ರಾಜಧಾನಿ ಬೆಂಗಳೂರಿನಲ್ಲಿ ಹೈ ಅಲರ್ಟ್: ಎಲ್ಲೆಡೆ ಪೊಲೀಸ್ ಕಣ್ಗಾವಲು

Update: 2019-08-17 14:53 GMT

ಬೆಂಗಳೂರು, ಆ.17: ವಿಧ್ವಂಸಕ ಕೃತ್ಯಗಳು ನಡಯುವ ಸಾಧ್ಯತೆ ಹಿನ್ನೆಲೆ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು, ಮನ್ನೆಚ್ಚರಿಕಾ ಕ್ರಮವಾಗಿ ಭದ್ರತೆಯನ್ನು ಬಿಗಿಗೊಳಿಸಿ ತಪಾಸಣೆ ತೀವ್ರಗೊಳಿಸಲಾಗಿದೆ.

ನಗರ ವ್ಯಾಪ್ತಿಯ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾಲ್‌ಗಳು, ವಿಧಾನಸೌಧ, ವಿಕಾಸಸೌಧ, ರಾಜಭವನ ಇನ್ನಿತರ ಪ್ರಮುಖ ಸರಕಾರಿ ಕಟ್ಟಡಗಳಿಗೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.ಜತೆಗೆ ಅನುಮಾನಾಸ್ಪದ ವ್ಯಕ್ತಿ ಹಾಗೂ ವಸ್ತುಗಳ ತಪಾಸಣೆ ನಡೆಸಿ ಪರಿಸ್ಥಿತಿಯ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.

ದಿಢೀರ್ ಸಭೆ: ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸಲು ಡಿಸಿಪಿಗಳೊಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆ ನಡೆಸಿ, ಕಟ್ಟೆಚ್ಚರ ಕ್ರಮಗಳ ಕುರಿತು ಮಾಹಿತಿ ಪಡೆದರು.

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಆದ್ಯತೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚೆತ್ತುಕೊಳ್ಳಲು ಕೆಎಸ್‌ಆರ್‌ಪಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಸಿಎಆರ್ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರ ಕಾರ್ಯವೈಖರಿ, ಜವಾಬ್ದಾರಿಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಭಾಸ್ಕರ್ ರಾವ್ ಹೇಳಿದರು.

ಗರುಡ ಸಿಬ್ಬಂದಿ: ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳು ಸೇರಿದಂತೆ 20 ಗರುಡ ಸಿಬ್ಬಂದಿ ನಗರದ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ಮಾಡಿದರು. ಎಲ್ಲ ಕಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲ ರಸ್ತೆಗಳಲ್ಲೂ ಸಹ ನಾಕಾಬಂಧಿ ಮಾಡಿ ನಗರಕ್ಕೆ ಬರುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

ಬಾಕ್ಸ್...

ರೌಡಿಗಳ ಪರೇಡ್

ಯಾವುದೇ ರೀತಿಯ ಅಹಿತಕರ ಕೃತ್ಯಗಳಲ್ಲಿ ಭಾಗಿಯಾಗದಂತೆ ನಗರದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ರೌಡಿಗಳಿಗೆ ಎಚ್ಚರಿಕೆ ನೀಡಿದರು. ನಗರದಲ್ಲಿ ಹೈ ಅಲರ್ಟ್ ಹಿನ್ನೆಲೆ ಶನಿವಾರ ನಗರ ವ್ಯಾಪ್ತಿಯ 300ಕ್ಕೂ ಅಧಿಕ ರೌಡಿಶೀಟರ್‌ಗಳ ಪರೇಡ್ ನಡೆಸಿದ ಅವರು, ರೌಡಿ ಚಟುವಟಿಕೆಗಳ ಕುರಿತು ಮಾಹಿತಿ ಪಡೆದು, ಅಪರಾಧ ಕೃತ್ಯಗಳಿಂದ ದೂರು ಇರುವಂತೆ ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News