ಸ್ವಾಭಿಮಾನದ ಬದುಕಿನಿಂದ ಜಾತೀಯತೆ ನಿರ್ಮೂಲನೆ: ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್

Update: 2019-08-18 13:03 GMT

ಬೆಂಗಳೂರು, ಆ.18: ಎಲ್ಲ ದಲಿತರಿಗೂ ಸಮಾನವಾದ ಭೂಮಿ ಹಂಚಿಕೆಯಾಗಿ, ಸ್ವಾಭಿಮಾನದಿಂದ ಬದುಕುವಂತಹ ವ್ಯವಸ್ಥೆ ರೂಪಗೊಳ್ಳುವವರೆಗೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಹಾಗೂ ಅಸ್ಪಶ್ಯತೆ ನಿರ್ಮೂಲನೆಯಾಗುವುದಿಲ್ಲ ಎಂದು ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್ ಹೇಳಿದ್ದಾರೆ.

ರವಿವಾರ ನಗರದ ಜ್ಯೋತಿ ಬಸು ಭವನದಲ್ಲಿ ದಲಿತ ಹಕ್ಕುಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ‘ಜಾತಿ ವ್ಯವಸ್ಥೆ, ಅಸ್ಪಶ್ಯತೆ ಉಗಮ ಮತ್ತು ವಿನಾಶ’ ಕುರಿತು ವಿಷಯ ಮಂಡನೆ ಮಾಡಿ ಅವರು ಮಾತನಾಡಿದರು.

ನಮ್ಮ ಸಮಾಜದಲ್ಲಿಂದು ಭೂತದಂತೆ ಬೆಳೆದುಕೊಂಡಿರುವ ಜಾತಿಯತೆಯನ್ನು ಅಷ್ಟು ಸುಲಭವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಕೀಳಾಗಿ ಕಾಣುತ್ತಿರುವ ದಲಿತ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ವೃದ್ಧಿಯಾಗಬೇಕಿದೆ. ಅದಕ್ಕಾಗಿ ದಲಿತರಿಗೆ ಸಮಾನ ಭೂಮಿ ಹಂಚಿಕೆಯಾಗಬೇಕು, ಅವರ ಆಹಾರ ಅವರೇ ಬೆಳೆದು ತಿನ್ನುಬೇಕು ಹಾಗೂ ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂದರು.

ಎಲ್ಲರಿಗೂ ಭೂಮಿಯ ಸಮಾಜ ಹಂಚಿಕೆಯಾಗಬೇಕಾದ ತುರ್ತು ಅಗತ್ಯವಿದೆ. ಅದಕ್ಕಾಗಿ ದಲಿತರು ಅಷ್ಟೇ ಅಲ್ಲದೆ ದಲಿತರೇತರರು, ಸಣ್ಣ ರೈತರು ಒಟ್ಟಾಗಿ ಚಳವಳಿ ನಡೆಸಬೇಕು. ಭೂ ಮಾಲಕರ ಶಕ್ತಿಯನ್ನು ದುರ್ಬಲಗೊಳಿಸಬೇಕು. ಅಲ್ಲದೆ, ಅವರಿಗೆ ಇರುವ ರಾಜಕೀಯ ಅಧಿಕಾರದ ಮೇಲೆ ಹಿಡಿತ ಸಾಧಿಸಬೇಕು ಎಂದು ಕರೆ ನೀಡಿದರು.

ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ರೂಪಗೊಳ್ಳುವಲ್ಲಿ ಹಿಂದಿನ ರಾಜರು ಹಾಗೂ ಭೂಮಾಲಕ ಪಾತ್ರ ಅಪಾರವಾದುದು. ಅಂದಿನ ಸಂದರ್ಭದಲ್ಲಿ ಬ್ರಾಹ್ಮಣರನ್ನು ಆಹ್ವಾನಿಸಿ, ಅವರ ಮೂಲಕ ವರ್ಣ ವ್ಯವಸ್ಥೆಯನ್ನು ರೂಪಿಸಿದರು. ತಮ್ಮ ಸ್ವಹಿತಾಸಕ್ತಿಗಾಗಿ ದಲಿತರನ್ನು ಶೂದ್ರರಾಗಿ ಬಿಂಬಿಸುವ ಪ್ರಯತ್ನಗಳು ನಡೆದವು ಎಂದು ಹೇಳಿದರು.

ಪುರಾಣಗಳು ಮತ್ತು ದೇವಾಲಯಗಳು ಜಾತಿ ವ್ಯವಸ್ಥೆಯನ್ನು ಹಬ್ಬಿಸಿದವು ಮತ್ತು ಬಲಪಡಿಸಿದವು. ಇವು ಯಾವ ಜಾತಿಯವರು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂದು ಹೇಳಿದವು. ಗರ್ಭಗುಡಿಯಲ್ಲಿ ಇರುವವರು ಬ್ರಾಹ್ಮಣರು, ಹೊರಗಡೆ ಶೂದ್ರರು, ಒಳಪ್ರವೇಶವಿಲ್ಲದವರು ದಲಿತರು ಎಂದು ವಿಂಗಡಿಸಿದರು. ರಾಜರು ಎಲ್ಲೆಲ್ಲಿ ದೇವಾಲಯಗಳು ನಿರ್ಮಿಸಿದರು ಅಲ್ಲೆಲ್ಲಾ ಇದು ಹರಡಿತು ಎಂದು ನುಡಿದರು. 12 ನೆ ಶತಮಾನದಲ್ಲಿ ವಚನಕಾರರು, ಶಿವಶರಣರು ದೇವಾಲಯಗಳ ವಿರುದ್ಧ, ವೈದಿಕ ಚಿಂತನೆಯ ವಿರುದ್ಧ ಧ್ವನಿ ಎತ್ತಿದ್ದರು. ಆದರೆ, ಅದು ಸಂಪೂರ್ಣ ಪಲಕೊಡಲಿಲ್ಲ. ಸ್ವಾತಂತ್ರ ನಂತರ ಸಂವಿಧಾನ ರಚನೆಯಾದರೂ ಜಾತಿ ವ್ಯವಸ್ಥೆ ಇನ್ನೂ ಬಲವಾಣಿ ಉಳಿದಿದೆ. ಅಂತರ್ ಜಾತಿಯ ಮದುವೆಗಳಾದರೆ ಕೊಲೆಗಳಾಗುತ್ತಿವೆ. ಇಂದಿನ ರಾಜಕಾರಣ, ಸಾಂಸ್ಕೃತಿಕ ರಂಗ, ಶೈಕ್ಷಣಿಕ ರಂಗ ಎಲ್ಲದರಲ್ಲಿಯೂ ಜಾತೀಯತೆ ಇದೆ ಎಂದರು.

ಜಾತಿ ವ್ಯವಸ್ಥೆಯ, ಅಸ್ಪಶ್ಯತೆಯ ಮೂಲದಲ್ಲಿರುವುದು ರಾಜತ್ವ, ರಾಜಪ್ರಭುತ್ವದ ಅಡಿಯಲ್ಲಿ ಇರುವ ಭೂಮಿಯ, ಜಮೀನ್ದಾರಿ ವ್ಯವಸ್ಥೆ. ಅವರಿಗೆ ಹಳ್ಳಿ ಹಳ್ಳಿಗಳಲ್ಲಿ ಜಾತಿ ವ್ಯವಸ್ಥೆ ಬೇಕಾಗಿದೆ. ದುಡಿಯಲು ಜೀತಗಾರರು ಬೇಕಾಗಿದ್ದರು. ಹೀಗಾಗಿ, ಇಂದಿಗೂ ಹಳೇ ಪದ್ಧತಿಯನ್ನು ಇಟ್ಟುಕೊಂಡಿದ್ದಾರೆ. ಇದು ನಿರ್ಮೂಲನೆಯಾಗಬೇಕೆಂದರು.

ಕಾರ್ಯಕ್ರಮದಲ್ಲಿ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಅರಳಹಳ್ಳಿ ಗೋಪಾಲಕೃಷ್ಣ ಸಂಘಟನೆ ಏಕೆ-ಹೇಗೆ ಕುರಿತು, ಸಹ ಸಂಚಾಲಕ ರಾಜಶೇಖರ ಮೂರ್ತಿ ದಲಿತ ಚಳವಳಿಗಳು-ಸೈದ್ಧಾಂತಿಕ ಭಿನ್ನತೆಗಳು ವಿಷಯ ಕುರಿತು ಹಾಗೂ ಸುರೇಂದ್ರರಾವ್ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ವಿಷಯ ಮಂಡನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News