ಪಕ್ಷಾಂತರಕ್ಕಿಂತ ಹೀನಾಯವಾದ ದೇಶದ್ರೋಹದ ಕೆಲಸ ಮತ್ತೊಂದಿಲ್ಲ: ನ್ಯಾ.ನಾಗಮೋಹನ್ ದಾಸ್

Update: 2019-08-16 13:25 GMT

ಬೆಂಗಳೂರು, ಆ.16: ಪಕ್ಷಾಂತರ ಮಾಡುವ ಮೂಲಕ ಮತದಾರರಿಗೆ ಮೋಸ ಮಾಡುವುದಕ್ಕಿಂತ ಹೀನಾಯವಾದ ದೇಶದ್ರೋಹದ ಕೆಲಸ ಮತ್ತೊಂದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದ್ದಾರೆ.

ಶುಕ್ರವಾರ ನಗರದ ಯುವಿಇಸಿ ಸಭಾಂಗಣದಲ್ಲಿ ಅಖಿಲ ಭಾರತ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಶಾಸಕರ ರಾಜೀನಾಮೆ ಮತ್ತು ಪಕ್ಷಾಂತರ ನಿಷೇಧ ಕಾಯ್ದೆ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಒಂದು ಪಕ್ಷದಿಂದ ಆಯ್ಕೆಯಾದ ಬಳಿಕ ಪಕ್ಷಕ್ಕೆ ಹಾಗೂ ಮತದಾರರಿಗೆ ದ್ರೋಹ ಬಗೆದು ಪಕ್ಷಾಂತರವಾಗುವುದು ಅಕ್ಷಮ್ಯ ಅಪರಾಧ. ಇದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ಕೃತ್ಯವಾಗಿದೆ. ಇಂತಹ ಅಪ್ರಜಾಪ್ರಭುತ್ವ ನಡೆಯನ್ನು ದೇಶದ ಎಲ್ಲರೂ ಖಂಡಿಸಬೇಕಾಗಿದೆ ಎಂದು ನುಡಿದರು.

ದೇಶದಲ್ಲಿ ದಿನದಿಂದ ದಿನಕ್ಕೆ ಪಕ್ಷಾಂತರ ಪ್ರಕರಣಗಳು ಅಧಿಕವಾಗುತ್ತಿದ್ದು, ಸ್ಥಳೀಯ ಸರಕಾರಗಳನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಒಂದು ಪಕ್ಷ ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಸಿಕ್ಕಿಂ, ಮಹಾರಾಷ್ಟ್ರ, ಗೋವಾ ಸೇರಿದಂತೆ ಹಲವು ಕಡೆಗಳಲ್ಲಿ ಶಾಸಕರನ್ನು ಖರೀದಿ ಮಾಡಿದ ಪ್ರಕರಣ ನಡೆದಿರುವುದನ್ನು ನೋಡಿದ್ದೇವೆ ಎಂದರು.

ಇತ್ತೀಚಿಗೆ ಕರ್ನಾಟಕದಲ್ಲಿ ನಡೆದ ಪಕ್ಷಾಂತರದ ಹಿಂದೆ ಸಾವಿರಾರು ಕೋಟಿ ರೂ.ಗಳ ಹಗರಣ ನಡೆದಿದೆ ಎನ್ನಿಸುತ್ತದೆ. ಅನರ್ಹರ, ನಾಲಾಯಕ್ ಜನರ ಅಧಿಕಾರದ ದಾಹ ಈ ಪ್ರಕರಣದ ಹಿಂದೆ ಇದೆ. ಅಕ್ರಮವಾಗಿ ಸಂಪಾದನೆ ಮಾಡಿರುವ ಶಾಸಕರನ್ನು ಸಿಬಿಐ, ಸಿಐಡಿ ದಾಳಿಯ ಹೆಸರಿನಲ್ಲಿ ಹೆದರಿಸಿ ಪಕ್ಷಾಂತರ ಮಾಡಿಸಿದ್ದಾರೆ. ದೇಶದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತೆ ನೋಡಿಕೊಂಡು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ಸ್ಥಾಪನೆ ಮಾಡುವ ಹುನ್ನಾರ ಇದಾಗಿದೆ ಎಂದು ಅವರು ಹೇಳಿದರು.

ಶಾಸಕರು ರಾಜೀನಾಮೆ ನೀಡಿರುವುದರ ಹಿಂದೆ ರಾಜೀನಾಮೆ ಕೊಡಿಸುವವರ ಪಾತ್ರ ಮುಖ್ಯವಾಗಿದೆ. ರಾಜೀನಾಮೆ ನೀಡಿದವರು ಎಷ್ಟು ಅಪರಾಧ ಮಾಡಿದ್ದಾರೋ ಅಷ್ಟೇ ರಾಜೀನಾಮೆ ಕೊಡಿಸಲು ಯತ್ನಿಸಿದವರು ಅಪರಾಧ ಮಾಡಿದ್ದಾರೆ. ಈ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ಯಾರು ಅಪರಾಧ ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು ಎಂದು ನಾಗಮೋಹನ್ ದಾಸ್ ತಿಳಿಸಿದರು.

ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿಲ್ಲ. ಉದ್ಯೋಗ, ಶಿಕ್ಷಣ, ಆರೋಗ್ಯದ ಕುರಿತು ಚರ್ಚೆಯಾಗಲಿಲ್ಲ. ಕೇವಲ ಹಣ, ಜಾತಿ, ಧರ್ಮ ಕೆಲಸ ಮಾಡಿದೆ. ಅದರ ಪರಿಣಾಮ ನಾವಿಂದು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಇತ್ತೀಚಿಗೆ ಮೂಲಭೂತವಾಗಿ, ಕೋಮುವಾದಿ ಶಕ್ತಿಗಳು ನಾವು ಏನು ತಿನ್ನಬೇಕು, ಹೇಗೆ ಬದುಕಬೇಕು, ಹೇಗೆ ನಡೆದುಕೊಳ್ಳಬೇಕು, ಯಾರನ್ನು ಮಾತನಾಡಬೇಕು ಎಂದು ಫರ್ಮಾನು ಹೊರಡಿಸುತ್ತಿದ್ದಾರೆ. ಮತ್ತೊಂದು ಕಡೆ ಸಂವಿಧಾನ ಪೂಜಿಸುತ್ತಾ ಅದರಲ್ಲಿನ ಒಂದು ಅಂಶ ಅನುಸರಿಸುತ್ತಿಲ್ಲ. ಅಂಬೇಡ್ಕರ್ ಹಾಗೂ ಗಾಂಧಿಗೆ ನಮಸ್ಕಾರ ಮಾಡುತ್ತಾರೆ, ಅವರ ತತ್ವಗಳನ್ನು ಅನುಸರಿಸುತ್ತಿಲ್ಲ ಎಂದು ಅವರು ದೂರಿದರು.

ಮಾಜಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ರಾಜೀನಾಮೆ ನೀಡಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಶಾಸಕರು ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ್ದು, ಮತದಾರರಿಗೆ ಸುಳ್ಳನ್ನು ಹೇಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿ ಫಾರಂ ಪಡೆಯುವ ವೇಳೆ ಆ ಪಕ್ಷವನ್ನು ಒಪ್ಪಿರುತ್ತೇವೆ. ಆಗಲೇ ಯಾಕೆ ಈ ಪಕ್ಷ ಸರಿಯಿದೆ, ಇಲ್ಲ ಎಂದು ನಿರ್ಧಾರ ಮಾಡುವುದಿಲ್ಲ. ಪಕ್ಷದಿಂದ ಗೆದ್ದ ಬಳಿಕ ಪಕ್ಷಕ್ಕೆ ದ್ರೋಹ ಬಗೆಯುವುದು ಸರಿಯಾ ಎಂದು ಪ್ರಶ್ನಿಸಿದರು.

ರಾಜೀನಾಮೆ ನೀಡುವುದು ಶಾಸಕರ ಹಕ್ಕು ಎಂದು ವಿತಂಡವಾದ ಮಾಡುತ್ತಾರೆ. ಆದರೆ, ಒಂದು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಬಳಿಕ ಮತ್ತೊಂದು ಚುನಾವಣೆವರೆಗೂ ಅವರು ಜತೆಗಿರಬೇಕು. ಮಧ್ಯದಲ್ಲಿ ರಾಜಕೀಯವೇ ಬೇಡವೆಂದು ನಿವೃತ್ತಿಯಾಗಲಿ. ಅದು ಬಿಟ್ಟು ಪಕ್ಷಾಂತರ ಮಾಡುವುದು ಸರಿಯಲ್ಲ. ಚುನಾವಣಾ ಪೂರ್ವದಲ್ಲಿಯೇ ಅಂತಹವರು ರಾಜೀನಾಮೆ ನೀಡಿ ಹೊರಹೋಗಬೇಕು ಎಂದರು.

ಇತ್ತೀಚಿಗೆ ರಾಜೀನಾಮೆ ನೀಡಿದ ಶಾಸಕರು ಸ್ವಾರ್ಥಕ್ಕಾಗಿ, ಅಧಿಕಾರದ ಆಸೆಗಾಗಿ ನೀಡಿದ್ದಾರೆ. ಸಂವಿಧಾನದ 10 ನೆ ಪರಿಚ್ಛೇದದಲ್ಲಿ ಹೇಳಿದ್ದಕ್ಕೂ, ಇವರು ಹೇಳುತ್ತಿರುವುದಕ್ಕೂ ಹೊಂದಾಣಿಕೆಯೇ ಇಲ್ಲ. ಕಾನೂನು ಪಾಲನೆ ಮಾಡಬೇಕಾದವರೇ, ಅದನ್ನು ಧಿಕ್ಕರಿಸುತ್ತಿರುವುದು ಖೇದಕರ. ಕಾನೂನುಗಳಿಗೆ ಗೌರವ ಕೊಡದಿದ್ದಲ್ಲಿ ಅದು ಇದ್ದು ವ್ಯರ್ಥವಾದಂತೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ, ವಕೀಲರ ಸಂಘದ ಜಿಲ್ಲಾ ಮುಖಂಡ ಶಿವಶಂಕರಪ್ಪ, ಸಂಘದ ಅಧ್ಯಕ್ಷ ಹರೀಂದ್ರ, ಪ್ರಧಾನ ಕಾರ್ಯದರ್ಶಿ ಟಿ.ಎನ್.ಶಿವಾರೆಡ್ಡಿ ಸೇರಿದಂತೆ ಮತ್ತಿತರರಿದ್ದರು.

ದೇಶದಲ್ಲಿ ಒಂದು ಪಕ್ಷವು ಎಲ್ಲ ವಿರೋಧ ಪಕ್ಷಗಳ ಮೇಲೆ ಮಾಡುತ್ತಿರುವ ಸಾಮೂಹಿಕ ದಾಳಿ ಪಕ್ಷಾಂತರ ಮಾಡಿಸುವುದಾಗಿದೆ. ಅವರ ಪರವಾಗಿರುವ ಅಥವಾ ಅವರನ್ನು ಬೆಂಬಲಿಸುವವರನ್ನು ಬಿಟ್ಟು ಎಲ್ಲರ ಮೇಲೆ ನಿರಂತರ ದಾಳಿ ನಡೆಸಲಾಗುತ್ತಿದೆ. ವಿರೋಧ ಪಕ್ಷದಲ್ಲಿಯೂ ಅವರದ್ದೇ ಬೀ ಟೀಮ್ ಇರುವಂತೆ, ಅವರು ಸೂಚಿಸುವವರೇ ನಾಯಕರಾಗಿರುವಂತೆ ನೋಡಿಕೊಳ್ಳುತ್ತಿದೆ.

- ಕೃಷ್ಣಭೈರೇಗೌಡ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News