“ಜಮ್ಮು-ಕಾಶ್ಮೀರ ಕುರಿತು ಕೇಂದ್ರದ ನಿರ್ಧಾರದ ಬಗ್ಗೆ ಭಾರತೀಯನಾಗಿ ನನಗೆ ಹೆಮ್ಮೆಯಿಲ್ಲ”

Update: 2019-08-20 16:36 GMT

ಹೊಸದಿಲ್ಲಿ, ಆ.20: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಳ್ಳುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ನರೇಂದ್ರ ಮೋದಿ ನೇತೃತ್ವದ ಸರಕಾರದ ನಿರ್ಧಾರವನ್ನು ಟೀಕಿಸಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರು, ಪ್ರಜಾಪ್ರಭುತ್ವವಿಲ್ಲದೆ ಕಾಶ್ಮೀರದಲ್ಲಿ ಯಾವುದೇ ಪರಿಹಾರ ದೊರೆಯುತ್ತದೆ ಎಂದು ತನಗನ್ನಿಸುತ್ತಿಲ್ಲ. ಕೇಂದ್ರದ ನಿರ್ಣಯವು ಬಹುಸಂಖ್ಯಾತ ವಾದದ ಆಡಳಿತವಾಗಿದ್ದು,ಎಲ್ಲರಿಗೂ ಸಮಾನ ಹಕ್ಕುಗಳು ದೊರೆಯಬೇಕೆಂಬ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪುಭುತ್ವ ದೇಶವೆಂಬ ನೆಲೆಯಲ್ಲಿ ಅಷ್ಟೆಲ್ಲ ಸಾಧಿಸಿದ್ದರೂ ಸರಕಾರದ ಈ ಕ್ರಮದಿಂದಾಗಿ ನಾವು ಆ ಪ್ರತಿಷ್ಠೆಯನ್ನು ಕಳೆದುಕೊಂಡಿದ್ದೇವೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ 85ರ ಹರೆಯದ ಸೇನ್, ರಾಜ್ಯದಲ್ಲಿಯ ಭೂಮಿಯು ಕಾಶ್ಮೀರಿಗಳಿಗೆ ಸೇರಿದ್ದರಿಂದ ಅದರ ಬಳಕೆಯ ಹಕ್ಕುಗಳ ಕುರಿತು ನಿರ್ಧಾರವನ್ನು ಅವರಿಗೇ ಬಿಡಬೇಕು ಎಂದರು.

ರಾಜ್ಯದ ರಾಜಕೀಯ ನಾಯಕರನ್ನು ಬಂಧಿಸುವ ಕೇಂದ್ರದ ನಿರ್ಧಾರವನ್ನೂ ಟೀಕಿಸಿದ ಅವರು,ಜನತೆಯ ನಾಯಕರ ಧ್ವನಿಗಳನ್ನು ಆಲಿಸದೆ ನ್ಯಾಯ ನೀಡಲು ಸಾಧ್ಯ ಎಂದು ತನಗೆ ಅನಿಸುತ್ತಲ್ಲ. ಹಿಂದೆ ದೇಶವನ್ನು ಮುನ್ನಡೆಸಿದ್ದ ಮತ್ತು ಸರಕಾರಗಳನ್ನು ರಚಿಸಿದ್ದ ಅಗ್ರ ನಾಯಕರು ಸೇರಿದಂತೆ ಸಾವಿರಾರು ಜನರನ್ನು ಜೈಲಿನಲ್ಲಿ ಮತ್ತು ನಿರ್ಬಂಧದಲ್ಲಿಟ್ಟರೆ ಪ್ರಜಾಪ್ರಭುತ್ವವನ್ನು ಯಶಸ್ವಿಯಾಗಿಸುವ ಮಾರ್ಗವನ್ನೇ ಮುಚ್ಚಿದಂತಾಗುತ್ತದೆ ಎಂದರು.

 ಜಮ್ಮು-ಕಾಶ್ಮೀರದಲ್ಲಿ ಏರ್ಪಡಿಸಲಾಗಿರುವ ಬಿಗಿ ಭದ್ರತೆಯು ವಸಾಹತುಶಾಹಿ ಯುಗವನ್ನು ನೆನಪಿಸುತ್ತದೆ ಎಂದ ಅವರು, ಬ್ರಿಟಿಷರು ಇದೇ ರೀತಿಯಲ್ಲಿ ಈ ದೇಶವನ್ನು 200 ವರ್ಷಗಳ ಕಾಲ ಆಳಿದ್ದರು. ದೇಶಕ್ಕೆ ಸ್ವಾತಂತ್ರ ಲಭಿಸಿದ್ದಾಗ ಮುಂಜಾಗ್ರತಾ ಬಂಧನಗಳ ಬ್ರಿಟಿಷ್ ವಸಾಹತುಶಾಹಿ ಯುಗಕ್ಕೆ ಮರಳುತ್ತೇವೆ ಎಂದು ತಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News