ಪಾಕ್: ರಾಯಭಾರಿ ಅನುಪಸ್ಥಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2019-08-15 17:43 GMT
photo: India in Pakistan/Twitter

ಇಸ್ಲಾಮಾಬಾದ್, ಆ.14: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತದ 73ನೇ ಸ್ವಾತಂತ್ರೋತ್ಸವವನ್ನು ಗುರುವಾರ ಆಚರಿಸಲಾಯಿತು. ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಪಾಕಿಸ್ತಾನವು ಭಾರತೀಯ ರಾಯಭಾರಿ ಅಜಯ್ ಬಿಸಾರಿಯಾ ಅವರನ್ನು ಉಚ್ಚಾಟಿಸಿತ್ತು. ಅವರ ಅನುಪಸ್ಥಿತಿಯಲ್ಲಿ ರಾಯಭಾರಿ ಕಚೇರಿಯ ಉಸ್ತುವಾರಿ ಅಧಿಕಾರಿ ಗೌರವ್ ಅಹ್ಲುವಾಲಿಯಾ ಧ್ವಜಾರೋಹಣವನ್ನು ನೆರವೇರಿಸಿದ್ದಾರೆ.

‘‘ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸ್ವಾತಂತ್ರೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು. ಉಸ್ತುವಾರಿ ಅಧಿಕಾರಿ ಗೌರವ ಅಹ್ಲುವಾಲಿಯಾ ಧ್ವಜಾರೋಹಣ ನೆರವೇರಿಸಿದರು ಹಾಗೂ ರಾಷ್ಟ್ರಪತಿಯವರ ಸಂದೇಶವನ್ನು ಓದಿದರು’’ಎಂದು ಅಜಯ್ ಬಿಸಾರಿಯಾ ಟ್ವೀಟ್ ಮಾಡಿದ್ದಾರೆ ‘‘ ಭಾರತೀಯ ರಾಯಭಾರಿ ಕಚೇರಿಯಲ್ಲಿ ರಾಷ್ಟ್ರಧ್ವಜವು ಹಾರುತ್ತಲೇ ಇರುವುದು’’ ಎಂದಿದ್ದಾರೆ.

 ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕೂಡಾ ಸುಮಾರು 50 ಮಂದಿ ಪುರುಷರು, 9 ಮಂದಿ ಮಹಿಳೆಯರನ್ನು ಒಳಗೊಂಡ ತನ್ನ ಸಿಬ್ಬಂದಿ ಹಾಗೂ ಕೆಲವು ಮಕ್ಕಳು ಸ್ವಾತಂತ್ರ ದಿನಾಚರಣೆಯಲ್ಲಿ ಪಾಲ್ಗೊಂಡಿರುವ ಛಾಯಾಚಿತ್ರವನ್ನು ಪ್ರಕಟಿಸಿದೆ. ಜಮ್ಮುಕಾಶ್ಮೀರ ವಿಶೇಷ ಸಾನಮಾನ ರದ್ದತಿಯ ಬಳಿಕ ಭಾರತೀಯ ರಾಯಭಾರಿ ಕಚೇರಿಯ 13 ಮಂದಿ ಸಿಬ್ಬಂದಿ ಪಾಕ್ ಬಿಟ್ಟು ತೊರೆದಿದ್ದಾರೆಂಬ ವರದಿಗಳನ್ನು ಕೆಲವು ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಭಾರತದ ವಿದೇಶಾಂಗ ಸಚಿವಾಲಯ ಅದನ್ನು ನಿರಾಕರಿಸಿತ್ತು ಮತ್ತು ಬಕ್ರೀದ್ ಆಚರಣೆಗಾಗಿ ತನ್ನ ಕೆಲವು ಸಿಬ್ಬಂದಿ ತಾಯ್ನಾಡಿಗೆ ತೆರಳಿದ್ದರೆಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News