ಬಾಲಿವುಡ್‌ನ ಖ್ಯಾತ ಸಂಗೀತ ಸಂಯೋಜಕ ಖಯ್ಯಾಮ್ ಇನ್ನಿಲ್ಲ

Update: 2019-08-20 04:10 GMT

ಮುಂಬೈ, ಆ.20: ಬಾಲಿವುಡ್ ಚಿತ್ರರಂಗದಲ್ಲಿ ದಂತಕಥೆ ಎನಿಸಿದ್ದ ಖ್ಯಾತ ಸಂಗೀತ ಸಂಯೋಜಕ ಮುಹಮ್ಮದ್ ಝಹೂರ್ ಖಯ್ಯಾಮ್ ಹಶ್ಮಿ (93) ನಿನ್ನೆ ರಾತ್ರಿ ನಿಧನರಾದರು. ಕಳೆದ ತಿಂಗಳ 28ರಂದು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ ಅವರು, ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು.

ಹೃದಯಾಘಾತದಿಂದ ಖಯ್ಯಾಮ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಶ್ವಾಸಕೋಶದ ಸೋಂಕು ತೀವ್ರವಾದ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಷ್ಟದ ಕಾಲದಲ್ಲಿ ಇವರನ್ನು ಹಾಗೂ ಪತ್ನಿ ಪತ್ನಿ ಜಗಜೀತ್ ಕೌರ್ ಅವರನ್ನು ನೋಡಿಕೊಳ್ಳುತ್ತಿದ್ದ ಗಝಲ್ ಗಾಯಕ ತಲಾತ್ ಅಝೀರ್ ಈ ಸುದ್ದಿ ಬಹಿರಂಗಪಡಿಸಿದ್ದಾರೆ.

"ಸ್ವಲ್ಪಕಾಲ ಅವರನ್ನು ಕೃತಕ ಉಸಿರಾಟದಲ್ಲಿ ಇಡಲಾಗಿತ್ತು. ರಾತ್ರಿ 9:30ಕ್ಕೆ ಖಯ್ಯಾಮ್‌ ಸಾಬ್ ಕೊನೆಯುಸಿರೆಳೆದ ವಿಚಾರವನ್ನು ವೈದ್ಯರು ಹೇಳಿದರು.

ಅವರ ದೇಹವನ್ನು ಮನೆಗೆ ಒಯ್ದು ಮಂಗಳವಾರ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ. ನಾಲ್ಕು ಬಂಗಲೆ ಖಬರಸ್ತಾನದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಬೇಕು ಎನ್ನುವುದು ಅವರ ಅಪೇಕ್ಷೆಯಾಗಿತ್ತು. ಜಗಜೀತ್ ಕೂಡಾ ತೀವ್ರ ಅನಾರೋಗ್ಯದಿಂದಿದ್ದು, ಅವರ ಆರೋಗ್ಯದ ಬಗ್ಗೆ ಆತಂಕ ಮೂಡಿತ್ತು" ಎಂದು ಅಝೀರ್ ಹೇಳಿದ್ದಾರೆ.

ಕಭೀ ಕಭೀ (1972), ಉಮ್ರಾವೊ ಜಾನ್ (1981), ನೂರಿ (1979), ರಝಿಯಾ ಸುಲ್ತಾನ್ (1983), ಬಝಾರ್ (1982) ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. "ನಾನು ಪ್ರತಿದಿನ ಅವರಿಗೆ ಆಸ್ಪತ್ರೆಯಲ್ಲಿ ಕುರ್ ಆನ್ ಪಠಿಸುತ್ತಿದ್ದೆ.

ಸಂಗೀತಕಾರರಾದ ಸಲೀಮ್ ಮರ್ಚಂಟ್ ಹಾಗೂ ಸೋನು ನಿಗಮ್ ಕೂಡಾ ಆಸ್ಪತ್ರೆಗೆ ಭೇಟಿ ಮಾಡಿದ್ದರು. ಮಂಗಳವಾರ ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಲಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News