ದಿಲ್ಲಿ ವಿವಿಯಲ್ಲಿ ಅನುಮತಿ ಪಡೆಯದೆ ಸಾವರ್ಕರ್ ಪ್ರತಿಮೆ ಸ್ಥಾಪಿಸಿದ ಎಬಿವಿಪಿ

Update: 2019-08-21 09:30 GMT
Photo: indianexpress.com

ಹೊಸದಿಲ್ಲಿ, ಆ.21: ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ಚುನಾವಣೆಗೆ ಮುಂಚಿತವಾಗಿ ಎಬಿವಿಪಿ  ಕಾರ್ಯಕರ್ತರು  ವಿವಿಯ ಕಲಾ ವಿಭಾಗದ ಗೇಟಿನ ಹೊರಗಡೆ ಯಾವುದೇ ಅನುಮತಿ ಪಡೆಯದೆ ಸಾವರ್ಕರ್ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.

ಸಾವರ್ಕರ್ ಜೊತೆಗೆ ಎಬಿವಿಪಿ ಸುಭಾಶ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ರ ಪ್ರತಿಮೆಯನ್ನು ಸ್ಥಾಪಿಸಿದೆ. ಈ ಬೆಳವಣಿಗೆಯನ್ನು ಕಾಂಗ್ರೆಸ್ ಸಂಯೋಜಿತ ಎನ್‍ಎಸ್‍ಯುಐ ಟೀಕಿಸಿದೆ. ಬೋಸ್ ಹಾಗೂ ಭಗತ್ ಸಿಂಗ್ ಅವರ ಜತೆ ಸಾವರ್ಕರ್ ರನ್ನು ಸಮಾನ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ ಎಂದು ಎನ್‍ಎಸ್‍ಯುಐ ಹೇಳಿದೆ.

ಪ್ರತಿಮೆಗಳನ್ನು ಸ್ಥಾಪಿಸಲು ತಾವು ವಿವಿ ಆಡಳಿತದ ಬಳಿ ಕಳೆದ ವರ್ಷದ ನವೆಂಬರ್ ತಿಂಗಳಿನಿಂದಲೇ ಮನವಿ ಮಾಡಿದ್ದರೂ ಹಾಗೂ ಆಗಸ್ಟ್ 9ರಂದು ಇನ್ನೊಮ್ಮೆ ಮನವಿ ಸಲ್ಲಿಸಿದ್ದರೂ ಆಡಳಿತ ಮೌನ ವಹಿಸಿದ್ದರಿಂದ ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ಎಬಿವಿಪಿ ನೇತೃತ್ವದ ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಶಕ್ತಿ ಸಿಂಗ್ ಹೇಳಿದ್ದಾರೆ. ಈ ಪ್ರತಿಮೆಗಳನ್ನು ತೆಗೆದರೆ ಪ್ರತಿಭಟಿಸುವುದಾಗಿಯೂ ಅವರು ಎಚ್ಚರಿಸಿದ್ದಾರೆ.

ಅತ್ತ ಈ ಪ್ರತಿಮೆಗಳನ್ನು 24 ಗಂಟೆಗಳೊಳಗಾಗಿ ತೆಗೆಯದೇ ಇದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎನ್‍ಎಸ್‍ಯುಐ ಎಚ್ಚರಿಸಿದೆ. ವಿಶ್ವವಿದ್ಯಾಲಯ ಈ ಬೆಳವಣಿಗೆಯ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

ಪ್ರತಿಮೆಗಳನ್ನು ಸ್ಥಾಪಿಸಲಾದ ಸ್ಥಳ ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯಲ್ಲಿ ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News