ ಗಡಿ ಭದ್ರತಾ ಪಡೆ, ರಾಜ್ಯ ಪೊಲೀಸ್ ಪಡೆ, ಗೋವಾ ಪೊಲೀಸ್ ಪಡೆ, ಎನ್‌ಸಿಸಿ, ಗೃಹ ರಕ್ಷಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಶ್ವಾನ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿ ತಂಡಗಳು ಚಿತ್ತಾಕರ್ಷಕ ಪಥ ಸಂಚಲನ ನಡೆಸಿ, ಮುಖ್ಯಮಂತ್ರಿಗೆ ಗೌರವ ವಂದನೆ ಸಲ್ಲಿಸಿದರು.

ಪ್ರಶಸ್ತಿ ವಿತರಣೆ: ಹೆರೋಹಳ್ಳಿ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 600 ಮಕ್ಕಳು ಪ್ರದರ್ಶಿಸಿದ ‘ಜಲಿಯನ್ ವಾಲಾಬಾಗ್ ಹತ್ಯಾಕಾಂಡ-1919’ ದೃಶ್ಯ ರೂಪಕಕ್ಕೆ ಪ್ರಥಮ ಬಹುಮಾನ ಹಾಗೂ ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 650 ಮಕ್ಕಳು ಪ್ರದರ್ಶಿಸಿದ ‘ಭಾರತಾಂಬೆಯ ಮಡಿಲಿನ ಮಕ್ಕಳು’ ದೃಶ್ಯ ರೂಪಕಕ್ಕೆ ದ್ವಿತೀಯ ಬಹುಮಾನ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News