ಎಂಟು ತಿಂಗಳಲ್ಲಿ ಬಿಜೆಪಿ ಸರಕಾರ ಪತನ: ಮಾಜಿ ಸಚಿವ ಶಿವರಾಜ ತಂಗಡಗಿ ಭವಿಷ್ಯ

Update: 2019-08-20 16:47 GMT

ಕೊಪ್ಪಳ, ಆ.20: ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರಕಾರ ಮುಂದಿನ 6-8 ತಿಂಗಳಲ್ಲಿ ಪತನಗೊಳ್ಳಲಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಅಧಿಕಾರಕ್ಕೇರಲು ಬೆಳಗಾವಿ ಜಾರಕಿಹೊಳಿ ಕಾರಣಕರ್ತರು. ಆದರೆ, ಬಿಎಸ್‌ವೈ ಜಾರಕಿಹೊಳಿ ಕುಟುಂಬಕ್ಕೂ ಮಂತ್ರಿಗಿರಿ ಕೊಟ್ಟಿಲ್ಲ ಎಂದು ಹೇಳಿದರು.

ಬೆಳಗಾವಿ ಸಹೋದರರು ನೆರೆ ಸಂದರ್ಭದಲ್ಲಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಿಂದಲೇ ಸರಕಾರ ಬಿದ್ದಿದೆ. ಬಿಜೆಪಿ ವಿಷವನ್ನುಂಡು ಸರಕಾರ ರಚನೆ ಮಾಡಿದೆ. ಇನ್ನು 6-8 ತಿಂಗಳಲ್ಲಿ ಪತನವಾಗಲಿದೆ ಎಂದು ಅವರು ತಿಳಿಸಿದರು.

ಬಿಎಸ್‌ವೈ ಅವರು ಸಚಿವ ಸಂಪುಟ ರಚನೆ ವೇಳೆ ಹೈಕ ಭಾಗ ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಹೈಕ ನಾಯಕರನ್ನೇ ಮರೆತಿದ್ದಾರೆ. ಆರು ಜಿಲ್ಲೆಗಳ ಪೈಕಿ ಒಬ್ಬರನ್ನೇ ಮಂತ್ರಿ ಮಾಡಿದ್ದು ನಾಚಿಕೆಗೇಡಿನ ಸಂಗತಿ. ಹೈಕದಲ್ಲಿ 41 ಕ್ಷೇತ್ರದಲ್ಲಿ 17 ಬಿಜೆಪಿ ಶಾಸಕರಿದ್ದರೂ ಒಂದೇ ಮಂತ್ರಿ ಕೊಟ್ಟಿದ್ದಾರೆ. ಈ ಭಾಗದ ಜನರು ಇದನ್ನು ಗಮನಿಸಬೇಕು ಎಂದರು.

ಹೈಕ ಭಾಗದಲ್ಲಿ ಲಿಂಗಾಯತ ಸಮುದಾಯದ ಶಾಸಕರೂ ಗೆದ್ದಿದ್ದಾರೆ. ಅವರಿಗೂ ಅನ್ಯಾಯ ಮಾಡಿದ್ದಾರೆ. ದಲಿತರು ಸೇರಿದಂತೆ ಭೋವಿ ಸಮುದಾಯಕ್ಕೂ ಮಂತ್ರಿಗಿರಿ ಕೊಡದೇ ವಂಚಿಸಿದ್ದಾರೆ. ಹೈಕ ಭಾಗಕ್ಕೆ ಬಿಜೆಪಿ ಏನು ಕೊಟ್ಟಿದೆ ಎನ್ನುವುದನ್ನು ಮೋದಿ ಮೋದಿ ಎಂದು ಕೂಗುವ ಭಕ್ತರು ನೋಡಬೇಕಿದೆ. ಓಟಿನ ರಾಜಕಾರಣಕ್ಕಾಗಿ ಹೈಕ ಭಾಗ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಹೈಕ ಜನತೆ ಎಚ್ಚೆತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.

ಛಲವಾದಿ, ಗಂಗಾಮತ, ಕುರುಬರು, ವಾಲ್ಮೀಕಿ, ಉಪ್ಪಾರ, ಭೋವಿ, ಮಾದಿಗ ಸಮುದಾಯ ಸೇರಿ ಹಲವು ಸಮುದಾಯ ಹೈಕ ಭಾಗದಲ್ಲಿ ಹೆಚ್ಚಿವೆ. ಬಿಜೆಪಿಗೆ ಸಣ್ಣಪುಟ್ಟ ಸಮಾಜಗಳು ಕಾಣಲಿಲ್ಲವೇ? ಕಾಂಗ್ರೆಸ್ ಸರಕಾರದಲ್ಲಿ ಸಣ್ಣ ಸಣ್ಣ ಸಮಾಜದ ಶಾಸಕರಿಗೂ ಮಂತ್ರಿಗಿರಿ ಕೊಟ್ಟಿದೆ. ಅನರ್ಹ ಶಾಸಕರನ್ನು ಬಿಜೆಪಿ ಬೀದಿಗೆ ನಿಲ್ಲಿಸಿದೆ. ಅವರು ಮನೆ ಮಠ ತೊರೆದು ಸುಪ್ರೀಂ ಕೋರ್ಟ್‌ಗೆ ಅಲೆಯುವಂತಾಗಿದೆ ಎಂದು ಟೀಕಿಸಿದರು.

ಉದ್ಯಮಿಗಳಿಗೆ ಕುತ್ತು: ಸಿಬಿಐ, ಈಡಿ, ಐಟಿ ಮೂಲಕ ದೊಡ್ಡ ದೊಡ್ಡ ಉದ್ಯಮಿಗಳಿಗೆ ಕುತ್ತು ತರುತ್ತಿದ್ದಾರೆ. ಸಿದ್ಧಾರ್ಥ ಸಾವಿಗೂ ಇದೇ ಕಾರಣ. ಇದರಿಂದ ಉದ್ಯಮಿಗಳು ಆತಂಕದಲ್ಲಿದ್ದಾರೆ. ಭಾರತದ ಆರ್ಥಿಕ ಸ್ಥಿತಿ ತುಂಬ ಕೆಟ್ಟದಾಗಿದೆ. ಆರ್ಥಿಕ ತಜ್ಞರೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ನೆರೆ ಸಂತ್ರಸ್ತರಿಗೆ ಬಿಜೆಪಿ ನಯಾಪೈಸೆ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಅನ್ಯಾಯ ನಡೆದರೂ ಮೋದಿ ಭಕ್ತರು ಎಲ್ಲಿದ್ದಾರೋ ಕಾಣುತ್ತಿಲ್ಲ. ನೆರೆ ವೀಕ್ಷಣೆಗೆ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದರೂ ನಯಾ ಪೈಸೆ ಘೋಷಣೆ ಮಾಡಿಲ್ಲ. ಗುಜರಾತ್‌ಗೆ ಏನಾದರೂ ಆಗಿದ್ದರೆ ಮೋದಿ ಹಣ ಬಿಡುಗಡೆ ಮಾಡ್ತಾರೆ. ಆದರೆ ನಮಗೆ ಬಿಡುಗಡೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News