ಘನ ತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ಕಾರ್ಪೋರೇಷನ್ ರಚಿಸಿ: ಸುಭಾಷ್ ಆಡಿ

Update: 2019-08-17 13:27 GMT

ಬೆಂಗಳೂರು, ಆ.17: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ಕಾರ್ಪೋರೇಷನ್ ಸ್ಥಾಪಿಸಿ ಕಸದ ಸಮಸ್ಯೆಯನ್ನು ತಡೆಯಬಹುದು ಎಂದು ಎನ್‌ಜಿಟಿ ರಾಜ್ಯಮಟ್ಟದ ಘನ ತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷ ಸುಭಾಷ್ ಆಡಿ ಸಲಹೆ ನೀಡಿದ್ದಾರೆ.

ಶನಿವಾರ ನಗರದ ಬಿಬಿಎಂಪಿ ಕೆಂಪೇಗೌಡ ಸಭಾಂಗಣದಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶ ಹಾಗೂ ಘನ ತ್ಯಾಜ್ಯ ನಿರ್ವಹಣೆ ಕುರಿತಂತೆ ನಡೆದ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ಗೋವಾ ಹಾಗೂ ಆಂಧ್ರದಲ್ಲಿ ಕಸ ನಿರ್ವಹಣೆಗೆ ಪತ್ಯೇಕ ಕಾರ್ಪೋರೇಷನ್ ರಚಿಸಿದ್ದಾರೆ. ಇದರ ಮೂಲಕ ತ್ಯಾಜ್ಯದ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಅರ್ಧಕ್ಕಿಂತ ಹೆಚ್ಚು ಘನತ್ಯಾಜ್ಯವು ರಾಜಧಾನಿಯಲ್ಲಿ ಉತ್ಪಾದನೆಯಾಗುತ್ತಿದೆ. ಯಾವುದೇ ಕಾರಣಕ್ಕೂ ಘನತ್ಯಾಜ್ಯವನ್ನು ಕ್ವಾರಿಗಳಿಗೆ ಹಾಕಬಾರದು ಎಂದು ಎನ್‌ಜಿಟಿ ಬಿಬಿಎಂಪಿಗೆ ತಿಳಿಸಿದೆ. ಅಲ್ಲದೆ, ಹಸಿರು ನ್ಯಾಯಧೀಕರಣದಲ್ಲಿ ಒಂದು ವ್ಯಾಜ್ಯ ನಡೆಯುತ್ತಿದ್ದು, ಅದು ಬಾಗಲೂರು ಕ್ವಾರಿಯಲ್ಲಿ ಇರುವ ಕಸ ತೆಗೆದು ಅದಕ್ಕೆ ಜೈವಿಕ ಪರಿಹಾರ ನೀಡಬೇಕೆಂಬುದು ಎಂದು ಎಚ್ಚರಿಕೆ ನೀಡಿದರು.

ವಾರ್ಡ್‌ನಲ್ಲೇ ಹಸಿ ಕಸವನ್ನು ಕಾಂಪೋಸ್ಟ್ ಮಾಡುವುದು ಸರಿಯಾದ ಕ್ರಮ. ಈಗಾಗಲೇ 3-4 ವಾರ್ಡ್‌ಗಳಲ್ಲಿ ಜನ ಮುಂದೆ ಬಂದು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಜನರಲ್ಲಿ ಕಸ ನಿರ್ವಹಣೆಯಲ್ಲಿ ಅರಿವು ಇದೆ. ಇದರಿಂದಾಗಿ ಪಾಲಿಕೆ ಸದಸ್ಯರು ಕೈ ಜೋಡಿಸಬೇಕು. ಹಿಂದಿನ ಬೆಂಗಳೂರನ್ನು ನಾವು ಪಡೆಯಬೇಕಾದರೆ ನಿಮ್ಮೆಲ್ಲರ ಜವಾಬ್ದಾರಿ ಬಹಳ ಮುಖ್ಯ. ವಿಶ್ವ ಭೂಪಟದಲ್ಲಿ ನಗರಕ್ಕೆ ವಿಶೇಷ ಸ್ಥಾನಮಾನವಿದೆ. ಅದನ್ನು ಉಳಿಸಿಕೊಳ್ಳಬೇಕಾದರೆ ಕಸ ನಿರ್ವಹಣೆ ಬಹಳ ಅವಶ್ಯಕ. ನಗರ ಸ್ವಚ್ಛವಾದರೆ ಮಾತ್ರ ನಗರದ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದು ಹೇಳಿದರು.

ವಾರ್ಡ್ ಮಟ್ಟದಲ್ಲೇ ಹಸಿ ಕಸವನ್ನು ಕಾಂಪೋಸ್ಟ್ ಮಾಡುವಲ್ಲಿ ಪಾಲಿಕೆ ಸದಸ್ಯರ ಸಹಕಾರ ಅವಶ್ಯಕವಿದೆ. ಬರೀ ಕಸ ಸಾಗಾಣಿಕೆಗೆ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಹಣವೂ ವ್ಯಯವಾಗುವುದಿಲ್ಲ, ಕಸದ ನಿರ್ವಹಣೆಯೂ ಆಗುತ್ತದೆ ಎಂದು ಸಲಹೆ ನೀಡಿದರು.

ನಗರದಲ್ಲಿ 2,800 ಟನ್ ತ್ಯಾಜ್ಯ ವಿಂಗಡನೆಗೆ ಅನುವು ಮಾಡಿಕೊಡಲಾಗಿದೆ. 7 ಕಸ ವಿಂಗಡನಾ ಕೇಂದ್ರಗಳಿವೆ. ಆದರೆ ಕೆಲವು ಕೇಂದ್ರಗಳಲ್ಲಿ 350 ಟನ್ ತ್ಯಾಜ್ಯ ವಿಂಗಡನೆ ಬದಲು 70 ಟನ್ ಅಷ್ಟೇ ಕಸ ವಿಂಗಡನೆಯಾಗುತ್ತಿದೆ. ಇದರಿಂದಾಗಿ ಕಸ ನಿರ್ವಹಣೆಗೆ ಮಾಡುತ್ತಿರುವ ವೆಚ್ಚ ವ್ಯರ್ಥ. ಪೌರ ಕಾರ್ಮಿಕರಿಂದ ಹಿಡಿದು ಮೇಯರ್, ಸದಸ್ಯರು ಹಾಗೂ ಅಧಿಕಾರಿಗಳವರೆಗೂ ಕಸ ವಿಂಗಡೆನೆಯ ಮಹತ್ವವನ್ನು ಅರಿತು ಜನರನ್ನು ಜಾಗೃತರನ್ನಾಗಿಸಬೇಕು ಎಂದು ಹೇಳಿದರು.

ಘನ ತ್ಯಾಜ್ಯ ವಿಲೇವಾರಿ ಹೇಗೆ ನಡೆಯಬೇಕು ಎಂದು ಕಾನೂನಿನಲ್ಲಿ ನಿಯಮವಿದೆ. 2010ರ ನಿಯಮ ಬದಲಾಯಿಸಿ ಕೇಂದ್ರ ಸರಕಾರ 2016ರಲ್ಲಿ ಹೊಸ ನಿಯಮವನ್ನು ಮಾಡಿದೆ. ಇದು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಎಷ್ಟು ತ್ಯಾಜ್ಯವನ್ನು ಸಂಗ್ರಹಿಸಬೇಕು. ಹೇಗೆ ವಿಲೇವಾರಿ ಮಾಡಬೇಕು ಹಾಗೂ ನಿರ್ವಹಿಸಬೇಕು ಎಂಬ ಅಂಶಗಳನ್ನು ಒಳಗೊಂಡಿದೆ ಎಂದು ವಿವರಿಸಿದರು.

ಖಾಲಿ ಜಮೀನಿನಲ್ಲಿ ಕಸ ಹಾಕಿದರೆ ಮಾಲಕನಿಗೆ ಬಿಬಿಎಂಪಿ 25 ಸಾವಿರ ರೂ. ದಂಡ ವಿಧಿಸುತ್ತಿದೆ. ಅದನ್ನು ತ್ವರಿತವಾಗಿ ನಿರ್ವಹಿಸಬೇಕು. ಕೇವಲ ನೋಟಿಸ್ ನೀಡದೆ, ದಂಡವನ್ನೂ ವಿಧಿಸಬೇಕು. ಆಗ ಸಾರ್ವಜನಿಕರಲ್ಲಿ ಭಯ ಬರುತ್ತದೆ. ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದರೂ ಉಪಯೋಗಿಸುತ್ತಿದ್ದಾರೆ. ಅಂತವರಿಗೂ ದಂಡ ಹಾಕುವ ಮೂಲಕ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಡೆಯಬೇಕು ಎಂದು ಅವರು ತಿಳಿಸಿದರು.

ಮಿಶ್ರ ಮಾಡಬೇಡಿ

ಸಾರ್ವಜನಿಕರು ವಿಂಗಡಿಸಿ ಕೊಟ್ಟ ಕಸವನ್ನು ಸಾಗಾಣೆ ಮಾಡುವಾಗ ಮಿಶ್ರ ಮಾಡಬೇಡಿ. ಮಿಶ್ರ ಮಾಡಿದರೆ ಸಾರ್ವಜನಿಕರ ಪ್ರಯತ್ನ ವಿಫಲವಾಗುತ್ತದೆ. ಇದು ಕಾನೂನಾತ್ಮಕವಾಗಿ ತಪ್ಪು. ಬಿಬಿಎಂಪಿ ಎಲ್ಲ ವಾರ್ಡ್ ಸದಸ್ಯನೂ ‘ನಮ್ಮ ಕಸ ನಮ್ಮ ಜವಾಬ್ದಾರಿ’ ನನ್ನ ‘ವಾರ್ಡ್ ನನ್ನ ಜವಾಬ್ದಾರಿ’ ಎಂದು ಕೆಲಸ ನಿರ್ವಹಿಸಬೇಕು. ನಗರದಲ್ಲಿ ಪ್ರತಿ 750 ಮೀಟರ್‌ಗೊಬ್ಬ ಪೌರಕಾರ್ಮಿಕರನ್ನು ನೇಮಿಸಿ, ಅದರ ಜವಾಬ್ದಾರಿಯನ್ನು ವಹಿಸಬೇಕು ಎಂದು ಸುಭಾಷ್ ಆಡಿ ಸಲಹೆ ನೀಡಿದರು.

ಬಿಡಿಎಯಲ್ಲಿ ಕಸ ವಿಲೇವಾರಿ

ನಗರದಲ್ಲಿ ಎಲ್ಲೆಲ್ಲಿ ಬಿಡಿಎ ಇದೆಯೋ, ಅಲ್ಲೆಲ್ಲ ಕಸ ವಿಲೇವಾರಿಗೆ ಸ್ಥಳ ಮೀಸಲಿಡಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ನಮ್ಮ ಜೊತೆ ಕೈ ಜೋಡಿಸಬೇಕು. ಚೀನಾದಲ್ಲಿ ಕೇವಲ 10 ಎಕರೆಯಲ್ಲೇ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ. ಆದರೆ, ನಾವು ನೂರಾರು ಎಕರೆ ಇದ್ದರೂ ವಿಫಲವಾಗಿದ್ದೇವೆ ಎಂದು ವಿರೋಧ ಪಕ್ಷದ ಮುಖಂಡ ಪದ್ಮನಾಭ ರೆಡ್ಡಿ ಹೇಳಿದರು.

ಸಂತ್ರಸ್ಥ ಗ್ರಾಮ ದತ್ತು

ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಸಂತ್ರಸ್ಥರಾಗಿರುವ ನಿರಾಶ್ರಿತರಿಗೆ ನೆರವು ನೀಡಲು ಬಿಬಿಎಂಪಿ ವತಿಯಿಂದ 1,000 ಒಂಟಿ ಮನೆಗಳನ್ನು ನಿರ್ಮಿಸಬೇಕು ಹಾಗೂ 5 ರಿಂದ 10 ಕೋಟಿ ರೂ.ಗಳಷ್ಟು ಪರಿಹಾರವನ್ನು ಸಿಎಂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸಲ್ಲಿಸಬೇಕು. ಉತ್ತರ ಕರ್ನಾಟಕದ ಯಾವುದಾದರೊಂದು ಗ್ರಾಮವನ್ನು ದತ್ತು ಪಡೆದು, ಪುನರ್ ನಿರ್ಮಾಣ ಮಾಡಬೇಕು.

-ನರಸಿಂಹ ನಾಯಕ್, ಪಾಲಿಕೆ ಸದಸ್ಯರು

ತಮಿಳುನಾಡಿನ ವೆಲ್ಲೂರಿನಲ್ಲಿ ಘನ ತ್ಯಾಜ್ಯದ ನಿರ್ವಹಣೆ ಅಚ್ಚುಕಟ್ಟಾಗಿ ಆಗುತ್ತಿದೆ. ಏಕೆಂದರೆ ಅಲ್ಲಿ ಕಸದ ಸಂಗ್ರಹ ಎರಡು ಬಾರಿ ಆಗುತ್ತದೆ. ಅಲ್ಲದೆ, ಹಸಿ ಕಸದಿಂದ ಬಯೋ ಮಿಥೇನ್ ತಯಾರಿಸಿ ಸರಕಾರಿ ವಾಹನಗಳಿಗೆ ಉಪಯೋಗಿಸಲಾಗುತ್ತಿದೆ.

-ನ್ಯಾ.ಸುಭಾಷ್ ಆಡಿ, ಘನ ತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News