ಸರಕಾರ ಉರುಳಿಸಿ, ಪುನಃ ಕಟ್ಟುವಷ್ಟು ಶಕ್ತಿ ಲಂಕೇಶ್ ಪತ್ರಿಕೆಗೆ ಇತ್ತು: ನ್ಯಾ.ಎ.ಜೆ.ಸದಾಶಿವ

Update: 2019-08-18 13:30 GMT

ಬೆಂಗಳೂರು, ಆ.18: ಹಿರಿಯ ಸಾಹಿತಿ, ಪತ್ರಕರ್ತ ಪಿ.ಲಂಕೇಶ್ ಹೊರತರುತ್ತಿದ್ದ ಲಂಕೇಶ್ ಪತ್ರಿಕೆಯು ಸರಕಾರವನ್ನು ಉರುಳಿಸಲು ಹಾಗೂ ಪುನಃ ಕಟ್ಟಬಹುದಾದಷ್ಟು ಶಕ್ತಿಶಾಲಿಯಾಗಿತ್ತು ಎಂದು ವಿಶ್ರಾಂತ ನ್ಯಾ.ಎ.ಜೆ.ಸದಾಶಿವ ಅಭಿಪ್ರಾಯಿಸಿದ್ದಾರೆ.

ರವಿವಾರ ಪಲ್ಲವ ಪ್ರಕಾಶನ ಹಾಗೂ ಕರ್ನಾಟಕ ಜನಶಕ್ತಿ ಕೇಂದ್ರ ನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಲೇಖಕ ಶೂದ್ರ ಶ್ರೀನಿವಾಸ್‌ರವರ ‘ಲಂಕೇಶ್ ಮೋಹಕ ರೂಪಕಗಳ ನಡುವೆ’ ಜೀವನ ಚರಿತ್ರೆ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಲಂಕೇಶ್‌ರ ಅಂಕಣ ಬರಹವನ್ನು ಪ್ರಜಾವಾಣಿ ನಿಲ್ಲಿಸಿದಾಗ, ಇದಕ್ಕೆ ಪ್ರತಿಕ್ರಿಯೆಯಾಗಿಯೆ ಲಂಕೇಶ್, ತಮ್ಮ ಹೆಸರಿನಲ್ಲಿಯೆ ಪತ್ರಿಕೆಯನ್ನು ಪ್ರಾರಂಭಿಸಿದರು. ಅವರು ಯಾರಿಗೂ ತಲೆಬಾಗದೆ, ನಿಷ್ಟುರವಾಗಿ ಬರೆಯುತ್ತಿದ್ದರು. ತಾವು ನಂಬಿದನ್ನೇ ಸರಿ ಎನ್ನುವಂತೆ ಬರೆಯುತ್ತಿದ್ದರು ಎಂದು ಅವರು ತಿಳಿಸಿದರು.

ನಾನು ಲಂಕೇಶ್‌ರ ನಾಟಕಗಳಲ್ಲಿ ಅಭಿನಯಿಸಲು ಆಸೆ ಪಡುತ್ತಿದ್ದೆ. ಆದರೆ, ಅವರು ಬಹಳಷ್ಟು ಕಟ್ಟುನಿಟ್ಟಾಗಿದ್ದರಿಂದ ಹಿಂದೇಟು ಹಾಕುತ್ತಿದ್ದೆ. ಅವರು ನಾಟಕವನ್ನು ಕೊನೆಯ ಹಂತದವರಿಗೂ ತಿದ್ದುಪಡಿ ಮಾಡುತ್ತಿದ್ದರು. ಇವರ ಬಗ್ಗೆ ಸಾಹಿತ್ಯ ವಲಯದಲ್ಲಿ ಹಲವು ಊಹಾಪೋಹಗಳು ಹರಡುತ್ತಿದ್ದವು, ಹಾಗೆಯೇ ನಿಲ್ಲುತ್ತಿದ್ದವು. ಒಟ್ಟಾರೆ ಲಂಕೇಶ್ ಒಬ್ಬ ಸೂಕ್ಷ್ಮ ಮನಸಿನ ವ್ಯಕ್ತಿಯಾಗಿದ್ದರು ಎಂದು ಅವರು ಹೇಳಿದರು.

ಕೃತಿಕಾರ ಶೂದ್ರ ಶ್ರೀನಿವಾಸ್ ಮಾತನಾಡಿ, ನಾನು ಲಂಕೇಶ್ ಕುರಿತು ಅವರು ಬದುಕಿದ್ದಾಗಲೆ ಬರೆದಿದ್ದರೆ ಚೆನ್ನಾಗಿತ್ತು. ಆದರೂ, ಈಗ ಬರೆದು ಮುಗಿಸಿರುವುದಕ್ಕೆ ನಿರಾಳನಾಗಿದ್ದೇನೆ. ನಾನು ಹಿರಿಯ ಸಮಾಜವಾದಿ ನಾಯಕ ಗೋಪಾಲಗೌಡ ತೀರಿ ಕೊಂಡಾಗ ಅವರ ಕುರಿತು ಒಂದು ಲೇಖಕ ಬರೆದಿದ್ದೆ. ಈ ಬರಹವನ್ನು ಲಂಕೇಶ್ ಅತಿಯಾಗಿ ಮೆಚ್ಚಿಕೊಂಡು, ನನ್ನ ಬಗೆಗೂ ಇದೇ ದಾಟಿಯಲ್ಲಿ ಬರಿಯಬೇಕೆಂದು ಹೇಳಿದ್ದರು ಎಂದು ನೆನಪು ಮಾಡಿಕೊಂಡರು.

ಪ್ರಗತಿಪರ ರೈತ ಚಿಂತಕ ವಡ್ಡಗೆರೆ ಚನ್ನಸ್ವಾಮಿ, ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ಗಡಿ ಭಾಗದ ಗ್ರಾಮಗಳಿಗೂ ಜಾತ್ಯಾತೀತ ಮೌಲ್ಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಅವರು ಬರಹಗಳನ್ನು ಓದುವ ಮೂಲಕ ನನ್ನ ಚಿಂತನೆಗಳನ್ನು ರೂಪಿಸಿಕೊಂಡಿದ್ದೇನೆಂದು ತಿಳಿಸಿದರು.

ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಮಾತನಾಡಿ, ಲಂಕೇಶ್ ಕುರಿತು ನಾವು ನೋಡಿರದ, ಕೇಳಿರದ ಹಲವು ವಿಷಯಗಳನ್ನು ಶೂದ್ರ ಶ್ರೀನಿವಾಸ್, ತಮ್ಮ ‘ಲಂಕೇಶ್ ಮೋಹಕ ರೂಪಕಗಳ ನಡುವೆ’ ಕೃತಿಯಲ್ಲಿ ದಾಖಲಿಸಿದ್ದಾರೆ. ಇಂತಹ ಪುಸ್ತಕ ಕನ್ನಡ ಓದುಗರಿಗೆ ಅಗತ್ಯವಿತ್ತು. ಇದೇ ಮಾದರಿಯಲ್ಲಿ ಲಂಕೇಶ್ ಪುಸ್ತಕಗಳು ಇಂಗ್ಲಿಷ್‌ಗೆ ಅನುವಾದಗೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಮರ್ಶಕ ಪ್ರೊ.ಸಿರಾಜ್ ಅಹ್ಮದ್ ಮಾತನಾಡಿದರು. ಹಿರಿಯ ಕವಿ ಸಿದ್ಧಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದಾರೆ. ಈ ವೇಳೆ ಹಿರಿಯ ಕವಿ ಎಲ್.ಎನ್.ಮುಕುಂದ ರಾಜ್, ಪದ್ಮಿನಿ ನಾಗರಾಜ್ ಕವಿತೆಗಳನ್ನು ವಾಚಿಸಿದರು.

ಲೇಖಕ ಪೂರ್ಣಚಂದ್ರ ತೇಜಸ್ವಿ ಲಂಕೇಶ್ ಪತ್ರಿಕೆಗೆ ಬರೆಯವುದನ್ನು ನಿಲ್ಲಿಸಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೂ ಪತ್ರಿಕೆಗೆ ಬಹಳಷ್ಟು ನಷ್ಟವಾಯಿತು. ಇದರಿಂದ ಲಂಕೇಶ್‌ರವರು ಸಾಕಷ್ಟು ನೊಂದುಕೊಂಡಿದ್ದರು ಎಂದೆನಿಸುತ್ತದೆ. ಆದರೆ, ಈ ಬಗ್ಗೆ ಲಂಕೇಶ್ ಬಳಿ ಪ್ರಶ್ನಿಸಿದ್ದೆ. ಅವರಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.

-ಎ.ಜೆ.ಸದಾಶಿವ, ವಿಶ್ರಾಂತ ನ್ಯಾಯಮೂರ್ತಿ

ಲಂಕೇಶ್‌ರ ಬಳಿ ನನ್ನದೇ ಜಾತಿಯ ಬೇರೊಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋದರೆ ಛೀಮಾರಿ ಹಾಕುತ್ತಿದ್ದರು. ದಲಿತ, ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ಕರೆದುಕೊಂಡು ಹೋದರೆ ಸಂತಸದಿಂದಲೇ ಬರಮಾಡಿಕೊಳ್ಳುತ್ತಿದ್ದರು. ಹಾಗೂ ವಾರಕ್ಕೆ ಒಂದು ಪುಸ್ತಕವನ್ನು ಓದುವಂತೆ ಪ್ರೇರೇಪಿಸುತ್ತಿದ್ದರು. ಅವರು ಕೊಂಡುಕೊಳ್ಳುತ್ತಿದ್ದ ಪುಸ್ತಕಗಳಿಗೆ ತಮ್ಮ ಹೆಸರನ್ನು ಬರೆದಿಡುತ್ತಿರಲಿಲ್ಲ. ಒಮ್ಮೆ ಈ ಬಗ್ಗೆ ಕೇಳಿದ್ದೆ, ನಿಮ್ಮಂತ ಕಳ್ಳರು ಕದ್ದು ಹೋಗಲಿಯೆಂದು ಉತ್ತರಿಸುತ್ತಿದ್ದರು.

-ಶೂದ್ರ ಶ್ರೀನಿವಾಸ್, ಹಿರಿಯ ಲೇಖಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News