ಸೆ.7ರಂದು ಚಂದ್ರನ ದಕ್ಷಿಣ ಧ್ರುವ ತಲುಪಲಿದೆ 'ಚಂದ್ರಯಾನ-2': ಇಸ್ರೋ ಅಧ್ಯಕ್ಷ ಕೆ.ಶಿವನ್

Update: 2019-08-20 14:42 GMT

ಬೆಂಗಳೂರು, ಆ.20: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ಮಂಗಳವಾರ ಬೆಳಗ್ಗೆ 9.30 ಕ್ಕೆ ಭೂಕಕ್ಷೆಯಿಂದ ಬಿಡುಗಡೆಗೊಂಡು ಚಂದ್ರನ ಕಕ್ಷೆಗೆ ಚಲಿಸಿದೆ. ಸೆ.7 ರಂದು ನಸುಕಿನ 1.55 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ನಾವು ಅಂದುಕೊಂಡಂತೆಯೇ ಚಂದ್ರಯಾನ-2 ಸಾಗಿದೆ. 90 ಡಿಗ್ರಿ ಲಂಬವಾದ ಕಕ್ಷೆಯಲ್ಲಿ ನೌಕೆಯನ್ನು ನೆಲೆಗೊಳಿಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವುದು ಬಹಳ ಸವಾಲಿನ ಕೆಲಸ. ಇದೇ ಕಾರಣಕ್ಕೆ ಜಗತ್ತಿನ ಯಾವ ರಾಷ್ಟ್ರವೂ ಇಂತಹ ಪ್ರಯತ್ನಕ್ಕೆ ಕೈಹಾಕಿಲ್ಲ. ಚಂದ್ರಯಾನ-2 ಈ ಸಾಧನೆ ಮಾಡಲಿದೆ ಎಂದು ತಿಳಿಸಿದರು.

ಚಂದ್ರನ ಕಕ್ಷೆಗೆ ಸೇರಿರುವ ಚಂದ್ರಯಾನ-2 ಬಾಹ್ಯಾಕಾಶ ನೌಕೆಯನ್ನು ನಾಲ್ಕು ಬಾರಿ ಶಕ್ತಿವರ್ಧನೆಗೊಳಿಸುವ (ಬರ್ನಿಂಗ್) ಮೂಲಕ ಚಂದ್ರನ ಸಮೀಪಕ್ಕೆ ಕಳುಹಿಸಲಾಗುತ್ತದೆ. ಆ.21, 28, 30 ಮತ್ತು ಸೆ.1ರಂದು ಈ ಪ್ರಕ್ರಿಯೆ ನಡೆಯುತ್ತವೆ. ಆಗ ಚಂದ್ರಯಾನ 18 ಸಾವಿರ ಕಿ.ಮೀ.ನಿಂದ 100 ಕಿ.ಮೀ. ಸಮೀಪಕ್ಕೆ ಬಂದಿರುತ್ತದೆ. ಆ ಹಂತದಲ್ಲಿ ಅದು 37 ಕಿ.ಮೀ.ನಿಂದ 97 ಕಿ.ಮೀ. ದೂರದಲ್ಲಿ ಚಂದ್ರನಿಗೆ 90 ಡಿಗ್ರಿ ಲಂಬವಾಗಿ ಸುತ್ತುತ್ತಿರುತ್ತದೆ.

ಸೆ.2ರಂದು ಆರ್ಬಿಟರ್‌ನಿಂದ ಲ್ಯಾಂಡರ್ ಪ್ರತ್ಯೇಕಗೊಳ್ಳುತ್ತದೆ. ಬಳಿಕ ನಾಲ್ಕು ದಿನಗಳ ಕಾಲ ಲ್ಯಾಂಡರ್ ನಿಧಾನವಾಗಿ ಚಂದ್ರನ ನೆಲದತ್ತ ಸಾಗುತ್ತದೆ. ಇಳಿಯುವ ಜಾಗವನ್ನು ಅಂದಾಜಿಸುತ್ತದೆ. ಇದೆಲ್ಲವೂ ಇದುವರೆಗೆ ಮಾಡದೆ ಇರುವ ಪ್ರಯೋಗವಾಗಿರುವುದರಿಂದ ಯಶಸ್ಸಿನ ಬಗ್ಗೆ ಈಗಲೇ ಹೇಳಲಾಗದು, ಆದರೂ ವಿಶ್ವಾಸ ಇದೆ ಎಂದು ಶಿವನ್ ವಿವರಿಸಿದರು.

ಸೆ.7ರ ನಸುಕಿನ 1.40ಕ್ಕೆ ಲ್ಯಾಂಡರ್ ಚಂದ್ರನ ನೆಲವನ್ನು ಸೇರುತ್ತದೆ. ಇದು 15 ನಿಮಿಷದ ಪ್ರಕ್ರಿಯೆಯಾಗಿದೆ. ಆದುದರಿಂದಾಗಿ 1.55ಕ್ಕೆ ಲ್ಯಾಂಡರ್ ಚಂದ್ರನ ನೆಲದ ಮೇಲೆ ಇರುತ್ತದೆ. 2 ಗಂಟೆ ಬಳಿಕ ರಾಂಪ್ ತೆರೆದುಕೊಳ್ಳುತ್ತದೆ. 3 ಗಂಟೆ ಬಳಿಕ ಸೋಲಾರ್ ಪ್ಯಾನಲ್ ತೆರೆದುಕೊಳ್ಳುತ್ತದೆ. ಅನಂತರ ರೋವರ್ ಹೊರಗೆ ಬರಲಿದ್ದು, ಸುಮಾರು ಐದಾರು ಗಂಟೆಗಳಲ್ಲಿ ಎಲ್ಲ ಪ್ರಕ್ರಿಯೆ ಸಮಾಫ್ತಿಯಾಗಲಿದೆ ಎಂದು ಶಿವನ್ ಮಾಹಿತಿ ನೀಡಿದರು.

ಶುಕ್ಲ ಪಕ್ಷದ 14 ದಿನಗಳ ಕಾಲ ಲಾಂಡರ್ ಮತ್ತು ರೋವರ್ ಹಲವು ಸಂಶೋಧನೆಗಳನ್ನು ನಡೆಸಲಿವೆ. ಲ್ಯಾಂಡರ್ ಮತ್ತು ರೋವರ್ 14 ದಿನಗಳ ಕಾಲ ಚಂದ್ರನಲ್ಲಿ ಸೆಕೆಂಡ್‌ಗೆ 1 ಸೆಂ.ಮೀನಂತೆ ಒಟ್ಟು 500 ಮೀಟರ್‌ನಷ್ಟು ಚಲಿಸಲಿದೆ. ನೀರು, ಖನಿಜ, ಕಂಪನ ಸಹಿತ ಹಲವಾರು ಬಗೆಯ ಸಂಶೋಧನೆ ನಡೆಸಲಿದೆ. ಆರ್ಬಿಟರ್ ಒಂದು ವರ್ಷ ಕಾಲ ಚಂದ್ರನ ಸುತ್ತ ತಿರುಗುತ್ತ ಇರಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News