ಮನೆಯಲ್ಲೇ ಕಸ ವಿಂಗಡಿಸುವುದು ಕಡ್ಡಾಯ: ಸುಭಾಷ್ ಆಡಿ

Update: 2019-08-20 13:47 GMT

ಬೆಂಗಳೂರು, ಆ.20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ವಿಂಗಡಿಸಿಕೊಡಬೇಕು ಎಂದು ಎನ್‌ಜಿಟಿ ರಾಜ್ಯಮಟ್ಟದ ಘನ ತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷ ಸುಭಾಷ್ ಆಡಿ ತಿಳಿಸಿದ್ದಾರೆ.

ಮಂಗಳವಾರ ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಲಯಗಳಿಗೆ ಸಂಬಂಧಿಸಿದಂತೆ ಆಯೋಜಿಸಿದ ಘನ ತ್ಯಾಜ್ಯ ನಿರ್ವಹಣೆಯ ಪಾಲುದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ನಾಗರಿಕರು ಕಡ್ಡಾಯವಾಗಿ ಕಸವನ್ನು ವಿಂಗಡಿಸಬೇಕು. ಹಸಿ, ಒಣ ಹಾಗೂ ಹಾನಿಕಾರಕ ಕಸವನ್ನು ವಿಂಗಡಿಸಿ ಕೊಡದಿದ್ದಲ್ಲಿ ಅವರಿಗೆ ದುಪ್ಪಟ್ಟು ದಂಡ ವಿಧಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಪ್ರತಿನಿತ್ಯ 11,000 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಅರ್ಧದಷ್ಟು ಅಂದರೆ ಬೆಂಗಳೂರು ನಗರವೊಂದರಲ್ಲಿ 5,800 ಟನ್ ತ್ಯಾಜ್ಯ ಪ್ರತಿನಿತ್ಯ ಉತ್ಪತ್ತಿಯಾಗುತ್ತಿದ್ದು, ಶೇ.40 ರಷ್ಟು ತ್ಯಾಜ್ಯ ಮಾತ್ರವೇ ಸಮರ್ಪಕವಾಗಿ ವಿಂಗಡನೆಯಾಗುತ್ತಿದೆ. ಸಾರ್ವಜನಿಕರು, ಎನ್‌ಜಿಓ ಸಂಸ್ಥೆಗಳು, ಕಾರ್ಖಾನೆಗಳು ಪರಿಣಾಮಕಾರಿಯಾಗಿ ಕಸ ವಿಂಗಡಿನೆ ಮಾಡಿದ್ದಲ್ಲಿ ಕಸದ ಸಮಸ್ಯೆಗೆ ಶಾಶ್ವತವಾದ ಪರಿಹಾರ ಸಿಗಲಿದೆ ಎಂದು ಅವರು ತಿಳಿಸಿದರು.

ನಮ್ಮ ಕಸ ನಮ್ಮ ಜವಾಬ್ದಾರಿ ಎಂಬಂತೆ ನಮ್ಮ ವಾರ್ಡ್ ನಮ್ಮ ಜವಾಬ್ದಾರಿ ಎಂಬ ಘೋಷಣೆಯಡಿ ನಾಗರಿಕರು ತಮ್ಮ ವಾರ್ಡ್‌ಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲೇ ಸಂಸ್ಕರಿಸಬೇಕು. ಇದರಿಂದಾಗಿ ಕಸದ ನಿರ್ವಹಣೆಗೆ ಬಿಬಿಎಂಪಿ ಖರ್ಚು ಮಾಡುತ್ತಿರುವ 1,000 ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಅದನ್ನು ನಗರದ ಮೂಲಭೂತ ಸೌಕರ್ಯಗಳಿಗೆ ಬಳಸಬಹುದಾಗಿದೆ ಎಂದು ಸಲಹೆ ನೀಡಿದರು.

ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ವಿಶೇಷ ಆಯುಕ್ತ ರಂದೀಪ್, 2 ವಲಯಗಳ ಪಾಲಿಕೆ ಸದಸ್ಯರು ಸ್ವಯಂ ಸೇವಾ ಸಂಸ್ಥೆಗಳು, ಹೊಟೇಲ್ ಮಾಲಕರು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಘನತ್ಯಾಜ್ಯ ನಿರ್ವಹಣೆ ನಿಯಮದಂತೆ ಪ್ರತಿಯೊಬ್ಬರು ಕಡ್ಡಾಯವಾಗಿ ಕಸವನ್ನು ವಿಂಗಡನೆ ಮಾಡಬೇಕು ಎಂಬ ನಿಯಮ ಜಾರಿಯಾಗಿ 3 ವರ್ಷಗಳೇ ಕಳೆದಿವೆ. ಆದರೂ ನಗರದಲ್ಲಿ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ.

-ಸುಭಾಷ್ ಆಡಿ, ಘನ ತ್ಯಾಜ್ಯ ನಿರ್ಹಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News