ಝೀರೋ ವೇಸ್ಟ್ ಕ್ಯಾಂಪಸ್ ಎಲ್ಲರಿಗೂ ಮಾದರಿಯಾಗಬೇಕು: ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2019-08-17 14:19 GMT

ಬೆಂಗಳೂರು, ಆ.17: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಉತ್ಪತ್ತಿ ಆಗುವ ಕಸವನ್ನು ಆವರಣದಲ್ಲೇ ಸಂಸ್ಕರಿಸಿ ಝೀರೋ ವೇಸ್ಟ್ ಕ್ಯಾಂಪಸ್ ಮಾಡಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ತಿಳಿಸಿದರು.

ಶನಿವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಆವರಣವನ್ನು ಝೀರೋ ವೇಸ್ಟ್ ಕ್ಯಾಂಪಸ್ ಮಾಡುವ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಅವರು, ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಘೋಷಣೆಯೊಂದಿಗೆ ಇನ್ನು ಮುಂದೆ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಉತ್ಪತ್ತಿ ಆಗುವ ಹಸಿ ಕಸವನ್ನು ಆವರಣದಲ್ಲೇ ಸಂಸ್ಕರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಬಿಬಿಎಂಪಿ ಕೇಂದ್ರ ಕಚೇರಿ, ಕೌನ್ಸಿಲ್ ಕಟ್ಟಡ ಸೇರಿ ನಾಲ್ಕು ಕಟ್ಟಡಗಳು, ಉದ್ಯಾನ, ಕ್ಯಾಂಟೀನ್ ಹಾಗೂ ರಸ್ತೆಯಿಂದ ನಿತ್ಯ 50 ಟನ್ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದನ್ನು ಸಂಸ್ಕರಿಸಿ ಗೊಬ್ಬರವನ್ನಾಗಿ ಪರಿವರ್ತಿಸಲು 70 ಕೆ.ಜಿ ಸಾಮರ್ಥ್ಯದ ಎರಡು ಕಾಂಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಕಸ ಸಂಗ್ರಹಿಸುವ ಪೌರ ಕಾರ್ಮಿಕರಿಗೆ ಹಸಿ, ಒಣ ಕಸವನ್ನು ಯಾವ ರೀತಿ ಸಂಗ್ರಹಿಸಬೇಕು ಎಂಬುದರ ಬಗ್ಗೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಈಗಾಗಲೇ ತರಬೇತಿ ನೀಡಿದ್ದಾರೆ. ಎಲ್ಲಾ ಕಚೇರಿ ಸಿಬ್ಬಂದಿಗಳಿಗೂ ಕಸ ವಿಂಗಡಿಸಿ ಕೊಡುವಂತೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನು ಕಚೇರಿ ಆವರಣದಲ್ಲಿರುವ ದೇವಸ್ಥಾನದಲ್ಲಿ ಸಂಗ್ರಹವಾಗುವ ಹೂವನ್ನು ಅಲ್ಲೇ ಸಂಸ್ಕರಿಸಲು ಒಂದು ಕಾಂಪೋಸ್ಟರ್ ಅನ್ನು ಅಳವಡಿಸಲಾಗಿದೆ. ಮರದ ಎಲೆ ಸಂಸ್ಕರಿಸಲು ಎರಡು ಕಾಂಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಇನ್ನು ಕಚೇರಿ ಆವರಣದಲ್ಲಿ ಸಂಗ್ರಹವಾಗುವ ಒಣಕಸವನ್ನು ಚಿಂದಿ ಆಯುವವರು ವಾರಕ್ಕೊಮ್ಮೆ ಒಣ ಕಸ ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ಯಲ್ಲಿದ್ದಾರೆ ಎಂದರು.

ಪಾಲಿಕೆ ಆವರಣದಲ್ಲಿ 134 ವಿಭಾಗೀಯ ಕಚೇರಿಗಳಿದ್ದು, ಎಲ್ಲಾ ಕಚೇರಿಗಳಿಗೂ ಹಸಿ ತ್ಯಾಜ್ಯ ಸಂಗ್ರಹಕ್ಕೆ ಹಸಿರು ಬಣ್ಣದ ಡಬ್ಬಿ, ಒಣ ಕಸ ಸಂಗ್ರಹಕ್ಕೆ ನೀಲಿ ಬಣ್ಣದ ಡಬ್ಬಿಗಳನ್ನು ವಿತರಿಸಲಾಗುವುದು. ಜೊತೆಗೆ ಎಲ್ಲಾ ಶೌಚಾಲಯಗಳಲ್ಲೂ ಸ್ಯಾನಿಟರಿ ಕಸ ಸಂಗ್ರಹಕ್ಕೆ ಕೆಂಪು ಬಣ್ಣದ ಡಬ್ಬಿ ಇಡಲಾಗುವುದು. ಆ ಬಳಿಕ ಎಲ್ಲ ಕಚೇರಿಗಳಲ್ಲೂ ಕಕಸವನ್ನು ಕಡ್ಡಾಯವಾಗಿ ವಿಂಗಡಿಸಿಯೇ ಕೊಡಬೇಕು ಎಂದರು.

ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಹಸಿ, ಒಣ, ಸ್ಯಾನಿಟರಿ ಕಸವನ್ನು ವಿಂಗಡಣೆ ಮಾಡಲು ಎಲ್ಲಾ ಕಚೇರಿಗಳಿಗೆ ಡಬ್ಬಿಗಳನ್ನು ವಿತರಿಸಲಾಗುತ್ತಿದೆ. ಈ ಬಗ್ಗೆ ಕಚೇರಿಗಳಿಗೆ ಕರಪತ್ರ ನೀಡಿ ಅರಿವು ಮೂಡಿಸುತ್ತಿದ್ದು, ಕಚೇರಿ ಮುಖ್ಯಸ್ಥರಿಗೆ ಸಮರ್ಪಕವಾಗಿ ಕಸ ವಿಂಗಡಣೆ ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ. ಕಸ ವಿಂಗಡಿಸಿ ಕೊಡದಿದ್ದರೆ ಕಚೇರಿ ಮುಖ್ಯಸ್ಥರುಗಳನ್ನೇ ನೇರ ಹೊಣೆಗಾರರನ್ನಾಗಿಸಿ, ಅವರ ಮೇಲೆ ಸೂಕ್ತ ಕ್ರಮ ವಹಸಿಲಾಗುವುದು ಎಂದು ತಿಳಿಸಿದರು.

ಪಾಲಿಕೆ ಆವರಣದಲ್ಲಿ ಝೀರೋ ವೇಸ್ಟ್ ಕ್ಯಾಂಪಸ್ ಅಳವಡಿಸಿ ಎಲ್ಲರಿಗೂ ಮಾದರಿಯಾಗಿ, ಆ ಬಳಿಕ ಎಲ್ಲಾ ಕಚೇರಿಗಳಲ್ಲೂ ಜೀರೋ ವೇಸ್ಟ್ ಕ್ಯಾಂಪಸ್ ಅಳವಡಿಸಲು ಸೂಚನೆ ನೀಡಲಾಗುವುದು. ಕಚೇರಿಗಳಲ್ಲಿ ಮಾತ್ರವಲ್ಲದೆ ಮನೆಗಳಲ್ಲೂ ಕಸ ಸಂಸ್ಕರಣೆ ಮಾಡಿದರೆ ನಗರದಲ್ಲಿ ಕಸದ ಸಮಸ್ಯೆ ನಿವಾರಣೆಯಾಗಲು ಸಾಧ್ಯ.

-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News