ರಾಜ್ಯದಲ್ಲಿ ನೆರೆ ಹಾವಳಿಯಿಂದ ಮೂರು ಸಾವಿರ ಗ್ರಾಮಗಳು ಮುಳುಗಡೆ: ಎಚ್.ಕೆ.ಪಾಟೀಲ್

Update: 2019-08-17 13:03 GMT

ಬೆಂಗಳೂರು, ಆ.17: ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಸೃಷ್ಟಿಯಾದ ನೆರೆ ಹಾವಳಿಯಿಂದಾಗಿ ಸುಮಾರು ಮೂರು ಸಾವಿರ ಗ್ರಾಮಗಳು ಮುಳುಗಡೆಯಾಗಿವೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 20 ಲಕ್ಷ ಎಕರೆ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ಭಾರೀ ಪ್ರಮಾಣದಲ್ಲಿ ಕಬ್ಬಿನ ಬೆಳೆ ಪ್ರದೇಶ ಹಾನಿಗೊಳಗಾಗಿದೆ. ಸುಮಾರು ಒಂದು ಲಕ್ಷ ಎಕರೆ ಕೃಷಿಯೋಗ್ಯ ಭೂಮಿ ಭೂ ಕೊರೆತಕ್ಕೊಳಗಾಗಿ ಕೃಷಿಗೆ ಯೋಗ್ಯವಿಲ್ಲದಂತಾಗಿದೆ ಎಂದರು.

ಬೆಳಗಾವಿ ವಿಭಾಗದಲ್ಲಿ 2 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಗ್ರಾಮಗಳನ್ನು ಪುನರ್ ನಿರ್ಮಿಸಬೇಕಿದೆ. ಅಂದಾಜು 100 ಜೀವ ಹಾನಿಯಾಗಿವೆ. ಗ್ರಾಮಸ್ಥರ ಕೃಷಿ ಉಪಕರಣಗಳು, ಗೃಹೋಪಯೋಗಿ ವಸ್ತುಗಳು, ವಿದ್ಯಾರ್ಥಿಗಳ ಪಠ್ಯಪುಸ್ತಕಗಳು, ಸಾರ್ವಜನಿಕ ಹಾಗೂ ಸರಕಾರಿ ಆಸ್ತಿಪಾಸ್ತಿಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿದೆ ಎಂದು ಅವರು ಹೇಳಿದರು.

ಕೃಷ್ಣಾ ಕೊಳ್ಳದ ಎಲ್ಲ ನದಿಗಳು ಮತ್ತು ಉಪನದಿಗಳು ತುಂಬಿ ಹರಿದ ಪರಿಣಾಮ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತೀವ್ರವಾದ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡು, ಲಕ್ಷಾಂತರ ಜನರು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಕೃಷ್ಣಾಕೊಳ್ಳದ ಕೃಷ್ಣಾ ನದಿ, ತುಂಗಾ, ಭದ್ರಾ, ಮಲಪ್ರಭಾ, ಘಟಪ್ರಭಾ, ದೂದ್ಗಂಗಾ, ವೇದಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ಮುಂತಾದ ನದಿಗಳು ಪ್ರವಾಹಕ್ಕೊಳಗಾದವು. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಸುಮಾರು 341 ಗ್ರಾಮಗಳು ಪ್ರವಾಹ ಪೀಡಿತವಾಗಿ ಎಲ್ಲ ತಾಲೂಕುಗಳು ಪ್ರವಾಹ ಪೀಡಿತವಾದವು ಎಂದು ಅವರು ತಿಳಿಸಿದರು.

22 ಜಿಲ್ಲೆಗಳ 103 ತಾಲೂಕುಗಳಲ್ಲಿ ಸುಮಾರು 2 ಕೋಟಿಯಷ್ಟು ಜನಸಂಖ್ಯೆ ಪ್ರವಾಹ ಪೀಡಿತವಾಗಿದ್ದಾರೆ. 10 ದಿನಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳ 13 ಜಲಾಶಯಗಳಲ್ಲಿ 1500 ಟಿಎಂಸಿ ಅಡಿಯಷ್ಟು ನೀರು ಹರಿದಿದೆ. ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬಂದು ಸಮೀಕ್ಷೆ ಮಾಡಿ ಹೋಗಿದ್ದರೂ ಈವರೆಗೆ ಬಿಡಿಗಾಸು ನೆರವು ಘೋಷಿಸದಿರುವುದು ಸರಿಯಲ್ಲ ಎಂದು ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರವು ಈ ಕೂಡಲೆ ರಾಜ್ಯಕ್ಕೆ ಐದು ಸಾವಿರ ಕೋಟಿ ರೂ.ಗಳ ಪರಿಹಾರವನ್ನು ಒದಗಿಸಬೇಕು. ಅಲ್ಲದೇ, ಈ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಅಗತ್ಯವಾದ ಅನುದಾನ, ಸಹಾಯ, ಸೌಲಭ್ಯ, ಸೌಕರ್ಯಗಳನ್ನು ಒದಗಿಸಬೇಕು. ರಾಜ್ಯ ಸರಕಾರವು ಗ್ರಾಮಗಳ ಪುನರ್ ನಿರ್ಮಾಣ ಹಾಗೂ ಪುನರ್ ವಸತಿಗಾಗಿ ಉನ್ನತ ಮಟ್ಟದ ಪ್ರಾಧಿಕಾರ ತಕ್ಷಣ ರಚಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರವಾಹ ಪೀಡಿತ ಪ್ರದೇಶಗಳ ಎಲ್ಲ ಗ್ರಾಮಗಳಲ್ಲಿ ಮುಂದಿನ ಒಂದು ವರ್ಷದವರೆಗೆ ತಾತ್ಕಾಲಿಕವಾಗಿ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡಲು ಕ್ಯಾಂಟೀನ್‌ಗಳನ್ನು ತಕ್ಷಣದಿಂದ ಪ್ರಾರಂಭಿಸಬೇಕು. ಭೂ ಕೊರೆತ ಉಂಟಾಗಿರುವ ಭೂಮಿಯನ್ನು ಮರಳಿ ಕೃಷಿ ಯೋಗ್ಯವಾಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸಂತ್ರಸ್ತರಿಗೆ ಉದ್ಯೋಗ ಭರವಸೆ ನೀಡುವ ತಾತ್ಕಾಲಿಕ ಯೋಜನೆಯನ್ನು ಪ್ರಾರಂಭಿಸಬೇಕು. ಇಂದಿನಿಂದ ಕನಿಷ್ಠ 4 ತಿಂಗಳು ಪ್ರವಾಹ ಪೀಡಿತ, ಉದ್ಯೋಗ ನಷ್ಟಹೊಂದಿದ ಜನರಿಗೆ ಒಂದು ಕುಟುಂಬಕ್ಕೆ ಕನಿಷ್ಠ 25 ಸಾವಿರ ರೂ.ಗಳ ಧನ ಸಹಾಯ ಒದಗಿಸಬೇಕು ಎಂದು ಎಚ್.ಕೆ.ಪಾಟೀಲ್ ಒತ್ತಾಯಿಸಿದರು.

ಸಿಇಟಿ ಶುಲ್ಕ ಪ್ರಸಕ್ತ ಸಾಲಿನಲ್ಲಿ ಭರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವ ನೆರೆಪೀಡಿತ ಪ್ರದೇಶಗಳ ಪಾಲಕರಿಗೆ ತಮ್ಮ ಮಕ್ಕಳ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಬೇಕು. ಪ್ರವಾಹದಲ್ಲಿ ಕೊಚ್ಚಿಹೋಗಿರುವ ಶೈಕ್ಷಣಿಕ ದಾಖಲೆಗಳನ್ನು ತಕ್ಷಣ ಒದಗಿಸಲು ಎಸೆಸೆಲ್ಸಿ ಬೋರ್ಡ್, ಪಿಯುಸಿ ಬೋರ್ಡ್ ಮತ್ತು ಎಲ್ಲ ವಿಶ್ವವಿದ್ಯಾಲಯಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಬೇಕು ಎಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಶಿವಾನಂದ ಪಾಟೀಲ್, ಉಮಾಶ್ರೀ, ಆರ್.ಬಿ.ತಿಮ್ಮಾಪುರ್ ಉಪಸ್ಥಿತರಿದ್ದರು.

ರಾಜ್ಯದಲ್ಲಿ ನೆರೆ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಕೆಪಿಸಿಸಿ ವತಿಯಿಂದ ಎರಡು ತಂಡಗಳನ್ನು ರಚನೆ ಮಾಡಲಾಗಿತ್ತು. ಈ ಪೈಕಿ ಒಂದು ತಂಡದ ನೇತೃತ್ವ ನನಗೆ ವಹಿಸಲಾಗಿತ್ತು. ನಮ್ಮ ತಂಡವು ಬೆಳಗಾವಿ, ಅಥಣಿ, ನಿಪ್ಪಾಣಿ, ರೋಣ, ಗೋಕಾಕ್, ಹಾವೇರಿ, ಹಾನಗಲ್, ಶಿರಸಿ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಗ್ರ ವರದಿ ತಯಾರಿಸಿದ್ದೇವೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ರವಾನಿಸಿದ್ದೇವೆ.

-ಎಚ್.ಕೆ.ಪಾಟೀಲ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News