​ರಾಯಬರೇಲಿ ಅಪಘಾತ: ಉನ್ನಾವೊ ಸಂತ್ರಸ್ತೆ ಹೇಳಿದ್ದೇನು?

Update: 2019-08-19 03:50 GMT

ಲಕ್ನೋ, ಆ.19: "ರಾಯಬರೇಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ನೇರವಾಗಿ ನಮ್ಮ ಕಾರಿನತ್ತ ಬಂದ ಲಾರಿ ನಮ್ಮ ಕಾರಿಗೆ ಅಪ್ಪಳಿಸಿತು" ಎಂದು ಉನ್ನಾವೊ ಅತ್ಯಾಚಾರ ಸಂತ್ರಸ್ತೆ ವಿವರಿಸಿದ್ದಾಳೆ. ಜುಲೈ 28ರಂದು ನಡೆದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡು ದಿಲ್ಲಿಯ ಎಐಐಎಂಎಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಯುವತಿ ಆಸ್ಪತ್ರೆಯಲ್ಲಿ ಸಂಬಂಧಿಕರೊಬ್ಬರ ಜತೆ ಈ ಕರಾಳ ಅನುಭವ ಹಂಚಿಕೊಂಡಿದ್ದಾರೆ.

"ಕಾರು ಚಾಲನೆ ಮಾಡುತ್ತಿದ್ದ ನಮ್ಮ ವಕೀಲ ರಿವರ್ಸ್ ಗೇರ್‌ನಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿ ಟ್ರಕ್‌ನಿಂದ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನವನ್ನೂ ಮಾಡಿದರು. ಆದರೆ ಟ್ರಕ್, ಕಾರನ್ನು ನಜ್ಜುಗುಜ್ಜುಗೊಳಿಸಿತು" ಎಂದು ಸಂತ್ರಸ್ತೆ ಹೇಳಿದ್ದಾಗಿ ಸಂಬಂಧಿಕರು ವಿವರಿಸಿದ್ದಾರೆ. ವಕೀಲ ಕೂಡಾ ಎಐಐಎಂಎಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

ವಕೀಲ ಹಾಗೂ ಇಬ್ಬರು ಸಂಬಂಧಿಕರೊಂದಿಗೆ ಸಂತ್ರಸ್ತೆ ಉನ್ನಾವೊದಿಂದ ರಾಯಬರೇಲಿ ಜೈಲಿಗೆ ಹೋಗುತ್ತಿದ್ದಾಗ ಜುಲೈ 28ರಂದು ಕಾರಿಗೆ ಲಾರಿ ಢಿಕ್ಕಿ ಹೊಡೆದಿತ್ತು. ಇಬ್ಬರೂ ಸಂಬಂಧಿಕರು ಮೃತಪಟ್ಟಿದ್ದರು.

ಹತ್ತೊಂಬತ್ತು ವರ್ಷದ ಯುವತಿ, ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಯಾದವ್ ಸೆಂಗಾರ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಾಳೆ. ಸೆಂಗಾರ್ ಈಗ ಸಿಬಿಐ ವಶದಲ್ಲಿದ್ದು, ದಿಲ್ಲಿ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News