ಶಸ್ತ್ರಸಜ್ಜಿತ ದರೋಡೆಕೋರರೊಂದಿಗೆ ಹೋರಾಡಿದ್ದ ವೃದ್ಧ ದಂಪತಿಗೆ ವಿಶೇಷ ಶೌರ್ಯ ಪ್ರಶಸ್ತಿ

Update: 2019-08-16 07:45 GMT

ಚೆನ್ನೈ, ಆ.16: ಇತ್ತೀಚೆಗೆ ತಮಿಳುನಾಡಿನ ಕದಯಮ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣಿಪುರಂನ ಫಾರ್ಮ್ ಹೌಸ್‌ನಲ್ಲಿ ತಮ್ಮ ಕತ್ತುಹಿಸುಕಲು ಬಂದ ಶಸ್ತ್ರಸಜ್ಜಿತ ದರೋಡೆಕೋರರೊಂದಿಗೆ ಧೈರ್ಯದಿಂದ ಹೋರಾಟ ನಡೆಸಿದ್ದ ತಿರುನೆಲ್ವೇಲಿಯ ಹಿರಿಯ ದಂಪತಿಗೆ ತಮಿಳುನಾಡು ಸರಕಾರ ಗುರುವಾರ ವಿಶೇಷ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ತಮ್ಮ ತೋಟದ ಮನೆಗೆ ನುಗ್ಗಿದ್ದ ಕೈಯ್ಯಲ್ಲಿ ಮಚ್ಚು ಹಿಡಿದಿದ್ದ ಮುಸುಕುಧಾರಿ ದರೋಡೆಕೋರರೊಂದಿಗೆ ಚಪ್ಪಲಿ, ಪ್ಲಾಸ್ಟಿಕ್ ಸ್ಟೂಲ್ಸ್, ಕುರ್ಚಿಗಳು ಹಾಗೂ ಬಕೆಟ್‌ಗಳನ್ನು ಎಸೆದು ವೃದ್ಧ ದಂಪತಿ ದಿಟ್ಟ ಹೋರಾಟ ನೀಡಿ ಕಳ್ಳರನ್ನು ಓಡಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ವೈರಲ್ ಆಗಿತ್ತು.

 ಲಿಂಬೆಹಣ್ಣಿನ ಹೋಲ್‌ಸೇಲ್ ಡೀಲರ್ ಶನುಮಾವೆಲ್(70) ಹಾಗೂ ಅವರ ಪತ್ನಿ ಸೆಂಥಮರಾಯ್(65 ವರ್ಷ)ಅವರಿಗೆ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವಿಶೇಷ ಶೌರ್ಯ ಪ್ರಶಸ್ತಿ, 2 ಲಕ್ಷ ರೂ.ನಗದು ಹಾಗೂ ಚಿನ್ನದ ಪದಕವನ್ನು ಪ್ರದಾನಿಸಿದರು.

 ತಿರುನೆಲ್ವೇಲಿಯ ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರು ಈ ವೃದ್ಧ ದಂಪತಿಯನ್ನು ಸರಕಾರದ ಶೌರ್ಯ ಹಾಗೂ ಸಾಹಸ ಪ್ರಶಸ್ತಿಗೆ ಶಿಫಾರಸು ಮಾಡಿ ಹೆಸರುಗಳನ್ನು ಕಳುಹಿಸಿಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News