ರಾಜ್ಯ ರಾಜಧಾನಿಯಲ್ಲಿ ನಿಲ್ಲುತ್ತಾ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ?

Update: 2019-08-20 17:40 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.20: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಪ್ರಸಕ್ತ ವರ್ಷವಾದರೂ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಮಾರಾಟಗಾರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆಯಾ ಕಾದು ನೋಡಬೇಕು.

ಪ್ರತಿ ವರ್ಷವೂ ಪಿಒಪಿ ಗಣೇಶ ಮೂರ್ತಿ ಮಾರಾಟ ಹಾಗೂ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಮಂಡಳಿ ಹಾಗೂ ಬಿಬಿಎಂಪಿ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡುತ್ತವೆ. ಆದರೆ, ಪಿಒಪಿ ಮಾಫಿಯಾಗೆ ಮಣಿದು ನಿಷೇಧಿತ ಮೂರ್ತಿಗಳಿಗೆ ಮುಕ್ತ ಮಾರಾಟ ವ್ಯವಸ್ಥೆ ಕಲ್ಪಿಸುತ್ತವೆ. ಈ ಬಾರಿಯಾದರೂ ಕೊನೆ ಕ್ಷಣದಲ್ಲಿ ತಟಸ್ಥ ಧೋರಣೆ ಅನುಸರಿಸುವ ಮೂಲಕ ಪಿಒಪಿ ನಿಷೇಧದ ನಿಯಮಗಳನ್ನು ಗಾಳಿಗೆ ತೂರುತ್ತಾರಾ ಎಂಬ ಕುತೂಹಲ ಮೂಡಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ತೀರ್ಪಿನ ಅನ್ವಯ 2016ರಲ್ಲೇ ರಾಜ್ಯದಲ್ಲಿ ಪಿಒಪಿ ಮೂರ್ತಿಗಳನ್ನು ನಿಷೇಧಿಸಲಾಗಿದೆ. ನಗರದಲ್ಲಿ ಪಿಒಪಿ ಮೂರ್ತಿಗಳ ಮಾರಾಟ ಮಾಡುವವರ ವ್ಯಾಪಾರ ಪರವಾನಗಿ ರದ್ದುಪಡಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಬಿಬಿಎಂಪಿ ಆದೇಶ ಹೊರಡಿಸಿತ್ತು. ಹೀಗಿದ್ದರೂ ಕಳೆದ ಮೂರು ವರ್ಷಗಳಿಂದಲೂ ಪಿಒಪಿ ಮೂರ್ತಿಗಳ ಉತ್ಪಾದನೆ ಹಾಗೂ ಮಾರಾಟ ದಂಧೆ ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.

ನಗರದ ಮಾರುಕಟ್ಟೆಗೆ ದೇಶದ ವಿವಿಧ ರಾಜ್ಯಗಳಿಂದಲೂ ಪಿಒಪಿ ಮೂರ್ತಿಗಳ ಬರುತ್ತಿವೆ. ಹೀಗಿದ್ದರೂ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಇರಲಿ ಕನಿಷ್ಠ ಒಂದು ವ್ಯಾಪಾರ ಪರವಾನಿಗಿಯೂ ರದ್ದಾಗಿಲ್ಲ. ಇದು ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಎಷ್ಟರ ಮಟ್ಟಿಗೆ ಪಿಒಪಿ ಮೂರ್ತಿಗಳ ನಿಷೇಧದ ಪರವಾಗಿವೆ ಎಂಬುದು ಪ್ರಶ್ನಾತೀತ ಎನ್ನುತ್ತಾರೆ ಪರಿಸರ ತಜ್ಞರು.

ಇನ್ನು, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಡಾ.ಕೆ.ಸುಧಾಕರ್, ಏಕಾಏಕಿ ದಾಳಿ ನಡೆಸಿ 2,450 ಪಿಒಪಿ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ವರ್ಷವಾದರೂ ಕಟ್ಟುನಿಟ್ಟಿನ ನಿಷೇಧ ಜಾರಿಯಾಗುತ್ತದೆ ಎಂಬ ಸಣ್ಣ ಆಸೆ ಮೊಳಕೆ ಹೊಡೆಯುವಂತೆ ಮಾಡಿದ್ದಾರೆ.

ಮೊಕದ್ದಮೆ ದಾಖಲಾಗಿಲ್ಲ

ನಿಯಮಗಳ ಪ್ರಕಾರ ವಶಪಡಿಸಿಕೊಂಡಿರುವ ಮೂರ್ತಿಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ವಿಲೇವಾರಿ ಮಾಡಬೇಕು ಅಥವಾ ಕ್ವಾರಿಗಳಲ್ಲಿ ವಿಸರ್ಜನೆ ಮಾಡಬೇಕು. ಸಂಬಂಧಪಟ್ಟ ಘಟಕಗಳ ಮಾಲಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಆದರೆ, ಯಾವುದೇ ನಿಯಮ ಪಾಲಿಸದ ಅಧಿಕಾರಿಗಳು ಬೀಗ ಜಡಿದು ಸುಮ್ಮನಾಗಿದ್ದಾರೆ.

ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ. ಈಗಾಗಲೇ ನಗರದ ಹಲವೆಡೆ ಬಿಬಿಎಂಪಿ ಸಿಬ್ಬಂದಿ ಮತ್ತು ತನಿಖಾ ದಳ ದಾಳಿ ನಡೆಸಿ ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

-ಎನ್. ಮಂಜುನಾಥ ಪ್ರಸಾದ್, ಆಯುಕ್ತರು, ಬಿಬಿಎಂಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News