ಅಂದು ಸಿಬಿಐ ಹೊಸ ಮುಖ್ಯ ಕಚೇರಿಯಲ್ಲಿ ಮುಖ್ಯ ಅತಿಥಿ, ಇಂದು ಅಲ್ಲೇ ಕೈದಿ !

Update: 2019-08-22 05:53 GMT

ಹೊಸದಿಲ್ಲಿ : ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರನ್ನು ಸಿಬಿಐ ಬುಧವಾರ ರಾತ್ರಿ ಬಂಧಿಸಿದ ಬೆನ್ನಲ್ಲೇ ಅವರನ್ನು ಕಳೆದ ರಾತ್ರಿ ಇರಿಸಲಾದ ರಾಜಧಾನಿಯಲ್ಲಿರುವ ಸಿಬಿಐ ಮುಖ್ಯ ಕಾರ್ಯಾಲಯದ  ಕಟ್ಟಡದ ಉದ್ಘಾಟನಾ ಸಮಾರಂಭ ಜೂ.30, 2011ರಲ್ಲಿ ನಡೆದಾಗ ಆಗ ಗೃಹ ಸಚಿವರಾಗಿದ್ದ ಚಿದಂಬರಂ ಅವರೇ ಮುಖ್ಯ ಅತಿಥಿಯಾಗಿ ಹಾಜರಿದ್ದುದು ವಿಪರ್ಯಾಸವೇ ಸರಿ.

ಈ ಸಮಾರಂಭದ ವೀಡಿಯೊ ಅವರ ಬಂಧನದ ಬೆನ್ನಲ್ಲೇ ಅಂತರ್ಜಾಲದಲ್ಲಿ ಸಾಕಷ್ಟು ಹರಿದಾಡಿದೆ.

ಸಿಬಿಐ ಮುಖ್ಯ ಕಾರ್ಯಾಲಯವನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಚಿದಂಬರಂ ಜತೆ ಅವರ ಸಹೋದ್ಯೋಗಿಗಳಾದ ಕಪಿಲ್ ಸಿಬಲ್ ಹಾಗೂ ವೀರಪ್ಪ ಮೊಯ್ಲಿ ಕೂಡ ಹಾಜರಿದ್ದರು.

ಈ ಸಂದರ್ಭ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಚಿದಂಬರಂ ಹೀಗೆ ಬರೆದಿದ್ದರು - ''1985ರಿಂದ ಸಿಬಿಐ ಜತೆ  ನಿಕಟವಾಗಿ  ಕೆಲಸ ಮಾಡಿರುವುದರಿಂದ ಸಂಸ್ಥೆ ಈಗ ಹೊಸ ಮನೆ ಹೊಂದಿರುವುದಕ್ಕೆ ನನಗೆ ಹೆಮ್ಮೆಯಿದೆ. ಭಾರತದ ಈ ಅತ್ಯುನ್ನತ ತನಿಖಾ ಏಜನ್ಸಿ ಇನ್ನಷ್ಟು ಸುದೃಢವಾಗಿ ದೇಶದ ಆಡಳಿತಾತ್ಮಕ ವ್ಯವಸ್ಥೆಯ ಬಲಿಷ್ಠ  ಆಧಾರ ಸ್ತಂಭವಾಗಲಿ'' ಎಂದು ಚಿದಂಬರಂ ಬರೆದಿದ್ದರು.

ಉದ್ಘಾಟನಾ ಸಮಾರಂಭದ ನಂತರ ಚಿದಂಬರಂ ಸಹಿತ ಇತರ ಅತಿಥಿಗಳನ್ನು ಸಂಪೂರ್ಣ ಹವಾನಿಯಂತ್ರಿತ ಕಟ್ಟಡದ ಸುತ್ತ ಕರೆದುಕೊಂಡು ಹೋಗಲಾಯಿತಲ್ಲದೆ ಗೆಸ್ಟ್ ಹೌಸ್ ಎಂದು ಕರೆಯಲ್ಪಡುವ ತಳ ಅಂತಸ್ತಿನ  ಲಾಕ್-ಅಪ್  ಕೊಠಡಿಗಳನ್ನೂ ತೋರಿಸಲಾಗಿತ್ತು. ಇಂತಹ ಒಂದು ಕೊಠಡಿಯಲ್ಲಿಯೇ (ಕೊಠಡಿ ಸಂಖ್ಯೆ 3) ಚಿದಂಬರಂ ಕಳೆದ ರಾತ್ರಿ ಕಳೆದಿದ್ದರು. ಆ ಕೊಠಡಿಯ ಹೊರಗೆ ಇಬ್ಬರು ಕಾವಲುಗಾರರನ್ನೂ ನಿಯೋಜಿಸಲಾಗಿತ್ತು.

ಚಿದಂಬರಂ ಅವರನ್ನು ಕಳೆದ ರಾತ್ರಿ ವಿಚಾರಣೆಗೊಳಪಡಿಸದೆ ಇಂದು ಬೆಳಗ್ಗೆ ಅವರ ವಿಚಾರಣೆ ಆರಂಭಗೊಂಡಿದೆ. ರಾತ್ರಿ ಅವರಿಗೆ ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸಲು ಹಾಗೂ ಬಟ್ಟೆ ಬದಲಾಯಿಸಲು ಅವಕಾಶ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News