ಮೂಲಭೂತವಾದಿಗಳಿಂದ ಚಿಂತಕರ ಹತ್ಯೆ ಖಂಡನೀಯ: ವಿಜ್ಞಾನಿ ಸವ್ಯಸಾಚಿ ಚಟರ್ಜಿ

Update: 2019-08-20 16:52 GMT

ಬೆಂಗಳೂರು, ಆ.20: ದೇಶದಲ್ಲಿ ಮೂಲಭೂತವಾದಿಗಳಿಂದ ವೈಚಾರಿಕ ಚಿಂತಕರು ಹತ್ಯೆಯಾಗುತ್ತಿರುವುದು ಖಂಡನೀಯ ಎಂದು ಖಗೋಳ ವಿಜ್ಞಾನಿ ಡಾ.ಎಸ್.ಸವ್ಯಸಾಚಿ ಚಟರ್ಜಿ ತಿಳಿಸಿದ್ದಾರೆ.

ಮಂಗಳವಾರ ನಗರದ ಅಂಬೇಡ್ಕರ್ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಚಾರ, ಚರ್ಚೆ ಹಾಗೂ ಸಂವಾದಗಳಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆ ಹೊರತು, ಹತ್ಯೆಯಿಂದಲ್ಲ. ಬಲಪಂಥೀಯ ವಿಚಾರಧಾರೆ ಉಳ್ಳವರಿಂದ ವೈಚಾರಿಕ ಚಿಂತಕರ ಹತ್ಯೆ ಸರಿಯಲ್ಲವೆಂದು ತಿಳಿಸಿದರು.

ಇವತ್ತು ಆಧುನಿಕ ಪರಿಕರಗಳ ಮೂಲಕ ಮೌಢ್ಯವನ್ನು ಬಿತ್ತಲಾಗುತ್ತಿದೆ. ಟಿವಿ, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬಲಪಂಥೀಯ ಹಿತಾಸಕ್ತಿಗಳು ಮೌಢ್ಯಗಳನ್ನು ಹರಡುತ್ತಿವೆ. ಇವುಗಳ ವಿರುದ್ಧ ಜನತೆಯಲ್ಲಿ ಜಾಗೃತಿ ಮೂಢಿಸುವುದು ಸಂಘ, ಸಂಸ್ಥೆಗಳ ಜವಾಬ್ದಾರಿಯೆಂದು ಅವರು ಹೇಳಿದರು.

ಮನೆ, ಮನೆಗೆ ವಿಜ್ಞಾನ ತಲುಪಬೇಕು. ವಿಜ್ಞಾನಿಗಳ ಪರಿಚಯ, ಅವರ ಸಂಶೋಧನೆಗಳನ್ನು ವಿದ್ಯಾರ್ಥಿಗಳು ತಿಳಿಯುವಂತರಾಗಬೇಕು. ವೈಚಾರಿಕವಾದಿ ಡಾ.ನರೇಂದ್ರ ದಾಭೋಲ್ಕರ್ ಮೂಢನಂಬಿಕೆಗಳ ವಿರುದ್ಧ ಹೋರಾಡಿ ಮೂಲಭೂತವಾದಿಗಳಿಂದ 2013ರಲ್ಲಿ ಹತ್ಯೆಯಾದರು. ಅವರ ಹತ್ಯೆಯ ದಿನವನ್ನು ವೈಜ್ಞಾನಿಕ ಮನೋವೃತ್ತಿ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಶಾಂತಿ ಮಾತನಾಡಿ, ಯುವಜನರು ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು ಸಮಾಜದಲ್ಲಿ ಪ್ರಗತಿಪರವಾಗಿ ನಡೆದುಕೊಳ್ಳಬೇಕು. ಸಮ ಸಮಾಜ ನಿರ್ಮಾಣಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ್ ಆದಿಯಲ್ಲಿ ಸಾಗಬೇಕೆಂದು ತಿಳಿಸಿದರು. ಈ ವೇಳೆ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News