ದೇಶದ ಐಕ್ಯತೆಗೆ ಸಂಘಪರಿವಾರ ಕಾರಣವಲ್ಲ: ದಿನೇಶ್ ಗುಂಡೂರಾವ್

Update: 2019-08-20 16:42 GMT

ಬೆಂಗಳೂರು, ಆ.20: ಭಾರತ ಸ್ವಾತಂತ್ರವಾದ ಸಂದರ್ಭದಲ್ಲಿ ಹಲವರು ಈ ದೇಶ ಒಂದಾಗಿರಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಇಂದಿಗೂ ಈ ದೇಶ ಒಗ್ಗಟ್ಟಾಗಿದೆ. ಅದಕ್ಕೆ ಸ್ವಯಂ ಘೋಷಿತ ದೇಶಭಕ್ತರು ಅಥವಾ ಸಂಘ ಪರಿವಾರ ಕಾರಣವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಥಮ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂ ಅವರ ಬದ್ಧತೆ, ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿಯವರ ದಿಟ್ಟತನ, ರಾಜೀವ್ ಗಾಂಧಿಯವರ ದೂರದೃಷ್ಟಿ ಹಾಗೂ ಅವರ ತ್ಯಾಗ ಬಲಿದಾನಗಳಿಂದಾಗಿ, ಇಂದಿಗೂ ಈ ದೇಶ ಒಗ್ಗಟ್ಟಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸ್ವಾತಂತ್ರದ ಸಮಯದಲ್ಲಿ ಎಲ್ಲ ಗೊಂದಲ, ಸಂಕಷ್ಟ, ಸವಾಲುಗಳನ್ನು ನಿವಾರಿಸಿ, ಭಾರತವನ್ನು ಅಖಂಡ ರಾಷ್ಟ್ರವನ್ನಾಗಿ ಮಾಡುವಲ್ಲಿ ನೆಹರು ಅವರ ಪಾತ್ರ ನಿರ್ಣಾಯಕ. ವಿವಿಧ ಭಾಷೆ, ಪ್ರಾಂತ, ಧರ್ಮ, ಸಂಸ್ಕೃತಿಯ ನಡುವೆಯೂ ಏಕತೆಯನ್ನು ಬೆಸೆದವರು ನೆಹರು, ಸರ್ದಾರ್ ಪಟೇಲ್, ಮೌಲಾನ ಆಝಾದ್, ಮಹಾತ್ಮ ಗಾಂಧಿಯವರೇ ಹೊರತು, ಬಿಜೆಪಿ, ಸಂಘಪರಿವಾರದವರಲ್ಲ ಎಂದು ಅವರು ತಿಳಿಸಿದರು.

ಪ್ರಸಕ್ತ ಆಡಳಿತದಲ್ಲಿರುವ ಕೇಂದ್ರ ಸರಕಾರ, ನೆಹರು ಕುಟುಂಬದ ತ್ಯಾಗ, ಬಲಿದಾನ, ದೇಶಕ್ಕೆ ನೀಡಿದ ಕೊಡುಗೆಗಳನ್ನು ತಿರುಚಿ ಹೇಳುತ್ತಿದೆ. ಈ ಅಪ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸುಳ್ಳುಗಳನ್ನೇ ಸತ್ಯವೆಂದು ಬಿಂಬಿಸುವ ಮೂಲಕ ದೇಶದಲ್ಲಿ ಭ್ರಮೆ ಸೃಷ್ಟಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ದೇವರಾಜ ಅರಸು ಅವರು ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ ನಾಯಕ. ಎಲ್ಲ ಸ್ತರದ, ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸುವ ಅವರ ಯೋಜನೆಗಳು ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಿತು. ಇವತ್ತಿನ ರಾಜಕಾರಣ, ಆಪರೇಷನ್ ಕಮಲದಂತಹ ಹೀನ ಸ್ಥಿತಿಗೆ ತಲುಪಿರುವಾಗ ಅರಸು ಅವರಂತಹ ಆದರ್ಶ ನಾಯಕರು ನಮ್ಮ ಪ್ರೇರಣೆಯಾಗಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ದೇಶದ ಅಭಿವೃದ್ಧಿಯನ್ನು ಮಾಡಿದವರು ನಾವು. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ ಎಂದರು.

ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಮೋದಿ ಮೊದಲ ಬಾರಿ ಪ್ರಧಾನಿಯಾದಾಗ ಸಂಸತ್ತಿಗೆ ತಲೆಬಾಗಿ ನಮಸ್ಕರಿಸಿ ಒಳಗೆ ಬಂದರು. ಎರಡನೆ ಬಾರಿ ಪ್ರಧಾನಿಯಾದಾಗ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಮೋದಿ ನಾಟಕವಾಡುತ್ತಾರೆ ಎಂದು ಅವರು ಟೀಕಿಸಿದರು.

ನಮ್ಮ ಸಾಮಾಜಿಕ ಜಾಲತಾಣಗಳನ್ನು ಪ್ರಬಲವಾಗಿಲ್ಲ. ಜನರ ಜೊತೆ ನೇರವಾಗಿ ಸಂಪರ್ಕ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಸರಕಾರದ ಅವಧಿಗಳಲ್ಲಿ ಆಗಿರುವ ಅಭಿವೃದ್ಧಿ, ದೇಶಕ್ಕೆ ಹಾಗೂ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರು, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಎದುರಿಸಲು ನಾವು ಬಿಜೆಪಿ ವಿರುದ್ಧ ನಿಲ್ಲಬೇಕು. ಅಲ್ಪಸಂಖ್ಯಾತರು, ದಲಿತರು, ರೈತರನ್ನು ಬಿಜೆಪಿಯವರು ಸರ್ವನಾಶ ಮಾಡುತ್ತಿದ್ದಾರೆ. ಮೋದಿಯನ್ನು ಗ್ರೇಟ್ ಅಂತ ಹೇಳುತ್ತಾರೆ. ಅವರು ಏನು ಮಾಡಿದ್ದಾರೆ ಅನ್ನೋದನ್ನು ತೋರಿಸಲಿ ಎಂದು ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News