ಮೋದಿ ಜೊತೆ ಕೆಲಸ ಮಾಡುವ ಕಾಲ ಕೂಡಿ ಬಂದಿದೆ: ನೂತನ ಸಚಿವ ಎಚ್.ನಾಗೇಶ್

Update: 2019-08-20 13:43 GMT

ಬೆಂಗಳೂರು, ಆ.20: ನನಗೆ ಪ್ರಧಾನಿ ನರೇಂದ್ರಮೋದಿ ಮೋದಿ ಅವರ ಜೊತೆಗೆ ಕೆಲಸ ಮಾಡಬೇಕು ಎಂದು ಆಸೆ ಇತ್ತು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಮೋದಿ ತುಂಬಾ ಕೆಲಸ ಮಾಡಿದ್ದಾರೆ. ಸಂವಿಧಾನದ 370ನೆ ವಿಧಿಯನ್ನು ರದ್ದು ಮಾಡುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ನೂತನ ಸಚಿವ ಎಚ್.ನಾಗೇಶ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ಅವಧಿಯಲ್ಲಿ ಎರಡು ಬಾರಿ ಸಚಿವನಾಗಿದ್ದೇನೆ. ನನಗೆ ಕೊಟ್ಟ ಮಾತನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಇಷ್ಟು ದಿನ ನಿಮ್ಮ(ಮಾಧ್ಯಮಗಳು) ಮುಂದೆ ಬಂದಿರಲಿಲ್ಲ. ಮುಂದೆ ಬರಬೇಕಾದರೆ ಏನಾದರೂ ಕಾರಣ ಬೇಕಲ್ಲ ಎಂದರು.

ಬಿಜೆಪಿಯಲ್ಲಿ ಕೆಲವರು ಅಸಮಾಧಾನಿತ ಶಾಸಕರು ಇದ್ದಾರೆ. ಎಲ್ಲರಿಗೂ ತೃಪ್ತಿ ಪಡಿಸಲು ಆಗಲ್ಲ. ಸಚಿವ ಸ್ಥಾನ ಸಿಗಲಿಲ್ಲ ಅಂದರೆ ಸ್ವಲ್ಪ ತ್ಯಾಗ ಮಾಡಬೇಕಲ್ಲ. ಇನ್ನು ಸಚಿವ ಸ್ಥಾನಗಳು ಖಾಲಿಯಿವೆ, ಕೆಲವರಿಗೆ ಕಾಲ ಕೂಡಿ ಬರುತ್ತದೆ ಎಂದು ನಾಗೇಶ್ ಹೇಳಿದರು.

ನನ್ನ ಬಗ್ಗೆ ಯಡಿಯೂರಪ್ಪ ಅವರಿಗೆ ಗೊತ್ತಿದೆ. ಇಂತಹದೇ ಖಾತೆ ಬೇಕು ಎಂದು ನಾನು ಮುಖ್ಯಮಂತ್ರಿಗೆ ಕೇಳುವುದಿಲ್ಲ. ಒಳ್ಳೆಯ ಖಾತೆಯನ್ನು ಕೊಡುತ್ತಾರೆ ಅನ್ನುವ ವಿಶ್ವಾಸವಿದೆ. ಅವರು ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ನಾಗೇಶ್ ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ರಚನೆ ವೇಳೆ ನನ್ನ ಹೆಸರು ಮೊದಲ ಪಟ್ಟಿಯಲ್ಲಿತ್ತು. ಆದರೆ, ರಾತ್ರೋರಾತ್ರಿ ನನ್ನ ಹೆಸರನ್ನು ಕೈ ಬಿಡಲಾಗಿತ್ತು. ಒಬ್ಬರ ಮೇಲೆ ಒಬ್ಬರೂ ಆರೋಪಗಳನ್ನು ಮಾಡುತ್ತಿದ್ದರೂ ನಾನು ತಾಳ್ಮೆಯಿಂದ ಇದ್ದೆ. ಈಗ ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜನರ ಮನೆ ಮನೆಗೆ ತಲುಪಲು ಸಾಧ್ಯವಾಗುವಂತಹ ಖಾತೆ ಕೊಡುತ್ತಾರೆ ಅನ್ನೋ ವಿಶ್ವಾಸವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News