ಸಂವಿಧಾನದ ಆಶಯ ಕಲ್ಯಾಣ ರಾಜ್ಯ ಸ್ಥಾಪನೆ: ಎಚ್.ಎನ್.ನಾಗಮೋಹನ್‌ದಾಸ್

Update: 2019-08-17 14:41 GMT

ಬೆಂಗಳೂರು, ಆ.17: ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಗ್ರಂಥವಾಗಿದ್ದು, ನಮ್ಮ ಸಂವಿಧಾನದ ಆಶಯವೇ ಕಲ್ಯಾಣ ರಾಜ್ಯ ಸ್ಥಾಪನೆ ಮಾಡುವುದಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಜ್ಯೋತಿ ಬಸು ಭವನದಲ್ಲಿ ದಲಿತ ಹಕ್ಕುಗಳ ಸಮಿತಿ ವತಿಯಿಂದ ಆಯೋಜಿಸಿದ್ದ ‘ಸಂವಿಧಾನದ ಆಶಯ ಮತ್ತು ದಲಿತರು’ ವಿಷಯಾಧಾರಿತ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶತಮಾನಗಳಿಂದ ನಿರಂತರವಾಗಿ ಶೋಷಣೆಗೊಳಪಟ್ಟವರಿಗೆ ರಕ್ಷಣೆಯಾಗಿ ಸಂವಿಧಾನ ರೂಪಗೊಂಡಿದೆ. ವಿಶ್ವದ ಎಲ್ಲ ರಾಷ್ಟ್ರಗಳಲ್ಲಿರುವ ಸಂವಿಧಾನಗಳಿಗಿಂತ ನಮ್ಮ ಸಂವಿಧಾನ ಅತ್ಯಂತ ಬಲಿಷ್ಠವಾದುದಾಗಿದೆ. ಸಂವಿಧಾನ ರಚನೆಯ ಮೂಲ ಉದ್ದೇಶ ಕಲ್ಯಾಣ ರಾಜ್ಯ ನಿರ್ಮಾಣ ಮಾಡುವುದಾಗಿದೆ ಎಂದು ಹೇಳಿದರು.

ದೇಶದ ಎಲ್ಲ ಜಾತಿ, ಧರ್ಮ, ವರ್ಗದವರಿಗೂ ಆಹಾರ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಜನಸಾಮಾನ್ಯರು ಬದುಕಲು ಬೇಕಾದ ವ್ಯವಸ್ಥೆ ರೂಪಿಸುವುದೇ ಕಲ್ಯಾಣ ರಾಜ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಎಲ್ಲವೂ ಖಾಸಗೀಕರಣವಾಗುತ್ತಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧದಾಗಿದೆ ಎಂದರು.

ಇಂದಿಗೂ ನಮ್ಮಲ್ಲಿ ಜಾತಿ-ಜಾತಿಗಳ ನಡುವೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಅಸಮಾನತೆ ತಾಂಡವವಾಡುತ್ತಿದೆ. ಇದಕ್ಕೆ ಸಂವಿಧಾನದಲ್ಲಿ ಪರಿಹಾರವಿದ್ದು, ಪ್ರತಿಯೊಬ್ಬರೂ ಅದನ್ನು ಓದಬೇಕು. ನಮ್ಮಲ್ಲಿರುವ ಜಾತಿ ಅಸಮಾನತೆಯನ್ನು ಅರ್ಥೈಸಿಕೊಳ್ಳಬೇಕು. ಇಲ್ಲದಿದ್ದರೆ ಸಂವಿಧಾನ ನಮಗೆ ನೀಡಿರುವ ಸಾಮಾಜಿಕ ಸಮಾನತೆಯ ಅರ್ಥ ತಿಳಿಯುವುದಿಲ್ಲ ಎಂದು ಅವರು ಹೇಳಿದರು.

ಭಾರತದಲ್ಲಿ ಶತಮಾನಗಳಿಂದಲೂ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆಗಾಗಿ ನಿರಂತರವಾದ ಚಳವಳಿ ನಡೆಯುತ್ತಿದೆ. ರಾಜರು, ಪಾಳೆಗಾರರು, ಚಕ್ರವರ್ತಿಗಳ ಕೈಯಲ್ಲಿದ್ದ ಅಧಿಕಾರವಿಂದು ಜನಪ್ರತಿನಿಧಿಗಳ ಕೈ ಸೇರಿದೆ. ಆದರೂ, ನಮ್ಮ ಸ್ಥಿತಿ ಹಿಂದಿನದಕ್ಕಿಂತ ಭಿನ್ನವಾಗಿ ಬದಲಾವಣೆ ಕಂಡಿಲ್ಲ ಎಂದು ನಾಗಮೋಹನ್ ದಾಸ್ ತಿಳಿಸಿದರು.

ಪ್ರಜಾಪ್ರಭುತ್ವ ದೇಶದಲ್ಲಿ ಕಾನೂನು ರೂಪಿಸುವ, ಅದನ್ನು ಜಾರಿ ಮಾಡುವ ಹಾಗೂ ಕಾನೂನು ವಿರೋಧಿಸುವವರನ್ನು ಶಿಕ್ಷಿಸುವ ಅಧಿಕಾರವಿಂದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ನಿರ್ವಹಣೆ ಮಾಡುತ್ತಿದೆ. ಆದರೆ, ಇವೂ ಕೂಡ ಸರಿಯಾಗಿ ಕಾರ್ಯ ನಿರ್ವಹಣೆ ಮಾಡದಿದ್ದರಿಂದ ನಿಯಮಾನುಸಾರವಾಗಿ ಕಾರ್ಯನಿರ್ವಹಿಸಲು ನಿಯಮಗಳು ರೂಪಿಸಿದ್ದು, ನೀತಿ, ನಿಯಮಗಳಿರುವ ಗ್ರಂಥವೇ ನಮ್ಮ ಸಂವಿಧಾನವಾಗಿದೆ ಎಂದು ನುಡಿದರು.

ಡಿಎಚ್‌ಎಸ್‌ನ ರಾಜ್ಯ ಸಹ ಸಂಚಾಲಕ ಬಿ.ರಾಜಶೇಖರ ಮೂರ್ತಿ ಮಾತನಾಡಿ, ದಲಿತರ ಸಬಲೀಕರಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರತಿವರ್ಷ ಸಾವಿರಾರು ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ನೀಡಲಾಗುತ್ತಿದೆ. ಆದರೆ, ಅದನ್ನು ಅರ್ಹರಿಗೆ ತಲುಪದೇ ರಾಜಕಾರಣಿಗಳ ನಡುವೆಯೇ ಹರಿದು ಹಂಚಿಕೆಯಾಗುತ್ತಿದೆ ಎಂದು ದೂರಿದರು.

ಪ್ರಧಾನಿ ಮೋದಿ ಭಾರತ ವಿಶ್ವಗುರುವಾಗುತ್ತಿದೆ ಎನ್ನುತ್ತಾರೆ. ಆದರೆ, ಇಂದಿಗೂ ದೇಶದಲ್ಲಿ ಗಂಭೀರ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಸ್ವಚ್ಛ ಭಾರತದ ಜಾಹೀರಾತಿಗೆ 500 ಕೋಟಿ ಖರ್ಚು ಮಾಡುವ ಅವರು, ನೈಜ ಸ್ವಚ್ಛಗಾರರಾದ ಪೌರ ಕಾರ್ಮಿಕರ ವಸತಿ ನಿರ್ಮಾಣಕ್ಕೆ 40 ಕೋಟಿ ಖರ್ಚು ಮಾಡಿದ್ದಾರೆ. ದೇಶದಲ್ಲಿ ಉದ್ಯಮಿಗಳು ಬೆಳೆಯುತ್ತಿದ್ದು, ದಲಿತರು ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ವನಜಾ, ಡಿ.ಮಾದೇಶ್, ಪಿ.ನಾಗರಾಜ್ ಉಪಸ್ಥಿತರಿದ್ದರು.

ದೇಶದಲ್ಲಿ ಸಂವಿಧಾನ ಜಾರಿಯಾದ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಯಾಗದಿದ್ದರೂ ಸ್ವಲ್ಪಮಟ್ಟಿಗೆ ಬದಲಾವಣೆ ಕಂಡಿದೆ. ಬಡತನ, ಜಾತಿ ತಾರತಮ್ಯ, ಶೋಷಣೆ ಸೇರಿದಂತೆ ಹಲವಾರು ಸಂಗತಿಗಳಲ್ಲಿ ತಕ್ಕಮಟ್ಟಿಗೆ ಮಾರ್ಪಾಡು ದೇಶ ಕಂಡಿದೆ. ಹೀಗಾಗಿ, ಪ್ರತಿಯೊಬ್ಬರೂ ಸಂವಿಧಾನ ಅರ್ಥ ಮಾಡಿಕೊಳ್ಳಬೇಕು, ಅದರ ಆಶಯಗಳನ್ನು ತಿಳಿಯಬೇಕು.

-ಎಚ್.ಎನ್.ನಾಗಮೋಹನ್‌ದಾಸ್, ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News