ದೇಶದಲ್ಲಿ ಹೊಸ ಕ್ರಾಂತಿಗೆ ರಾಜೀವ್ ಗಾಂಧಿ ಕಾರಣ: ಡಿ.ಕೆ.ಶಿವಕುಮಾರ್

Update: 2019-08-20 16:39 GMT

ಬೆಂಗಳೂರು, ಆ.20: ‘ಯುವ ನಾಯಕರಿಗೆ ಪ್ರೋತ್ಸಾಹ, ಐಟಿ-ಬಿಟಿಗೆ ಹೆಚ್ಚಿನ ಪ್ರಾಶಸ್ತ್ಯ, ಉದ್ಯೋಗ ಸೃಷ್ಟಿಗೆ ಉತ್ತೇಜನದಂತಹ ಐತಿಹಾಸಿಕ ನಿರ್ಧಾರಗಳಿಂದ ದೇಶದಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆಗೆ ಕಾರಣರಾದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ’ ಎಂದು ಮಾಜಿ ಸಚಿವ ಡಿ.ಕೆ.ಶಿವಮಾರ್ ತಿಳಿಸಿದರು.

ಮಂಗಳವಾರ ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ದೇಶ ಮತ್ತು ರಾಜ್ಯದ ಎರಡು ಮಹಾಚೇತನಗಳನ್ನು ನೆನೆಸಿಕೊಳ್ಳುವ ದಿನ. ಈ ದಿನ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಹೆಸರಿನಲ್ಲಿ ಅವರ ಜನ್ಮದಿನ ಆಚರಿಸಲು ಹಾಗೂ ಕಾಂಗ್ರೆಸ್ ಉಳಿಸಲು ಆಗಮಿಸಿರುವ ಕಾರ್ಯಕರ್ತರಿಗೆ ಕೋಟಿ ನಮಸ್ಕಾರಗಳು ಎಂದು ಅವರು ಹೇಳಿದರು.

ನಮ್ಮ ರಾಜಕಾರಣ ಪ್ರಾರಂಭವಾದಾಗ ರಾಜೀವ್ ಗಾಂಧಿ ಅವರ ಸಂಪರ್ಕಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ಆಗ ಯುವ ನಾಯಕರನ್ನು ಬೆಳೆಸಬೇಕು ಅಂತಾ ಹೇಳಿ ವಿದ್ಯಾರ್ಥಿ ನಾಯಕರುಗಳಿಗೆ ಪಕ್ಷದಿಂದ ಟಿಕೆಟ್ ನೀಡಲಾಗುತ್ತಿತ್ತು. ಹೀಗಾಗಿ ನನಗೆ ಆಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿ ಇಂದು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮುನ್ಸಿಪಾಲಿಟಿಯಂತಹ ಸ್ಥಳೀಯ ಮಟ್ಟದಿಂದ ನಾಯಕತ್ವ ಬೆಳೆಯಬೇಕು ಎಂದು ಪ್ರತಿಪಾದನೆ ಮಾಡಿದವರು ರಾಜೀವ್ ಗಾಂಧಿ. ಸಂವಿಧಾನಕ್ಕೆ 73,74ನೇ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವ ರಾಜೀವ್ ಗಾಂಧಿ ಅವರ ನಿರ್ಧಾರವನ್ನು ವಿರೋಧ ಪಕ್ಷಗಳು ಸಾಕಷ್ಟು ಟೀಕಿಸಿದ್ದವು ಎಂದು ಅವರು ಹೇಳಿದರು.

ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ರಾಜೀವ್ ಗಾಂಧಿ, ನಾವು 16ನೇ ವಯಸ್ಸಿನ ಹುಡುಗರನ್ನು ಸೇನೆಗೆ ಸೇರಿಸಿ ದೇಶ ಕಾಯಲು ಹೇಳುತ್ತೇವೆ. ಅಂತಹ ಸಂದರ್ಭದಲ್ಲಿ 18ನೇ ವಯಸ್ಸಿನ ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ನೀಡದಿದ್ದರೆ ನಾವು ಪ್ರಧಾನಿ ಆಗಿರುವುದಕ್ಕೆ ಯೋಗ್ಯತೆ ಇರುವುದಿಲ್ಲ ಎಂದಿದ್ದರು. ಅವರ ಇಂತಹ ನಿರ್ಧಾರಗಳು ಸ್ವಾರ್ಥಕ್ಕೆ ಹೊರತಾಗಿದ್ದವು. ಹೀಗಾಗಿ ಇಂದು ಆ ನಿರ್ಧಾರಗಳು ಪರಿಣಾಮಕಾರಿಯಾಗಿ ನಿಂತಿವೆ ಎಂದು ಅವರು ತಿಳಿಸಿದರು. 80ರ ಕಾಲದಲ್ಲಿ ನಮಗೆ ಫೋನ್ ಹಾಕಿಸಿಕೊಳ್ಳಲು 2, 3ವರ್ಷ ಕಾಯಬೇಕಿತ್ತು. ಸಂಸದರ ಹೆಸರಿನಲ್ಲಿ ಬೇಡಿಕೆ ಇಟ್ಟು ಅದನ್ನು ಪಡೆಯಬೇಕಾಗಿತ್ತು. ಆದರೆ ಇಂದು ನಮ್ಮ ಕೈಯಲ್ಲಿ ಎರಡು, ಮೂರು ಫೋನ್‌ಗಳಿವೆ. ಇದಕ್ಕೆಲ್ಲ ಕಾರಣ ರಾಜೀವ್ ಗಾಂಧಿ. ಐಟಿ-ಬಿಟಿಗೆ ಹೆಚ್ಚಿನ ಮಹತ್ವ ನೀಡಿ, ಉದ್ಯೋಗ ಸೃಷ್ಟಿ ಮಾಡಿ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲು ಅವತ್ತು ರಾಜೀವ್ ಗಾಂಧಿ ಕೈಗೊಂಡ ಐತಿಹಾಸಿಕ ನಿರ್ಧಾರಗಳೇ ಕಾರಣ ಎಂದು ಶಿವಕುಮಾರ್ ಸ್ಮರಿಸಿದರು.

ವಿರೋಧ ಪಕ್ಷಗಳು ಕೂಡ ರಾಜೀವ್ ಗಾಂಧಿ ಅವರನ್ನು ದ್ವೇಷಿಸುತ್ತಿರಲಿಲ್ಲ. ಅವರು ಹೃದಯ ಶ್ರೀಮಂತಿಕೆಯಿಂದ ಬೇರೆ ನಾಯಕರನ್ನು ಬೆಳೆಸುತ್ತಿದ್ದರು. ಈ ಬಗ್ಗೆ ಸ್ವತಃ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಗಾಂಧಿ ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲು ಸಾಧ್ಯವೇ ಇಲ್ಲ. ಹೀಗಾಗಿ ಗಾಂಧಿ ಕುಟುಂಬದ ಮೇಲೆ ನಾವು ಅಪಾರ ನಂಬಿಕೆ ಇಟ್ಟುಕೊಂಡಿದ್ದೇವೆ. ಸೋನಿಯಾ ಗಾಂಧಿ ಅವರು ಸಂಕಷ್ಟದ ಸಮಯದಲ್ಲಿ ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ಅವರು ತಿಳಿಸಿದರು.

ಸೋನಿಯಾಗಾಂಧಿ ಅವರಿಗೆ ಪ್ರಧಾನಿಯಾಗುವ ಅವಕಾಶ ಬಂದಿದ್ದರೂ ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸಿ ತ್ಯಾಗ ಮಾಡಿದ್ದರು. ರಾಹುಲ್ ಗಾಂಧಿ ಅವರೂ ಕೂಡ ಕೇಂದ್ರ ಸಚಿವ, ಉಪ ಪ್ರಧಾನಿಯಾಗಬಹುದಿತ್ತು. ಅವರೂ ಕೂಡ ತಮಗೆ ಬೇಡ ಎಂದು ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು.

ಪ್ರಪಂಚದಲ್ಲಿ ಇಂತಹ ತ್ಯಾಗವನ್ನು ಯಾರಾದರೂ ಮಾಡಿದ್ದರೆ ಅದು ಸೋನಿಯಾ ಗಾಂಧಿ ಮಾತ್ರ. ನೆಹರೂ ಅವರಿಂದ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರು ದೇಶಕ್ಕೆ ತ್ಯಾಗ ಮಾಡುತ್ತಲೇ ಬಂದಿದ್ದಾರೆ. ಅವರ ತ್ಯಾಗವನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಇನ್ನು ದೇವರಾಜ ಅರಸು ಅವರ ಕಾಲದಲ್ಲೂ ನಾವು ಕೆಲಸ ಮಾಡಿದ್ದೇವೆ. ಅವರು ಕೂಡ ಯುವಕರನ್ನು ಬೆಳೆಸುವ, ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ನಾಯಕರು. ಅರಸು ಅವರು ನಮ್ಮ ಸಮಾಜದಲ್ಲಿ ಮಾಡಿದ ಕ್ರಾಂತಿಯನ್ನು ನಾವೆಲ್ಲ ಇವತ್ತು ಸ್ಮರಿಸಬೇಕಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ನಾವು ಇಬ್ಬರು ನಾಯಕರನ್ನು ನೆನೆಯುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News