ಯಡಿಯೂರಪ್ಪ ಸಂಪುಟ ವಿಸ್ತರಣೆ: 17 ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ

Update: 2019-08-20 13:43 GMT

ಬೆಂಗಳೂರು, ಆ.20: ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 17 ಸಂಪುಟ ದರ್ಜೆಯ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ನಗರದ ರಾಜಭವನದಲ್ಲಿ ಆಯೋಜಿಸಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ನೂತನ ಸಚಿವರಿಗೆ ಅಧಿಕಾರ ಪದ ಹಾಗೂ ಗೋಪ್ಯತಾ ಪ್ರಮಾಣ ವಚನ ಬೋಧಿಸಿದರು. ನೂತನ ಸಂಪುಟಕ್ಕೆ ಸೇರ್ಪಡೆಯಾದ ಬಹುತೇಕ ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ವಿ.ಸೋಮಣ್ಣ ಬಸವಾದಿ ಶರಣರ ಹೆಸರಿನಲ್ಲಿ ಹಾಗೂ ಪ್ರಭು ಚೌವ್ಹಾಣ್ ಸಂತ ಸೇವಾಲಾಲ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಗೋವಿಂದ ಕಾರಜೋಳ, ಸಿ.ಎಂ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಜಗದೀಶ್ ಶೆಟ್ಟರ್, ಬಿ.ಶ್ರೀರಾಮುಲು, ಎಸ್.ಸುರೇಶ್ ಕುಮಾರ್, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಕೋಟಾ ಶ್ರೀನಿವಾಸ ಪೂಜಾರಿ, ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್, ಎಚ್.ನಾಗೇಶ್ ಹಾಗೂ ಶಶಿಕಲಾ ಜೊಲ್ಲೆ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಕೆಲವು ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆ ಬಿದ್ದು ನಮಸ್ಕರಿಸಿದರು. ಸಚಿವರ ಹೆಸರುಗಳನ್ನು ಸರಕಾರದ ಮುಖ್ಯಕಾರ್ಯದರ್ಶಿ ಪ್ರಕಟಿಸುತ್ತಿದ್ದಂತೆ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಪಟ್ಟರು.

ಇಂದು ಪ್ರಮಾಣವಚನ ಸ್ವೀಕರಿಸಿದ ಸಚಿವರಲ್ಲಿ ಬಹುತೇಕರು ಯಡಿಯೂರಪ್ಪ ಆಪ್ತ ವಲಯಕ್ಕೆ ಸೇರಿದವರಾಗಿದ್ದು, ಈ ಹಿಂದೆ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ಪರವಾಗಿದ್ದವರಾಗಿದ್ದಾರೆ. ಇದೀಗ ಎಲ್ಲರಿಗೂ ಸಚಿವ ಪಟ್ಟ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೇಲುಗೈ ಸಾಧಿಸಲಿದ್ದಾರೆ ಎನ್ನಲಾಗಿತ್ತು. ಅವರ ನಿರೀಕ್ಷೆ ಹುಸಿಯಾಗಿದ್ದು, ಸಿಎಂ ಆಪ್ತರಿಗೆ ಮಣೆ ಹಾಕಿದ್ದಾರೆ.

ಪ್ರಮಾಣ ವಚನ ಸಮಾರಂಭದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಸಂಸದ ಮುನಿಸ್ವಾಮಿ, ಶಾಸಕ ರೋಷನ್‌ಬೇಗ್ ಸೇರಿದಂತೆ ಶಾಸಕರು ಹಾಗೂ ಸಚಿವರ ಕುಟುಂಬದವರು ಪಾಲ್ಗೊಂಡಿದ್ದರು.

ಮಾಧುಸ್ವಾಮಿ ಎಡವಟ್ಟು

ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ವೇದಿಕೆ ಬಂದ ನಂತರ ‘ನಾನು ರಾಜ್ಯದ ಮುಖ್ಯಮಂತ್ರಿಯಾಗಿ...ಅಲ್ಲಲ್ಲ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ’ ಎಂದು ಹೇಳಿದ್ದು, ಸಮಾರಂಭದಲ್ಲಿ ನಗೆಪಾಟಲಿಗೀಡಾಯಿತು. ಇದರಿಂದ ಮಾಧುಸ್ವಾಮಿ ಸಂಕೋಚಗೊಂಡರು. ಪಕ್ಕದಲ್ಲಿಯೇ ಇದ್ದ ಯಡಿಯೂರಪ್ಪ ಒಂದು ಕ್ಷಣ ನಸುನಕ್ಕರು.

ಕಾರ್ಯಕ್ರಮದ ವಿಶೇಷತೆಗಳು!

ಎಲ್ಲಾ ಹದಿನೇಳು ಸಚಿವರೂ ಕನ್ನಡ ಭಾಷೆಯಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಭು ಚೌಹಾಣ್ ತಮ್ಮ ಸಾಂಪ್ರದಾಯಿಕ ಲಂಬಾಣಿ ಉಡುಗೆ ತೊಡುಗೆಯೊಂದಿಗೆ ನೋಡುಗರನ್ನು ಆಕರ್ಷಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಮತ್ತು ಆರ್ ಅಶೋಕ್ ಹಾಗೂ ಮೇಲ್ಮನೆ ಅಥವಾ ಕೆಳಮನೆ ಸದಸ್ಯರೂ ಅಲ್ಲದ ಲಕ್ಷ್ಮಣ ಸವದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು. ಸಂಸದರು ಹಾಗೂ ಶಾಸಕರೂ ಸೇರಿದಂತೆ ಹಲವು ಗಣ್ಯರು, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಕಾರ್ಯಕ್ರಮವನ್ನು ನಿರೂಪಿಸಿ, ನಿರ್ವಹಿಸಿದರು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ವಿ.ಆರ್.ರಮೇಶ್, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯೂ ಆಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಿಷ್ಟಾಚಾರ ವಿಭಾಗದ ಉಪ ಕಾರ್ಯದರ್ಶಿ ಹಾಗೂ ರಾಜ್ಯ ಅತಿಥೇಯ ಸಂಸ್ಥೆಯ ನಿರ್ದೇಶಕ ವಿಜಯ್ ಮಹಾಂತೇಶ್ ದಾನಮ್ಮನವರ್ ಅವರೂ ಒಳಗೊಂಡಂತೆ  ಹಿರಿಯ ಅಧಿಕಾರಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News