ರ‍್ಯಾಗಿಂಗ್: 150 ವೈದ್ಯಕೀಯ ವಿದ್ಯಾರ್ಥಿಗಳ ತಲೆ ಬೋಳಿಸಿದ ಹಿರಿಯ ವಿದ್ಯಾರ್ಥಿಗಳು !

Update: 2019-08-21 07:59 GMT

ಲಕ್ನೋ : ಉತ್ತರ ಪ್ರದೇಶದ ಸಫೈ ಗ್ರಾಮದಲ್ಲಿರುವ ಉತ್ತರ ಪ್ರದೇಶ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದ ರ‍್ಯಾಗಿಂಗ್ ಘಟನೆಯಲ್ಲಿ ಸುಮಾರು 150 ಮಂದಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ತಲೆಗಳನ್ನು ಬಲವಂತವಾಗಿ ಬೋಳಿಸಿ ಹಿರಿಯ ವಿದ್ಯಾರ್ಥಿಗಳಿಗೆ ಸೆಲ್ಯೂಟ್ ಹೊಡೆಯುವಂತೆ ಮಾಡಲಾಗಿದೆ. ಘಟನೆಯ ವೀಡಿಯೋಗಳು ವೈರಲ್ ಆಗಿವೆ.

ಒಂದು ವೀಡಿಯೊದಲ್ಲಿ ಬಿಳಿ ಕೋಟ್ ಧರಿಸಿದ ಹಾಗೂ ಬೋಳು ತಲೆಯ ವಿದ್ಯಾರ್ಥಿಗಳ ಒಂದು ಸಣ್ಣ ಗುಂಪು ಜತೆಯಾಗಿ ನಡೆಯುತ್ತಿರುವುದು ಕಾಣಿಸುತ್ತದೆ. ಇನ್ನೊಂದು ವೀಡಿಯೊದಲ್ಲಿ ಅವರೆಲ್ಲಾ ಜಾಗಿಂಗ್ ಮಾಡುತ್ತಾ ಹಿರಿಯ ವಿದ್ಯಾರ್ಥಿಗಳಿಗೆ ಸೆಲ್ಯೂಟ್ ಹೊಡೆಯುತ್ತಿರುವುದು ಕಾಣಿಸುತ್ತದೆ. ಮೂರನೇ  ವೀಡಿಯೊದಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿ ವಿದ್ಯಾರ್ಥಿಗಳ ಬಳಿ ನಿಂತಿದ್ದರೂ ರ‍್ಯಾಗಿಂಗ್ ತಡೆಯಲು ಯಾವುದೇ ಪ್ರಯತ್ನ ನಡೆಸಿದಂತೆ ಕಂಡು ಬಂದಿಲ್ಲ.

ಆದರೆ ವಿಶ್ವವಿದ್ಯಾಲಯದಲ್ಲಿ ರ‍್ಯಾಗಿಂಗ್ ತಡೆಯಲು ವಿಶೇಷ  ತಂಡಗಳಿವೆ ಎಂದು ಉಪಕುಲಪತಿ ಡಾ. ರಾಜ್ ಕುಮಾರ್ ಹೇಳಿದ್ದಾರಲ್ಲದೆ ಈ ಹಿಂದೆ ನಡೆದ ರ‍್ಯಾಗಿಂಗ್ ಘಟನೆಗಳಿಗೆ ಕಾರಣರಾದವರನ್ನು ಸಸ್ಪೆಂಡ್ ಗೊಳಿಸಲಾಗಿದೆ ಎಂದೂ ಹೇಳಿದ್ದಾರೆ. ಈ ನಿರ್ದಿಷ್ಟ ಘಟನೆಗೆ ಕಾರಣರಾದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಆಶ್ವಾಸನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News