ಮೀಸಲಾತಿ ಕುರಿತು ಯಾವುದೇ ಚರ್ಚೆ ಅಗತ್ಯವಿಲ್ಲ: ಭಾಗವತ್ ಹೇಳಿಕೆಗೆ ಕೇಂದ್ರ ಸಚಿವ ಪಾಸ್ವಾನ್ ಪ್ರತಿಕ್ರಿಯೆ

Update: 2019-08-20 14:42 GMT

ಹೊಸದಿಲ್ಲಿ,ಆ.20: ಮೀಸಲಾತಿಯ ವಿಷಯದಲ್ಲಿ ಯಾವುದೇ ಚರ್ಚೆಯ ಅಗತ್ಯವಿಲ್ಲ ಎಂದು ಮಂಗಳವಾರ ಇಲ್ಲಿ ಬಲವಾಗಿ ಪ್ರತಿಪಾದಿಸಿದ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರು,ಮೀಸಲಾತಿಯು ಸಮಾಜದ ದುರ್ಬಲ ವರ್ಗಗಳ ಸಾಂವಿಧಾನಿಕ ಹಕ್ಕು ಆಗಿದೆ ಎಂದು ಹೇಳಿದರು.

ಮೀಸಲಾತಿಯ ಬೆಂಬಲಿಗರು ಮತ್ತು ಅದರ ವಿರೋಧಿಗಳ ನಡುವೆ ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆ ನಡೆಯುವ ಅಗತ್ಯವಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ರವಿವಾರ ದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂದರ್ಭ ಕರೆ ನೀಡಿದ್ದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪಾಸ್ವಾನ್,ಮೀಸಲಾತಿಯು ಸಾಂವಿಧಾನಿಕ ಹಕ್ಕು ಆಗಿದೆ ಮತ್ತು ಇದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರೂ ಹಲವಾರು ಬಾರಿ ಪುನರುಚ್ಚರಿಸಿದ್ದಾರೆ. ಮೀಸಲಾತಿ ಕುರಿತು ಯಾವುದೇ ಚರ್ಚೆಯ ಅಗತ್ಯವಿಲ್ಲ. ಮೀಸಲಾತಿ ಈಗ ಮೇಲ್ಜಾತಿಗಳ ಬಡವರಿಗೂ ಲಭ್ಯವಿದೆ,ಹೀಗಾಗಿ ಅದನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದರು. ಪಾಸ್ವಾನ್ ಭಾಗವತ್ ಹೇಳಿಕೆಗಳಿಗೆ ನೇರವಾಗಿ ಪ್ರತಿಕ್ರಿಯಿಸಲಿಲ್ಲ. ತನಗೆ ಅವರ ಹೇಳಿಕೆಗಳ ವಿವರ ಲಭ್ಯವಾಗಿಲ್ಲ ಎಂದರು.

ಮೀಸಲಾತಿ ವಿಷಯದಲ್ಲಿ ಪ್ರತಿಪಕ್ಷಗಳು ರಾಜಕೀಯವನ್ನು ಮಾಡುತ್ತಿವೆ. ಅವು ವಿವಾದವನ್ನು ತೀವ್ರಗೊಳಿಸಲು ಪ್ರಯತ್ನಿಸುತ್ತಿವೆ. ಆದರೆ ಅವರ ಸುಳ್ಳುಗಳನ್ನು ಜನತೆ ನಂಬುವುದಿಲ್ಲ ಎಂಬ ವಿಶ್ವಾಸ ತನಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News