ಯಡಿಯೂರಪ್ಪರ ಸ್ವಾಭಿಮಾನ ಶೂನ್ಯವಾಗಿದೆ: ವಿ.ಎಸ್.ಉಗ್ರಪ್ಪ

Update: 2019-08-16 13:35 GMT

ಬೆಂಗಳೂರು, ಆ.16: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿಂದ ದಿಲ್ಲಿ, ದಿಲ್ಲಿಯಿಂದ ಬೆಂಗಳೂರಿಗೆ ದಂಡಯಾತ್ರೆ ಮಾಡುತ್ತಿದ್ದಾರೆ. ಅವರ ಸ್ಥಿತಿ ನೋಡಿದರೆ ಗಾಬರಿಯಾಗುತ್ತದೆ. ಯಡಿಯೂರಪ್ಪನವರ ಸ್ವಾಭಿಮಾನ ಶೂನ್ಯವಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಟೀಕಿಸಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಏನಾದರೂ ಪರವಾಗಿಲ್ಲ ಅಧಿಕಾರ ಇದ್ದರೆ ಸಾಕು ಅಂತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರವಾಹದಿಂದ ಸುಮಾರು ಒಂದು ಲಕ್ಷ ಕೋಟಿ ರೂ.ಗಳಷ್ಟು ಹಾನಿಯಾಗಿದೆ. ಪರಿಹಾರ ಕೇಳಿದರೆ ನೋಟ್ ಪ್ರಿಂಟ್ ಮಾಡುವ ಮಿಷಿನ್ ಇಲ್ಲ ಅಂತಾರೆ. ಆದರೆ, ನೋಟ್ ಎಣಿಸುವ ಮಿಷಿನ್ ಅವರ ಮನೆಯಲ್ಲಿವೆ. ನೆರೆ ಸಂತ್ರಸ್ತರ ಪರವಾಗಿ ಯುದ್ಧದೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಯಬೇಕಿತ್ತು. ಆದರೆ, ಅದರ ಬಗ್ಗೆ ಗಮನವನ್ನೇ ಹರಿಸಿಲ್ಲ ಎಂದು ಅವರು ಟೀಕಿಸಿದರು.

ರಾಜ್ಯಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ ಹೋಗಿದ್ದಾರೆ. ಆದರೆ, ಇವರಿಬ್ಬರೂ ನಷ್ಟದ ಬಗ್ಗೆ ಕೇಂದ್ರಕ್ಕೆ ಯಾವ ಮಾಹಿತಿ ನೀಡಿಲ್ಲ. ಕನಿಷ್ಠ ಪಕ್ಷ ಮುಖ್ಯಮಂತ್ರಿಯಾದರೂ ನಷ್ಟವನ್ನು ಅಂದಾಜಿಸಬಹುದಿತ್ತು. ಆದರೆ, ಅವರೂ ನಷ್ಟದ ಅಂದಾಜು ಮಾಡಿಸಿಲ್ಲ. ಸಂಕಷ್ಟ ಹೇಳಲು ಬಂದ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾದಾಗ ಯುಪಿಎ ಸರಕಾರದ ನೇತೃತ್ವ ವಹಿಸಿದ್ದ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ರಾಯಚೂರಿಗೆ ಭೇಟಿ ನೀಡಿದ್ದರು. ಅಲ್ಲದೇ, ಸ್ಥಳದಲ್ಲೇ 1600 ಕೋಟಿ ರೂ.ಅನುದಾನ ಘೋಷಿಸಿದ್ದರು. ಆದರೆ, ಇಂದಿನ ಪರಿಸ್ಥಿತಿಯನ್ನು ವೀಕ್ಷಿಸಲು ಪ್ರಧಾನಿ ಮೋದಿ ಬಂದಿಲ್ಲ ಎಂದು ಅವರು ಟೀಕಿಸಿದರು.

2019-20ನೇ ಸಾಲಿನಲ್ಲಿ ಎನ್‌ಡಿಆರ್‌ಎಫ್ ಅಡಿಯಲ್ಲಿ ಮಹಾರಾಷ್ಟ್ರಕ್ಕೆ 2474.29 ಕೋಟಿ ರೂ.ಬಿಡುಗಡೆ ಮಾಡಿದ್ದರೆ, ನಮ್ಮ ರಾಜ್ಯಕ್ಕೆ 514.87 ಕೋಟಿ ರೂ.ಮಾತ್ರ ಕೊಟ್ಟಿದ್ದಾರೆ. ಆದರೆ, 25 ಬಿಜೆಪಿ ಸಂಸದರನ್ನು ಗೆಲ್ಲಿಸಿಕೊಟ್ಟ ನಮ್ಮ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಅಮಿತ್ ಶಾ, ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಜನರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೊಷಿಸಬೇಕು. ತಕ್ಷಣವೇ ಕೇಂದ್ರ ಸರಕಾರ ರಾಜ್ಯಕ್ಕೆ 5 ಸಾವಿರ ಕೋಟಿ ರೂ.ಬಿಡುಗಡೆ ಮಾಡಬೇಕು. ರಾಜ್ಯ ಸರಕಾರ ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದರೆ ನಾವು ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಉಗ್ರಪ್ಪ ಎಚ್ಚರಿಕೆ ನೀಡಿದರು.

ಬರ, ಪ್ರವಾಹದ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ, ರಾಜಕೀಯ ಲಾಭ ಪಡೆಯುವ ಕೆಲಸ ಮಾಡಲ್ಲ. ಜನರ ಕಷ್ಟದಲ್ಲಿ ಭಾಗಿಯಾಗುವುದಷ್ಟೇ ನಮ್ಮ ಗುರಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 21 ದಿನವಾದರೂ ಮಂತ್ರಿಮಂಡಲ ರಚನೆ ಮಾಡಲು ಹೈಕಮಾಂಡ್ ಬಿಡುತ್ತಿಲ್ಲ. ಇದನ್ನೆಲ್ಲ ಹೇಗೆ ಸಹಿಸಿಕೊಂಡಿದ್ದಾರೋ ಗೊತ್ತಿಲ್ಲ. ಅವರಿಗೆ ಸ್ವಲ್ಪನಾದರೂ ಸ್ವಾಭಿಮಾನ ಬೇಡವೇ? ನಾವಾಗಿದ್ದರೆ ಅಲ್ಲಿಯೇ ರಾಜೀನಾಮೆ ಬಿಸಾಕಿ ಬರುತ್ತಿದ್ದೆವು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News