ದೇಶವನ್ನು ವಿಶ್ವಮಟ್ಟಕ್ಕೇರಿಸುವಲ್ಲಿ ರಾಜೀವ್ ಗಾಂಧಿ ಪಾತ್ರ ಅಪಾರ: ಕೆ.ಎಚ್.ಮುನಿಯಪ್ಪ

Update: 2019-08-20 16:45 GMT

ಬೆಂಗಳೂರು, ಆ.20: ವಿಜ್ಞಾನದಲ್ಲಿ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಕೊಡುಗೆ ಮಹತ್ವದ್ದಾಗಿದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಮಂಗಳವಾರ ನಗರದ ಗಾಂಧೀ ಭವನದಲ್ಲಿ ಕೆಪಿಸಿಸಿ ಎಸ್ಸಿ ಘಟಕದ ವತಿಯಿಂದ ರಾಜೀವ್‌ಗಾಂಧಿ 75 ನೆ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ಪಾಲಿಸಿ ತಂದವರು, ಎಂಟಿಎನ್‌ಎಲ್ ಮೂಲಕ ಇಂದಿನ ದೂರ ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ ಮಾಹಿತಿ ತಂತ್ರಜ್ಞಾನದ ಹರಿಕಾರ ರಾಜೀವ್‌ಗಾಂಧಿಯಾಗಿದ್ದಾರೆ. ಹಿಂದುಳಿದವರ, ದಲಿತರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ಅವರು ತಿಳಿಸಿದರು.

ಎಲ್ಲರೂ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾದಾಗಲೇ ನಿಜವಾದ ಸ್ವಾತಂತ್ರ ಸಿಕ್ಕಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಶೋಷಿತರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ತರಲಾಗಿದೆ. ದೇವರಾಜ ಅರಸು ಉಳುವವನಿಗೆ ಭೂಮಿಯ ಒಡೆಯ ಎಂಬ ಯೋಜನೆ ತಂದರು. ಅಂದಿನಿಂದ ಇಂದಿನವರೆಗೂ ಅನೇಕ ಯೋಜನೆಗಳನ್ನು ಪಕ್ಷ ನೀಡಿದೆ ಎಂದರು.

ಹಿಂದಿನ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪರಿಶಿಷ್ಟರಿಗೆ 50 ಲಕ್ಷದೊಳಗಿನ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಕಾಯ್ದೆ ಮಾಡಿದರು. ಅಲ್ಲದೆ, ದಲಿತರ ಅಭಿವೃದ್ಧಿ ವಿವಿಧ ಯೋಜನೆಗಳನ್ನು ಮಾಡಿದ್ದಾರೆ. ಆದರೆ, ದೇಶದಲ್ಲಿ ಅಧಿಕಾರಕ್ಕೆ ಬಂದ ಮೋದಿ ಯಾವುದಾದರೂ ಒಂದು ಹೊಸ ಯೋಜನೆ ಮಾಡಿದ ಉದಾಹರಣೆ ನೀಡಲಿ ಎಂದು ಹೇಳಿದರು.

ಜನರನ್ನು ಭಾವನಾತ್ಮಕವಾಗಿ ವಂಚಿಸಿ ಅಧಿಕಾರ ಪಡೆದಿದ್ದಾರೆ. ರಾಜ್ಯದಲ್ಲಿ ಹಿಂಬಾಗಿಲಿನ ಮೂಲಕ ಅಧಿಕಾರಕ್ಕೆ ಬಂದಿದ್ದು, ಪ್ರಜಾತಂತ್ರಕ್ಕೆ ವಿರುದ್ಧವಾಗಿ ಸಮ್ಮಿಶ್ರ ಸರಕಾರವನ್ನು ಬೀಳಿಸಿದ್ದಾರೆ. ಆದರೆ, ಅವರು ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ ಎಂಬುದನ್ನು ನೋಡಬೇಕು ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ನವಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ರಾಜೀವ್ ಗಾಂಧಿ. ತಮ್ಮ ಜೀವಿತಾವಧಿಯ ಅತ್ಯಲ್ಪ ಕಾಲದಲ್ಲಿ ಭಾರತದ ನಿರ್ಮಾಣದ ನಿಟ್ಟಿನಲ್ಲಿ ನೀಡಿದ ಕೊಡುಗೆ ಅನನ್ಯವಾದದ್ದು. ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದ ಯುವ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಅವರು ಡಿಜಿಟಲ್ ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ಬಣ್ಣಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ದೇಶದಲ್ಲಿನ ಪ್ರಧಾನಮಂತ್ರಿಗಳಲ್ಲಿ ರಾಜೀವ್ ಗಾಂಧಿ ಅಪರೂಪದ ರಾಜಕಾರಣಿ. ಅತ್ಯಂತ ಸರಳ, ಸಜ್ಜನ ನಾಯಕರಾಗಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಕುಟುಂಬದ ವಿರುದ್ಧ ಆಡಳಿತದಲ್ಲಿರುವ ಪಕ್ಷ ಕೀಳಾಗಿ ಮಾತನಾಡುತ್ತಿದೆ ಎಂದು ದೂರಿದರು.

ದೇಶದಲ್ಲಿ ಗಾಂಧೀ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಮತ್ತು ಸಂಘಪರಿವಾರ ಎಷ್ಟೇ ಅಪಪ್ರಚಾರ ಮಾಡಿದರೂ, ಜಾತ್ಯತೀತ ತತ್ವಗಳ ಮೇಲೆ ನಿಂತಿರುವ ಪಕ್ಷವನ್ನು ನಿರ್ನಾಮ ಮಾಡಲು ಅಸಾಧ್ಯ. ಬಿಜೆಪಿ ಮೊದಲು ಜನರ ಪರವಾಗಿ ಕೆಲಸ ಮಾಡುವುದನ್ನು ಕಲಿಯಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಚ್.ಆಂಜನೇಯ, ರುದ್ರಪ್ಪ ಲಮಾಣಿ, ಮೋಟಮ್ಮ, ಪಾಲಿಕೆ ಸದಸ್ಯೆ ಮಂಜುಳಾ ಸಂಪತ್, ಎಸ್ಸಿ ಘಟಕದ ಅಧ್ಯಕ್ಷ ಜಕ್ಕಪ್ಪ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News