ಬಡವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಪ್ರಯತ್ನ: ಪ್ರೆಸಿಡೆನ್ಸಿ ಫೌಂಡೇಷನ್ ಅಧ್ಯಕ್ಷೆ ಕೌಸರ್ ನಿಸಾರ್

Update: 2019-08-17 13:07 GMT

ಬೆಂಗಳೂರು, ಆ.17: ಬಡವರು ಹಾಗೂ ಪ್ರತಿಭಾವಂತ ಯುವ ಸಮೂಹವು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು, ವಿವಿಧ ಬಗೆಯ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು ಎರಡು ಸಾವಿರ ಯುವಕ, ಯುವತಿಯರಿಗೆ ಇದರಿಂದ ಪ್ರಯೋಜನವಾಗಿದೆ ಎಂದು ಪ್ರೆಸಿಡೆನ್ಸಿ ಫೌಂಡೇಷನ್ ಅಧ್ಯಕ್ಷೆ ಕೌಸರ್ ನಿಸಾರ್ ಹೇಳಿದರು.

ನಗರದ ರಿಚ್ಮಂಡ್ ಟೌನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲ ಪದವೀಧರರಿಗೆ ಇವತ್ತು ಉದ್ಯೋಗ ಸಿಗುವ ಅವಕಾಶಗಳು ಇಲ್ಲ. ಈ ಹಿನ್ನೆಲೆಯಲ್ಲಿ ಕೌಶಲ್ಯ ತರಬೇತಿಗಳತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದರು.

ಟ್ಯಾನರಿ ರಸ್ತೆಯಲ್ಲಿರುವ ನಮ್ಮ ತರಬೇತಿ ಕೇಂದ್ರದಲ್ಲಿ ಎರಡು ವರ್ಷಗಳಲ್ಲಿ ಸುಮಾರು ಎರಡು ಸಾವಿರ ಯುವಕ, ಯುವತಿಯರಿಗೆ ಮೊಬೈಲ್ ದುರಸ್ತಿ, ಹೊಲಿಗೆ, ಬ್ಯೂಟಿಶಿಯನ್, ಎಲೆಕ್ಟ್ರಿಕಲ್ ಸೇರಿದಂತೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಗಿದೆ. ಸುಮಾರು ಶೇ.90ರಷ್ಟು ಮಂದಿಗೆ ಉದ್ಯೋಗಾವಕಾಶಗಳು ಲಭ್ಯವಾಗಿವೆ ಎಂದು ಅವರು ಹೇಳಿದರು.

ಪ್ರಮುಖವಾಗಿ ಮಹಿಳೆಯರು, ಅದರಲ್ಲೂ ವಿಚ್ಛೇದಿತೆ, ವಿಧವೆಯರು ಸಮಾಜದಲ್ಲಿ ಎಲ್ಲರಂತೆ ಸ್ವಾಭಿಮಾನದ ಬದುಕು ನಡೆಸಬೇಕು ಎಂಬುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಕೊಳಚೆ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ, ಅಗತ್ಯವಿರುವವರಿಗೆ ನೆರವಿನ ಹಸ್ತ ಚಾಚುತ್ತಿದ್ದೇವೆ ಎಂದು ಕೌಸರ್ ನಿಸಾರ್ ತಿಳಿಸಿದರು.

ಯಾವುದೇ ಜಾತಿ, ಧರ್ಮದ ಆಧಾರದಲ್ಲಿ ನೆರವು ನೀಡುತ್ತಿಲ್ಲ. ಮಾನವೀಯತೆಯ ದೃಷ್ಟಿಯಿಂದ ಎಲ್ಲ ವರ್ಗಗಳ ಬಡವರಿಗೂ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ. ಭವಿಷ್ಯದಲ್ಲಿ ಒಂದು ಅನಾಥಾಶ್ರಮ ಆರಂಭಿಸಿ, ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಆಹಾರ ಒದಗಿಸುವ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಸಲ್ಮಾನ್ ನಿಸಾರ್ ಅಹ್ಮದ್ ಮಾತನಾಡಿ, ದೇಶದ ಯುವ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಅಗತ್ಯವಿದೆ. ಇವತ್ತು ಯುವಕರಿಗೆ ಶಿಕ್ಷಣ, ಉದ್ಯೋಗದ ಕುರಿತು ಸರಿಯಾದ ಮಾರ್ಗದರ್ಶನ ನೀಡಬೇಕಿದೆ. ಅವರನ್ನು ಸಶಕ್ತರನ್ನಾಗಿಸಿದರೆ, ದೇಶ ಸಶಕ್ತಗೊಳ್ಳುತ್ತದೆ ಎಂದರು.

ನಮ್ಮ ಫೌಂಡೇಷನ್ ವತಿಯಿಂದ ಉದ್ಯೋಗ ಮೇಳಗಳ ಆಯೋಜನೆ, ಕೌಶಲ್ಯ ತರಬೇತಿ, ಶಿಕ್ಷಣದ ಜೊತೆಗೆ ಉದ್ಯೋಗ ಕಲ್ಪಿಸುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಈ ನಿಟ್ಟಿನಲ್ಲಿ ಹಾಕಿಕೊಂಡಿದ್ದೇವೆ. ಅದೇ ರೀತಿ ಪಕ್ಷದ ಚೌಕಟ್ಟಿನಲ್ಲಿಯೂ ಯುವಕರ ಸಬಲೀಕರಣಕ್ಕಾಗಿ ಶ್ರಮಿಸುತ್ತೇವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೆಸಿಡೆನ್ಸಿ ಶೈಕ್ಷಣಿಕ ಸಂಸ್ಥೆಗಳ ಉಪಾಧ್ಯಕ್ಷ ಸುಹೇಲ್ ಅಹ್ಮದ್, ಯು.ಟಿ.ಝುಲ್ಫಿಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News