ಬಿಜೆಪಿ ವಿರುದ್ಧ ಪರ್ಯಾಯಗಳನ್ನು ಕಟ್ಟಲು ಕಾನೂನು ಹೋರಾಟದ ಅಗತ್ಯವಿದೆ: ದಿನೇಶ್‌ ಅಮಿನ್ ಮಟ್ಟು

Update: 2019-08-20 13:16 GMT

ಬೆಂಗಳೂರು, ಆ.20: ಬಿಜೆಪಿ ವಿರುದ್ಧ ಪರ್ಯಾಯಗಳನ್ನು ಕಟ್ಟಲು ಕಾನೂನು ಹೋರಾಟ ಹಾಗೂ ಚುನಾವಣಾ ವ್ಯವಸ್ಥೆಯಲ್ಲಿ ಆಗಬಹುದಾದ ಸುಧಾರಣೆಗಳ ಕುರಿತು ಚರ್ಚೆಗಳು ನಡೆಯಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್ ಮಟ್ಟು ತಿಳಿಸಿದ್ದಾರೆ.

ಮಂಗಳವಾರ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪ್ರಚಲಿತ ರಾಜ್ಯ ರಾಜಕೀಯ ವ್ಯಾಪಾರೀಕರಣ ಕುರಿತು ಆಯೋಜಿಸಿದ್ದ ಒಂದು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಜರಾತಿನ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್ ಬಿಜೆಪಿ ನಾಯಕರ ವಿರುದ್ಧ ಕಾನೂನು ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕಾನೂನಿನ ಬಗ್ಗೆ ನಿರಾಶರಾಗಬೇಕಿಲ್ಲವೆಂದು ತಿಳಿಸಿದರು.

ಇವತ್ತು ಸಂಸತ್‌ಗೆ ಆಯ್ಕೆಯಾಗಿರುವ 449 ಮಂದಿ ಸಂಸದರು ಕೋಟ್ಯಾಧೀಶರು. ಚುನಾವಣೆಯಲ್ಲಿ ಹಣ ಬಲವೇ ಪ್ರಧಾನ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾಗಿ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ಸ್ಟೇಟ್ ಫಂಡಿಂಗ್(ಸರಕಾರಿ ಹಣ) ಮಾಡುವ ವ್ಯವಸ್ಥತೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಚರ್ಚೆಗಳಾಗಬೇಕಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ಚುನಾವಣಾಧಿಕಾರಿ ಇಂದ್ರಜಿತ್ ಗುಪ್ತ ನೇತೃತ್ವದ ಸೋಮನಾಥ ಚಟರ್ಜಿ ಹಾಗೂ ಮನಮೋಹನ ಸಿಂಗ್ ಸದಸ್ಯರೊಳಗೊಂಡ ಸಮಿತಿಯು ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಸ್ಟೇಟ್ ಫಂಡಿಂಗ್ ನೀಡುವ ಕುರಿತು ವರದಿಯೊಂದನ್ನು ನೀಡಿತ್ತು. ಆದರೆ, ಮುಂದಿನ ದಿನಗಳಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಈ ಬಗ್ಗೆ ಚರ್ಚೆ ನಡೆದು, ಅನುಷ್ಠಾನಕ್ಕೆ ತರಬಹುದಾದ ಅವಕಾಶವಿತ್ತು ಎಂದು ಅವರು ತಿಳಿಸಿದರು.

ದೇಶದಲ್ಲಿರುವ ಜನಸಂಖ್ಯೆಗೆ ಅನುಸಾರವಾಗಿ ಚುಣಾವಣಾ ಆಯೋಗವೇ ಅಭ್ಯರ್ಥಿಗಳ ಪ್ರಚಾರಕ್ಕೆ ಸರಕಾರದ ಹಣವನ್ನು ಖರ್ಚು ಮಾಡವಂತಹ ವ್ಯವಸ್ಥೆ ಜಾರಿಯಾಗಲಿ. ಈ ವ್ಯವಸ್ಥೆ ಜಗತ್ತಿನ ಹಲವು ದೇಶಗಳಲ್ಲಿ ಈಗಾಗಲೆ ಜಾರಿಯಲ್ಲಿದೆ. ಹೀಗೆ ಚುನಾವಣೆ ಸಾಕಷ್ಟು ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಹಾಗೂ ಪಕ್ಷಗಳ ಒಳಗಡೆ ಚರ್ಚೆಗಳು ಆಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕಾಶ್ಮೀರದಲ್ಲಿ 370ಜಾರಿ, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿ ಬಹುತ್ವಕ್ಕೆ ವಿರುದ್ಧವಾದ ಹಲವು ಅಂಶಗಳನ್ನು ಹಾಕಿಕೊಂಡಿದೆ. ಇದನ್ನು ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಪ್ರಶ್ನಿಸಿಲ್ಲ. ಆದರೆ, ಈಗ ಅದನ್ನು ಜಾರಿ ಮಾಡಿದಾಗ ಅದನ್ನು ಪ್ರಶ್ನಿಸಲು ಸಾಧ್ಯವೇ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಾಗ ಎಚ್.ಡಿ.ದೇವೇಗೌಡ ಮನೆಯಲ್ಲಿ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ಚರ್ಚೆ ನಡೆಸಿದೆವು. ಆ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಕಾಂಗ್ರೆಸ್‌ಗೆ ಅಧಿಕಾರ ಕೊಡಬೇಕೆಂದು ಸಲಹೆ ನೀಡಿದ್ದೆ. ಆದರೆ, ನನ್ನ ಮಾತು ಗಂಭೀರವಾಗಿ ತೆಗೆದುಕೊಂಡಿಲ್ಲ. ತತ್ವ ಸಿದ್ಧಾಂತದಡಿಯಲ್ಲಿ ರಾಜಕೀಯ ಮಾಡಲು ಹೊರಟಿರುವ ನಾನು ಹಾಗೂ ಕಾಂಗ್ರೆಸ್‌ನ ಸುದರ್ಶನ್ ಈಗಿನ ವ್ಯವಸ್ಥೆಯಲ್ಲಿ ಎಡಬಿಡಂಗಿಗಳಾಗಿದ್ದೇವೆ. ಮುಖ್ಯನೆಲೆಯಲ್ಲಿ ರಾಜಕಾರಣ ಮಾಡುವುದಕ್ಕೆ ಹಣವೂ ಇಲ್ಲ, ಜಾತಿಯ ಬಲವೂ ಇಲ್ಲ. ತತ್ವ ಸಿದ್ಧಾಂತಗಳಡಿ ರಾಜಕಾರಣ ಮಾಡಲು ಹೊರಟರೆ, ನಮ್ಮ ಮಾತನ್ನು ಕೇಳುವವರೇ ಇಲ್ಲವಾಗಿದ್ದಾರೆ.

-ವೈ.ಎಸ್.ವಿ.ದತ್ತ, ಜೆಡಿಎಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News