ಮಾರುತಿ ಸುಝುಕಿಯ 3 ಸಾವಿರಕ್ಕೂ ಅಧಿಕ ತಾತ್ಕಾಲಿಕ ಉದ್ಯೋಗಿಗಳು ಮನೆಗೆ

Update: 2019-08-17 05:25 GMT

ಹೊಸದಿಲ್ಲಿ, ಆ.17: ಆಟೋಮೊಬೈಲ್ ಉದ್ಯಮದಲ್ಲಿ ಬೇಡಿಕೆಗಳ ಕುಸಿತದ ಪರಿಣಾಮ ದೇಶದ ಅತ್ಯಂತ ದೊಡ್ಡ ಕಾರು ಉತ್ಪಾದಕ ಕಂಪೆನಿ ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್‌ನ(ಎಂಎಸ್‌ಐಎಲ್)3,000ಕ್ಕೂ ಅಧಿಕ ತಾತ್ಕಾಲಿಕ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

  ‘‘ತಾತ್ಕಾಲಿಕ ನೌಕರರ ಗುತ್ತಿಗೆಯನ್ನು ನವೀಕರಿಸುವುದಿಲ್ಲ. ಇದರಿಂದ ಖಾಯಂ ನೌಕರರ ಮೇಲೆ ಪರಿಣಾಮಬೀರುವುದಿಲ್ಲ. ಬೇಡಿಕೆಗಳು ಅಧಿಕವಿದ್ದಾಗ ಹೆಚ್ಚಿನ ಸಂಖ್ಯೆಯ ಗುತ್ತಿಗೆ ನೌಕರರನ್ನು ನಿಯೋಜಿಸಲಾಗುತ್ತದೆ. ಬೇಡಿಕೆ ಕಡಿಮೆಯಾದಾಗ ನೌಕರರನ್ನು ಕಡಿತಗೊಳಿಸಲಾಗುವುದು. ಮಾರುತಿ ಸುಝುಕಿಯಲ್ಲಿ ಸುಮಾರು 3,000 ತಾತ್ಕಾಲಿಕ ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಆಟೊಮೊಬೈಲ್ ಸೆಕ್ಟರ್ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಸೇಲ್ಸ್, ಸರ್ವಿಸ್, ವಿಮೆ, ಪರವಾನಗಿ, ಹಣಕಾಸು, ಡ್ರೈವರ್‌ಗಳು, ವಾಹನ ಬಿಡಿಭಾಗಗಳು, ಪೆಟ್ರೋಲ್ ಪಂಪ್‌ಗಳು, ಸಾರಿಗೆ ಹೀಗೆ ಹಲವು ವಿಭಾಗಗಳಲ್ಲಿ ಉದ್ಯೋಗ ಸೃಷ್ಟಿಸುತ್ತದೆ. ವಾಹನಗಳ ಕಡಿಮೆ ಮಾರಾಟ ಉದ್ಯೋಗಗಳ ಮೇಲೆ ದೊಡ್ಡ ಪರಿಣಾಮಬೀರುತ್ತದೆ’’ ಎಂದು ಎಂಎಸ್‌ಐಎಲ್ ಅಧ್ಯಕ್ಷ ಆರ್.ಸಿ.ಭಾರ್ಗವ ಹೇಳಿದ್ದಾರೆ.

‘‘ಸರಕಾರ ಏನಾದರೂ ಘೋಷಣೆ ಮಾಡಿ, ಸಕಾರಾತ್ಮಕ ಹೆಜ್ಜೆಗಳನ್ನು ಇಟ್ಟರೆ ಆಟೋಮೊಬೈಲ್ ಉದ್ಯಮದ ಈಗಿನ ಪರಿಸ್ಥಿತಿ ಸುಧಾರಿಸಬಹುದು. ಜಿಎಸ್‌ಟಿ ಕಡಿತ ಹಾಗೂ ಸೂಕ್ತ ಕ್ರಮ ಕೈಗೊಳ್ಳುವುದು ಸರಕಾರಕ್ಕೆ ಬಿಟ್ಟ ವಿಚಾರ’’ ಎಂದು ಭಾರ್ಗವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News