ನೂತನ ಸಂಪುಟ: ಸಚಿವರ ಪಟ್ಟಿ ನಾಳೆ ಅಂತಿಮ, ಮಂಗಳವಾರ ಪ್ರಮಾಣ

Update: 2019-08-18 12:08 GMT

ಬೆಂಗಳೂರು, ಆ. 18: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಸಮ್ಮತಿಸಿದ್ದು, ನೂತನ ಸಚಿವರಾಗಿ ಯಾರ್ಯಾರು ಸೇರ್ಪಡೆಯಾಗಲಿದ್ದಾರೆಂಬುದು ನಾಳೆ(ಆ.19) ಅಂತಿಮಗೊಳ್ಳಲಿದೆ ಎಂದು ಗೊತ್ತಾಗಿದೆ.

ರವಿವಾರ ಡಾಲರ್ಸ್‌ ಕಾಲನಿಯಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸಂಪುಟಕ್ಕೆ ಯಾರ್ಯಾರು ಸೇರ್ಪಡೆಯಾಗಲಿದ್ದಾರೆಂದು ಸೋಮವಾರ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಮಂಗಳವಾರ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮೊದಲ ಹಂತದಲ್ಲಿ 13 ಅಥವಾ 14 ಮಂದಿ ನೂತನ ಸಚಿವರಾಗಿ ಸಂಪುಟ ಸೇರ್ಪಡೆಯಾಗಲಿದ್ದಾರೆ. ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಹೊಸಬರಿಗೆ ಅವಕಾಶ ಸಾಧ್ಯತೆ: ಮೊದಲ ಹಂತದಲ್ಲಿ 13ರಿಂದ 14 ಮಂದಿ ನೂತನ ಸಚಿವ ಸಂಪುಟ ಸೇರ್ಪಡೆ ಅವಕಾಶ ಕಲ್ಪಿಸಿದೆ. 2008ರಿಂದ 2013ರ ಅವಧಿಯಲ್ಲಿ ಸಚಿವರಾಗಿದ್ದವರನ್ನು ಹೊರತುಪಡಿಸಿ ಹೊಸಮುಖಗಳಿಗೆ ಸಂಪುಟದಲ್ಲಿ ಅವಕಾಶ ನೀಡಲು ಹೈಕಮಾಂಡ್ ಒಲವು ಹೊಂದಿದೆ ಎಂದು ಗೊತ್ತಾಗಿದೆ.

ಸಿಎಂ ಯಡಿಯೂರಪ್ಪ ನೇತೃತ್ವದ ನೂತನ ಸಚಿವ ಸಂಪುಟಕ್ಕೆ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಡಾ.ಅಶ್ವಥ್ ನಾರಾಯಣ, ಸುನೀಲ್ ಕುಮಾರ್, ಎಸ್.ಅಂಗಾರ, ಜೆ.ಸಿ.ಮಾಧುಸ್ವಾಮಿ, ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ಆರ್. ಅಶೋಕ್, ಕೆ.ಎಸ್.ಈಶ್ವರಪ್ಪ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿ ಹೊಸಮುಖಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅರಿಯಲಿ: ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸದೆ ನೆರೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಅರಿತುಕೊಳ್ಳಬೇಕು. ಕೇಂದ್ರದಿಂದ ಪರಿಹಾರದ ಮೊತ್ತ ಬಿಡುಗಡೆ ಬಳಿಕ ಅವರಿಗೆ ಗೊತ್ತಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು. ಸಂತ್ರಸ್ತರ ಪ್ರತಿ ಕುಟುಂಬಕ್ಕೆ 10 ಸಾವಿರ ರೂ.ಪರಿಹಾರ ನೀಡುವುದು ವಿಳಂಬ ಆಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಯಡಿಯೂರಪ್ಪ, ಶೀಘ್ರವೇ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲು ಸೂಚಿಸುತ್ತೇನೆ. ಯಾವುದೇ ಕಾರಣಕ್ಕೂ ಸಂತ್ರಸ್ತರು ಧೃತಿಗೆಡಬಾರದು ಎಂದು ಕೋರಿದರು.

ರಾಜ್ಯದಲ್ಲಿ ನೆರೆ ಹಾನಿ ವಿಚಾರವಾಗಿ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಜೊತೆ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಇನ್ನೊಂದೆರಡು ಮೂರು ದಿನದಲ್ಲಿ ಪರಿಹಾರ ಕಾರ್ಯ ಚುರುಕಾಗಲಿದೆ. ರಾಜ್ಯದ ಪ್ರವಾಹ ಪೀಡಿತ ಪ್ರದೇಶಕ್ಕೆ ಮತ್ತೆ ಭೇಟಿ ಕೊಡುತ್ತೇನೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News