​ಭದ್ರತಾ ಮಂಡಳಿ ರಹಸ್ಯ ಸಭೆ ಬಳಿಕ ಭಾರತ ಹೇಳಿದ್ದೇನು ?

Update: 2019-08-17 03:41 GMT

ವಿಶ್ವಸಂಸ್ಥೆ: ಜಮ್ಮು ಕಾಶ್ಮೀರ ಬಗೆಗಿನ ನಿರ್ಧಾರ ಸಂಪೂರ್ಣ ಆಂತರಿಕ ವಿಚಾರ ಎಂದು ಭಾರತ ಪ್ರತಿಪಾದಿಸಿದೆ ಹಾಗೂ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಕ್ರಮ ಬಗ್ಗೆ ಚರ್ಚಿಸಲು ನಡೆದ ಅಪರೂಪದ ರಹಸ್ಯ ಸಭೆ ಬಳಿಕ ಭಾರತ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಕಾಶ್ಮೀರ ವಿಚಾರದಲ್ಲಿ ರಹಸ್ಯ ಮಾತುಕತೆ ನಡೆಯಬೇಕು ಎಂದು ಪಾಕಿಸ್ತಾನ ಹಾಗೂ ಚೀನಾ ಆಗ್ರಹಿಸಿದ ಹಿನ್ನೆಲೆಯಲ್ಲಿ ಈ ವಿಶೇಷ ಸಭೆ ಕರೆಯಲಾಗಿತ್ತು.

"ಕಾಶ್ಮೀರದಲ್ಲಿ ನಿರ್ಬಂಧವನ್ನು ನಿಧಾನವಾಗಿ ಸಡಿಲಿಸಲು ಸರ್ಕಾರ ಬದ್ಧವಾಗಿದೆ. ಪರಿಸ್ಥಿತಿ ಸಹಜತೆಗೆ ಮರಳುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ" ಎಂದು ಭದ್ರತಾ ಮಂಡಳಿಯ ಭಾರತದ ರಾಯಭಾರಿ ಹಾಗೂ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಸ್ಪಷ್ಟಪಡಿಸಿದ್ದಾರೆ.

"ಗುಣಪಡಿಸುವುದಕ್ಕಿಂತ ರೋಗ ಬರದಂತೆ ತಡೆಯುವುದು ಲೇಸು; ಈಗ ಕೈಗೊಂಡಿರುವ ಕ್ರಮಗಳು ಅಹಿತಕರ ಘಟನೆ ಗಳಾಗದಂತೆ ತಡೆಯುವ ಸ್ವರೂಪದ್ದು. ಈ ಪ್ರಯತ್ನಗಳು ಕೆಲವೊಮ್ಮೆ ನಿರ್ಬಂಧಗಳಿಗೆ ಕಾರಣವಾಗುತ್ತವೆ. ಆದರೆ ಒಂದು ಸಾವು ಕೂಡಾ ಸಂಭವಿಸಿಲ್ಲ" ಎಂದು ಅಕ್ಬರುದ್ದೀನ್ ಸಮರ್ಥಿಸಿಕೊಂಡರು.

"ಇದರಿಂದ ಬಾಹ್ಯ ಜಗತ್ತಿನ ಮೇಲೆ ಯಾವ ಪರಿಣಾಮವೂ ಇಲ್ಲ; ಇತ್ತೀಚೆಗೆ ಭಾರತ ಸರ್ಕಾರ ಹಾಗೂ ಶಾಸನಸಭೆ ಕೈಗೊಂಡಿರುವ ನಿರ್ಧಾರ ಉತ್ತಮ ಆಡಳಿತವನ್ನು ಖಾತರಿಪಡಿಸುವುದು ಹಾಗೂ ಜಮ್ಮು ಕಾಶ್ಮೀರ ಜನತೆಗೆ ಸಾಮಾಜಿಕ- ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವುದು" ಎಂದು ವಿವರಿಸಿದರು.

ಪಾಕಿಸ್ತಾನ ಉಗ್ರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿ ಮಾತುಕತೆಗೆ ಬರಲಿ ಎಂದೂ ಅವರು ನೆರೆ ದೇಶವನ್ನು ಉದ್ದೇಶಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News