ಸ್ವಾತಂತ್ರ್ಯವು ಭಿನ್ನ ಚಿಂತನೆಯ ವಿರುದ್ಧ ದ್ವೇಷಕಾರುವ ಸಾಧನವಾಗಿ ಬಿಟ್ಟಿದೆ: ಜಸ್ಟಿಸ್ ಚಂದ್ರಚೂಡ್ ಖೇದ

Update: 2019-08-18 11:29 GMT

ಮುಂಬೈ, ಆ.18: “ಸ್ವಾತಂತ್ರ್ಯವು ವಿಭಿನ್ನ ಚಿಂತನೆ ಹೊಂದಿರುವ, ವಿಭಿನ್ನ ಆಹಾರ ಶೈಲಿಯ ಹೊಂದಿರುವ ಹಾಗೂ ವಿಭಿನ್ನ ನಂಬಿಕೆಗಳನ್ನು ಹೊಂದಿರುವವರ ವಿರುದ್ಧ ದ್ವೇಷ ಕಾರುವ ಸಾಧನವಾಗಿ ಬಿಟ್ಟಿದೆ'' ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಖೇದ ವ್ಯಕ್ತಪಡಿಸಿದ್ದಾರೆ.

ಮುಂಬೈಯಲ್ಲಿ ‘ಇಮ್ಯಾಜಿನಿಂಗ್ ಫ್ರೀಡಂ ಥ್ರೂ ಆರ್ಟ್’ ಎಂಬ ವಿಷಯದ ಮೇಲೆ ಲಿಟರೇಚರ್ ಲೈವ್ ಸ್ವಾತಂತ್ರ್ಯ ದಿನದ ಭಾಷಣ ನೀಡಿದ ಅವರು ಸರ್ವರನ್ನೊಳಗೊಂಡ ಸಮಾಜವನ್ನು ನಿರ್ಮಿಸುವಲ್ಲಿ ಕಲೆಯ ಮಹತ್ವವನ್ನು ವಿವರಿಸಿದರು.

“ಕಲಾ ಕ್ಷೇತ್ರ ಎಲ್ಲಾ ಆಯಾಮಗಳಿಂದಲೂ ಸ್ವಾತಂತ್ರ್ಯ ಹೊಂದುವುದು ಮಾನವತೆಯ ಪ್ರಗತಿಗೆ ಅಗತ್ಯವಿದೆ. ಆದರೆ ಈ ಸ್ವಾತಂತ್ರ್ಯವನ್ನು ಸರಕಾರ, ಜನರು ಅಥವಾ ಸ್ವತಃ ಆ ಕಲೆಯೇ  ಅದುಮಿದಾಗ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ'' ಎಂದು ಅವರು ಅಭಿಪ್ರಾಯ ಪಟ್ಟರು.

“ಯಥಾಸ್ಥಿತಿಗೆ ಸವಾಲೊಡ್ಡುವ ಕಲೆ ಸರಕಾರಕ್ಕೆ ತೀವ್ರಗಾಮಿ ಧೋರಣೆ ಹೊಂದಿರುವಂತೆ ಕಂಡರೂ  ಕಲೆಯನ್ನು ಅಮುಕಲು ಅದೊಂದು ಕಾರಣವಾಗಲು ಸಾಧ್ಯವಿಲ್ಲ. ಇಂದು ಜಗತ್ತಿನಲ್ಲಿ ಹೆಚ್ಚು ಅಸಹಿಷ್ಣುತೆಯನ್ನು ನಾವು ನೋಡುತ್ತಿದ್ದೇವೆ. ತುಳಿತಕ್ಕೊಳಗಾದ ಸಮುದಾಯಗಳಿಗೆ ಕಲೆ ಒಂದು ದನಿಯೊದಗಿಸುತ್ತದೆ. ಇಂತಹ ಕಲೆಯನ್ನು ನಾವು ಸಂಭ್ರಮಿಸಬೇಕು ಹಾಗೂ ಸಂರಕ್ಷಿಸಬೇಕು'' ಎಂದು ಅವರು ಹೇಳಿದರು.

 ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ಸುಮಾರು 50 ನಿಮಿಷ ಭಾಷಣ ಮಾಡಿದ ಜಸ್ಟಿಸ್ ಚಂದ್ರಚೂಡ್, “ತುಳಿತಕ್ಕೊಳಗಾದ ಸಮುದಾಯಗಳು ನೈಜ ಅನುಭವಗಳನ್ನು ಮುಖ್ಯವಾಹಿನಿ ಕಲೆಯಿಂದ ಸಾಮಾನ್ಯವಾಗಿ ಹೊರಗಿಡಲಾಗಿದೆ. ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲ ಉನ್ನತ ಗುಂಪುಗಳು  ಹೊಂದಿರುವ ಪ್ರಾಬಲ್ಯದಿಂದ ಹೀಗಾಗಿರಬಹುದು'' ಎಂದು ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News