ನಗು-ಅಳುವಿಗೆ ಅಂತರಂಗವೇ ಮೂಲ: ಶಿಕ್ಷಣ ತಜ್ಞ ಗುರುರಾಜ ಕರಜಗಿ

Update: 2019-08-18 13:00 GMT

ಬೆಂಗಳೂರು, ಆ.18: ನಮ್ಮ ನಗು- ಅಳು, ಸಂತೋಷ ಇವುಗಳೆಲ್ಲಕ್ಕೂ ನಮ್ಮ ಅಂತರಂಗದ ಭಾವಗಳೇ ಕಾರಣ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಅಭಿಪ್ರಾ ಯಪಟ್ಟರು.

ರವಿವಾರ ನಗರದ ರೆಸಿಡೆನ್ಸಿ ರಸ್ತೆಯ ಸ್ವಪ್ನ ಬುಕ್ ಹೌಸ್‌ನಲ್ಲಿ ಸಿಕ್ರೆಟ್ ಆಫ್ ಹೈಯರ್ ಕಾನ್ಸೂಯಶ್‌ನೆಸ್ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮ ಪ್ರಪಂಚ, ನಮ್ಮ ನೋವು ನಲಿವುಗೆಳೆಲ್ಲವೂ ಆ ಅನುಭವಗಳಿಂದಲೇ ಆಗುತ್ತದೆ. ಅಲ್ಲದೆ ಪಾಶ್ಚಿಮಾತ್ಯ ಫಿಲಾಸಫಿಗಿಂತ ನಮ್ಮ ದೇಶದ ಫಿಲಾಸಫಿ ಶ್ರೇಷ್ಠವಾದುದು. ಆದರೆ ಪಾಶ್ಚಿಮಾತ್ಯ ಫಿಲಾಸಫಿಯನ್ನು ಕಡೆಗಣಿಸುವಾಗಿಲ್ಲ. ಹೀಗಾಗಿ ನಮ್ಮ ದೇಶದ ಫಿಲಾಸಫಿಯ ಅಂಶಗಳನ್ನೇ ಲೇಖಕ ಕುಮಾರ್ ನಾಗೇಂದ್ರ ಸಿಕ್ರೆಟ್ ಆಫ್ ಹೈಯರ್ ಕಾನ್ಸೂಯಶ್‌ನೆಸ್ ಪುಸ್ತಕದಲ್ಲಿ ವಿಸ್ತಾರವಾಗಿ ತಿಳಿಸಿದ್ದಾರೆ ಎಂದರು.

ನೀನು ಕಾಣುವಷ್ಟು, ನೀನು ಕೇಳುವಷ್ಟು ಮತ್ತು ನಿನ್ನ ಮನಸ್ಸು ಎಷ್ಟನ್ನು ಊಹಿಸಬಹುದೋ ಅಷ್ಟು ನಿನ್ನ ಜಗತ್ತಾಗುತ್ತದೆ. ನಿನ್ನನ್ನು ಕಣ್ಣೀರಿಡಿಸುವ ಮತ್ತು ನಗಿಸುವ ಎಲ್ಲ ಅಂಶಗಳೂ ನಿನ್ನವೇ ಆಗಿರುತ್ತದೆ. ಅವುಗಳನ್ನು ಮೀರಿ ನೀನು ಬೆಳೆದರೆ ನಿನ್ನ ಜಗತ್ತು ವಿಶಾಲವಾಗಿ ನಿನ್ನಲ್ಲಿ ಸಣ್ಣತನ ಸವೆದು ನೀನೂ ಬೆಳೆಯುತ್ತೀಯೆ ಎಂಬ ಮಾತುಗಳನ್ನು ಕಾನ್ಸೂಯಶ್‌ನೆಸ್‌ನಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು.

ನಮಗೆ ಎಷ್ಟು ಗೊತ್ತು. ಅಂದರೆ ನಾವು ಎಷ್ಟು ದೂರ ನೋಡಬಹುದೋ ಅಥವಾ ಎಷ್ಟು ದೂರದ ಶಬ್ಧ ಕೇಳಬಹುದೋ ಅಥವಾ ನಮ್ಮ ಮನಸ್ಸು ಎಷ್ಟು ದೂರ ತೀಕ್ಷ್ಣವಾಗಿ ಯೋಚಿಸಬಲ್ಲದೋ ಅಷ್ಟು. ನಮ್ಮ ಅರಿವಿಗೆ, ನಮ್ಮ ಕಾಣುವ ಕೇಳುವ ಮತ್ತು ಯೋಚಿಸುವ ಕ್ಷಮತೆಯ ಮಿತಿಯುಂಟು. ನಮ್ಮ ಅನುಭವಕ್ಕೆ ಬರುವುದೆಲ್ಲವೂ ನಮ್ಮ ನೋಟದ, ಕೇಳಿಕೆಯ ಮತ್ತು ಆಲೋಚನೆಯ ಪರಿಧಿಯಲ್ಲೇ ಇರುತ್ತದೆ ಎಂದು ಹೇಳಿದರು.

ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ; ಚಿನ್ನದಾತುರಕ್ಕಿಂತ ಹಣ್ಣು ಗಂಡೊಲವು, ಮನ್ನಣೆಯ ದಾಹವದು ಎಲ್ಲಕೂ ತೀಕ್ಷ್ಣತಮ, ತಿನ್ನುವುದಾತ್ಮವನೆ ಮಂಕುತಿಮ್ಮ ಎಂಬ ಡಿವಿ ಗುಂಡಪ್ಪ ಅವರ ಮಾತನ್ನು ತಿಳಿಸಿ, ದೈಹಿಕ, ಭದ್ರತೆ, ಪ್ರೀತಿ- ಪ್ರೇಮ ಹಾಗೂ ಸ್ವಯಂಕೃತ ಅವಶ್ಯಕತೆಗಳ ಬಗ್ಗೆ ಡಿವಿಜಿ ಕೇವಲ ನಾಲ್ಕು ಸಾಲಿನಲ್ಲೇ ಅದ್ಭುತವಾಗಿ ಮನಮುಟ್ಟುವಂತೆ ವರ್ಣಿಸಿದ್ದಾರೆ ಎಂದು ನೆನೆದರು.

ಸಿಕ್ರೆಟ್ ಆಫ್ ಹೈಯರ್ ಕಾನ್ಸೂಯಶ್‌ನೆಸ್ ಪುಸ್ತಕದ ಲೇಖಕ ಕುಮಾರ್ ನಾಗೇಂದ್ರ ಮಾತನಾಡಿ, ಜೀವನವನ್ನು ಖುಷಿಯಿಂದ ಆಚರಿಸಬೇಕು. ಮನುಷ್ಯ ಭೂಮಿ ಮೇಲೆ ಹುಟ್ಟಿರುವುದೇ ಉತ್ತಮ ಜೀವನ ನಡೆಸುತ್ತಾ, ಜೀವನದ ಪ್ರತಿ ಹಂತವನ್ನು ಪ್ರೀತಿಸಬೇಕು. ಅಲ್ಲದೆ, ನಮ್ಮ ಬದುಕಿನ ಕ್ರಿಯಾ ಯೋಜನೆಗಳಲ್ಲಿ ಏಕಾಗ್ರತೆ ಬಹಳ ಮುಖ್ಯ. ನಾವು ಇಡೀ ವಿಶ್ವವನ್ನು ನಂಬಿದರೆ ಅದು ನಮ್ಮಿಂದಿಗೆ ಕೊಂಡಿಯಾಗಿ ನಿಲ್ಲುತ್ತದೆ. ಹೀಗಾಗಿ ಮೊದಲು ನಮ್ಮ ಮೇಲೆ ನಂಬಿಕೆ ಇರಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News