ನಾಡದೋಣಿಗೆ ಡೀಸೆಲ್ ಸಬ್ಸಿಡಿ 400 ಲೀಟರ್ ಏರಿಕೆಗೆ ಸಮ್ಮತಿ: ಸಚಿವ ಶ್ರೀನಿವಾಸ ಪೂಜಾರಿ

Update: 2019-08-21 13:17 GMT

ಬೆಂಗಳೂರು, ಆ.21: ನಾಡದೋಣಿಗೆ ನೀಡಲಾಗುತ್ತಿರುವ ಡೀಸೆಲ್ ಸಬ್ಸಿಡಿ ಪ್ರಮಾಣವನ್ನು 300 ಲೀಟರ್‌ನಿಂದ 400 ಲೀಟರ್‌ಗೆ ಏರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದಾರೆಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. 

ಬುಧವಾರ ಮಲ್ಪೆಯ ಮೀನುಗಾರರ ನಿಯೋಗ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ, ಮೀನುಗಾರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಅಗತ್ಯ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀನಿವಾಸ ಪೂಜಾರಿ, ನಾಡದೋಣಿಗೆ ಸಬ್ಸಿಡಿಯಲ್ಲಿ ನೀಡುತ್ತಿರುವ 300ಲೀಟರ್ ಡೀಸೆಲ್ ಸಾಕಾಗುತ್ತಿಲ್ಲ. ಇದನ್ನು ಹೆಚ್ಚಿಸುವಂತೆ ಹಲವು ದಿನಗಳಿಂದ ಬೇಡಿಕೆ ಸಲ್ಲಿಸುತ್ತಾ ಬರುತ್ತಿದ್ದೇವೆ. ಹೀಗಾಗಿ ಕೂಡಲೇ ಏರಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಲಾಯಿತು. ಅವರು 400ಲೀಟರ್‌ಗೆ ಹೆಚ್ಚಿಸಲು ಒಪ್ಪಿಗೆ ಸೂಚಿಸಿದರು ಎಂದು ತಿಳಿಸಿದರು.

ಸುವರ್ಣ ತ್ರಿಭುಜ ದೋಣಿ ಮುಳುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಮೀನುಗಾರರ ಕುಟುಂಬಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿಯವರು ಒಪ್ಪಿಗೆ ಸೂಚಿಸಿದ್ದಾರೆ. ಹಾಗೂ ಸುವರ್ಣ ತ್ರಿಭುಜ ಬೋಟ್‌ನ ಇನ್ಸೂರೆನ್ಸ್ 20ಲಕ್ಷ ರೂ. ಸಾಲವಿದೆ. ಇದನ್ನು ಸರಕಾರವೇ ಭರಿಸಬೇಕೆಂದು ಮನವಿ ಮಾಡಲಾಯಿತು ಎಂದು ಅವರು ಹೇಳಿದರು.

ಈ ವೇಳೆ ಉಡುಪಿ ಶಾಸಕ ರಘುಪತಿ ಭಟ್, ಬಸನಗೌಡ ಪಾಟೀಲ್ ಯತ್ನಾಳ್, ಕಾಪು ಶಾಸಕ ಲಾಲಾಜಿ. ಆರ್. ಮೆಂಡನ್ ಮತ್ತು ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಸಿ.ಕಳಸದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News