ನಮ್ಮ ಸರಕಾರದ ಯೋಜನೆಗಳನ್ನು ರದ್ದು ಮಾಡಿದರೆ ಸುಮ್ಮನೆ ಕೂರಲ್ಲ: ಡಿಕೆಶಿ ಎಚ್ಚರಿಕೆ

Update: 2019-08-16 12:50 GMT

ಬೆಂಗಳೂರು, ಆ. 16: ‘ಮುಖ್ಯಮಂತ್ರಿ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ಸರಕಾರದ ಯೋಜನೆಗಳನ್ನು ರದ್ದು ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ’ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಿದ್ದರಾಮಯ್ಯನವರೆ ರೈತರಿಗೆ ಅನುಕೂಲ ಆಗಲಿ ಎಂದು ಒಣ ಭೂಮಿ ಹೊಂದಿರುವ ರೈತರಿಗೆ 10 ಸಾವಿರ ರೂ.ನೀಡುವ ಯೋಜನೆ ಘೋಷಿಸಿದ್ದರು. ಆದರೆ, ಇದೀಗ ಯಡಿಯೂರಪ್ಪನವರು ಅದಕ್ಕೆ ಹೊಸಬಣ್ಣ ಹಾಕಿಕೊಂಡು ಜಾಹೀರಾತುಗಳಲ್ಲಿ ಪೋಸ್ ಕೊಡುತ್ತಿದ್ದಾರೆಂದು ಟೀಕಿಸಿದರು.

ಕದ್ದಾಲಿಕೆ ಮಾಡಿಲ್ಲ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ನಾವು ಯಾವ ಫೋನ್ ಟ್ಯಾಪ್ ಮಾಡಿಲ್ಲ. ಮಾಧ್ಯಮಗಳಲ್ಲಿ ಹೇಗೆ ಬಂದಿದೆಯೋ ಗೊತ್ತಿಲ್ಲ. ನನಗೆ ಗೊತ್ತಿರುವವರನ್ನು ವಿಚಾರಿಸಿದೆ. ಯಾವುದೇ ರೀತಿಯ ಟ್ಯಾಪಿಂಗ್ ಆಗಿಲ್ಲ. ನಾವು ಇಂತಹ ಕೆಲಸಕ್ಕೆ ಕೈಹಾಕಿಲ್ಲ. ಈ ಬಗ್ಗೆ ಯಾವುದೇ ತನಿಖೆ ಬೇಕಾದರೂ ಮಾಡಲಿ. ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟನೆ ನೀಡಿದರು

ಹಿಂದಿನ ಗೃಹ ಸಚಿವರು ರಾಜಕೀಯವಾಗಿ ಏನೇನೋ ಮಾತನಾಡಿದರೆ ಅದಕ್ಕೆ ಅರ್ಥ ಇಲ್ಲ. ಅವರಿಗೆ ಮುಂಚೆಯೇ ಗೊತ್ತಿದ್ದರೆ ದೂರು ನೀಡಿದ್ದರೆ ಆಗಲೇ ಏನು ಬೇಕಾದರೂ ಮಾಡಬಹುದಿತ್ತು. ಅವರಿಗೆ ರಾಜಕಾರಣ ಬೇಕಿತ್ತು, ಅದಕ್ಕೆ ಮಾತನಾಡುತ್ತಿದ್ದಾರೆ. ಈ ಹಿಂದೆ ನಮ್ಮ ಫೋನ್‌ ಟ್ಯಾಪ್ ಏನೇನಾಯ್ತು ಅಂತಾ ಪಟ್ಟಿ ಕೊಡ್ಲಾ? ನಮ್ಮ ಮೇಲೆ ದಾಳಿಯಾದಾಗ ಸುಮ್ಮನೆ ಬಂದಿದ್ರಾ? ಈಗ ಆದರ ಚರ್ಚೆ ಮಾಡೋದು ಬೇಡ. ಅವರಿಗೆ ಯಾವ ತನಿಖೆ ಬೇಕೋ ಮಾಡಲಿ ಎಂದು ಅವರು ಸವಾಲು ಹಾಕಿದರು.

ನಾನು ಜೂನಿಯರ್: ಕೆಪಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳ ನೇಮಕವನ್ನು ನಮ್ಮ ಹಿರಿಯ ನಾಯಕರು ನೋಡಿಕೊಳ್ಳುತ್ತಾರೆ. ನಾನು ಸೀನಿಯರ್ ಅಲ್ಲ, ನಾನೊಬ್ಬ ಜೂನಿಯರ್ ಶಾಸಕ. ಯಾರು ಅಧಿಕಾರದಲ್ಲಿದ್ದಾರೋ ಅವರನ್ನು ಕೇಳಿ. ಈಗ ಜನರ ಕೆಲಸ ಮಾಡೋಕೆ ಬಿಟ್ಟರೆ ಸಾಕು. ನನಗೆ ಯಾವ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ. ನನಗೆ ಯಾವ ಅರ್ಜೆಂಟ್ ಇಲ್ಲ. ಪ್ರಸ್ತುತ ಇರುವವರಿಗೆ ನಾನು ಸಹಕಾರ ನೀಡುತ್ತೇನೆ ಎಂದರು.

ದೆಹಲಿಯಿಂದ ಎಷ್ಟು ಗಿಫ್ಟ್ ತರ್ತಾರೆ ನೋಡೋಣ

‘ಕೊಡಗು, ಮಲೆನಾಡು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗಿದೆ. ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರತಿ ಮನೆಗೆ 5ಸಾವಿರ ರೂ., 5ಲಕ್ಷ ರೂ.ನೀಡುತ್ತೇನೆಂದು ಬಿಎಸ್‌ವೈ ಘೋಷಿಸಿದ್ದಾರೆ. ಅವರು ನುಡಿದಂತೆ ನಡೆದುಕೊಳ್ಳಲಿ. ಇದೀಗ ದೆಹಲಿಗೆ ಹೋಗಿದ್ದಾರೆ. ಅಲ್ಲಿಂದ ಎಷ್ಟು ಗಿಫ್ಟ್ ತರ್ತಾರೆ ನೊಡೋಣ. ಶಾಸಕರ ನಿಧಿಯಿಂದ ನಾನು 50ಲಕ್ಷ ರೂ.ಸಿಎಂ ಪರಿಹಾರ ನಿಧಿಗೆ ನೀಡುತ್ತೇನೆ.

-ಡಿ.ಕೆ. ಶಿವಕುಮಾರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News