ಸದಾನಂದ ಗೌಡ, ತೇಜಸ್ವಿ ಸೂರ್ಯ ಹುಚ್ಚರು: ವಾಟಾಳ್ ನಾಗರಾಜ್

Update: 2019-08-22 13:09 GMT

ಬೆಂಗಳೂರು, ಆ.22: ರಾಜ್ಯದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಿಗರೇ ಸಾರ್ವಭೌಮರು ಎಂದು ಹೋರಾಟ ಮಾಡುವವರನ್ನು ರೌಡಿಗಳು ಮತ್ತು ಕಿಡಿಗೇಡಿಗಳು ಎಂದು ಕರೆದಿರುವ ಸಂಸದ ಸದಾನಂದಗೌಡ ಹಾಗೂ ತೇಜಸ್ವಿ ಸೂರ್ಯರು ಹುಚ್ಚರು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತರಾಟೆ ತೆಗೆದುಕೊಂಡರು.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮೇಲೆ ಹಿಂದಿ ಭಾಷೆ ಹೇರಿಕೆಯ ಚರ್ಚೆಯು ಇನ್ನೂ ಮುಗಿದೇ ಇಲ್ಲ. ಆಗಲೇ ಇಬ್ಬರು ಸಂಸದರು ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದು, ಕನ್ನಡ ಭಾಷೆಯ ಸಲುವಾಗಿ ಹೋರಾಟ ನಡೆಸಿದವರನ್ನು ಪುಂಡರು ಎಂದು ಹೇಳುವ ಮೂಲಕ ಅಪಮಾನದ ಮಾತುಗಳನ್ನು ಆಡಿದ್ದಾರೆ. ಅಲ್ಲದೆ, ಕನ್ನಡ ಭಾಷೆಯ ಪರವಾದ ಹೋರಾಟದ ನೈತಿಕತೆಯನ್ನು ಕುಂದಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ವಿಷಾದಿಸಿದರು.

ಸಂಸದ ಸದಾನಂದಗೌಡ ಹಾಗೂ ತೇಜಸ್ವಿ ಸೂರ್ಯರಿಗೆ ಕನ್ನಡಗರು ಯಾರೂ ಮತದಾನ ಹಾಕಿಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದಾರೆ. ಈ ಇಬ್ಬರು ಸಂಸದರನ್ನು ರಾಜ್ಯದಿಂದ ಆಯ್ಕೆ ಮಾಡಿರುವುದು ನಾಡಿನ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯ ಸೌಹಾರ್ದತೆಯನ್ನು ಎತ್ತಿ ಹಿಡಿಯುವುದಕ್ಕೆ ಹೊರತು, ನಾಶ ಮಾಡುವುದಕ್ಕಲ್ಲ. ಇನ್ನು, ಕನ್ನಡಕ್ಕಾಗಿ ಹೋರಾಟ ಮಾಡುವವರನ್ನು ವಿರೋಧಿಸುವ ನಿಲುವು ಸರಿಯಾದುದಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಹಿಂದಿ ಜನರ ಬೆಳವಣಿಗೆ ಅಧಿಕವಾಗುತ್ತಿದೆ. ಅನ್ಯ ಭಾಷಿಗರು ಇಲ್ಲಿಗೆ ವ್ಯಾಪಾರ ಹಾಗೂ ಉದ್ಯೋಗದ ಉದ್ದೇಶಕ್ಕೆ ಬಂದು ನೆಲೆ ನಿಂತಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಅವರಿಗೆ ಪ್ರಾಮಾಣಿಕತೆಯೂ ಇಲ್ಲ. ಕನ್ನಡ ಭಾಷೆ ಕಲಿಯುವ ಆಸಕ್ತಿಯೂ ಇಲ್ಲ. ಒಂದೆಡೆ ಮಾರ್ವಾಡಿಗಳು, ಇನ್ನೊಂದೆಡೆ ತಮಿಳರು ತಮ್ಮದೇ ಬಣ ಕಟ್ಟಿಕೊಂಡಿದ್ದಾರೆ. ಇದು ತಮಿಳುನಾಡಲ್ಲ, ರಾಜಸ್ಥಾನವಲ್ಲ. ಇಲ್ಲಿ ಕನ್ನಡಿಗರೇ ಸಾರ್ವಭೌಮರು. ಕನ್ನಡಿಗರು ಜಾತ್ಯತೀತರು ಎಂಬುದು ಸ್ಪಷ್ಟ. ರಾಜ್ಯದವರೆಲ್ಲ ಒಂದೇ ಎಂಬುದು ಸತ್ಯ ಎಂದು ಕೋಮು ಪ್ರಚೋದಕರನ್ನು ತೆಗಳಿದರು.

ಅನ್ಯ ಭಾಷಿಕರಿಗೆ ಕನ್ನಡವೇ ಬೇಡವೆಂದರೆ ನಿಮ್ಮ ರಾಜ್ಯಕ್ಕೆ ಹೋಗಿ ಎಂಬುದನ್ನು ಹೇಳಬೇಕಾಗುತ್ತದೆ. ಇದನ್ನು ಒಂದು ರೀತಿ ಸವಾಲೆಂದು ನೀವೇ ಹಾಕಿಯೂ ಆಗಿದೆ. ಇನ್ನು ಮುಂದೆ ನಾವು ಸ್ವಷ್ಟ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಅಷ್ಟೇ. ಅನ್ಯ ಭಾಷಿಗರು ನಮ್ಮನ್ನು ಬೆದರಿಸೋಕೆ ಸಾಧ್ಯವಿಲ್ಲ. ಕನ್ನಡವೇ ಇಲ್ಲಿ ನಿತ್ಯ ಎಂದು ತಿಳಿಸಿದರು.

ಹಿಂದಿನ ಹೋರಾಟ-ಚಿಂತನೆ ಇಲ್ಲ

ಹಿಂದಿ ನಮಗೆ ಬೇಡವೇ ಬೇಡ. ರಾಜ್ಯದಲ್ಲಿ ಯಾರೇ ಇದ್ದರೂ ಕನ್ನಡವನ್ನು ಮಾತಾಡಲೇಬೇಕು. ಧ್ವನಿವರ್ಧಕಗಳಲ್ಲೂ ಕನ್ನಡವೇ ಕೇಳಬೇಕು. ಕನ್ನಡಿಗರಿಗೆ ಉದ್ಯೋಗವೂ ಸಿಗಬೇಕು. ಮುಂದಿನ ದಿನಗಳಲ್ಲಿ ಕನ್ನಡ ಉಳಿಸುವ, ಕನ್ನಡಕ್ಕೆ ಅಪಾಯವನ್ನುಂಟು ಮಾಡುವವರ ವಿರುದ್ಧ ಉಗ್ರ ಹೋರಾಟ ಮಾಡಲಾಗುತ್ತದೆ. ಕನ್ನಡ ಸಾರ್ವಭೌಮತ್ವಕ್ಕಾಗಿ ಹಿಂದಿನ ಹೋರಾಟದ ಸೆಲೆ ಈಗ ಇಲ್ಲ. ಅಂದಿನ ಚಿಂತನೆಯೂ ಇಲ್ಲವಾಗಿದೆ. ಇನ್ನು, ಸರೋಜಿನಿ ಮಹಿಷಿ ವರದಿ ಯಾವ ಮೂಲೆಯಲ್ಲಿ ಧೂಳು ಹಿಡಿಯುತ್ತಿದೆಯೋ ಎಂದು ಆತಂಕ ವ್ಯಕ್ತಪಡಿಸಿದರು.

ಸಂಸದರು ಕ್ಷಮೆಯಾಚಿಸಬೇಕು

ಮಾರ್ವಾಡಿಗಳು ಕನ್ನಡ ಕಲಿತು ಸೌಹಾರ್ದತೆಯಿಂದ ಇರಬೇಕು ಹಾಗೂ ಬಡವರ ಒಡವೆಯನ್ನು ಹಿಂತಿರುಗಿಸಬೇಕು. ಅಲ್ಲದೆ, ಭಾಷೆಯನ್ನು ಧರ್ಮಕ್ಕೆ ತುರುಕಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುವುದು ತಪ್ಪು. ಹೀಗಾಗಿ, ಸೂರ್ಯ ಹಾಗೂ ಸದಾನಂದಗೌಡ ತಮ್ಮ ಹೇಳಿಕೆಯನ್ನು ಹಿಂಪಡೆದು ರಾಜ್ಯದ ಜನರ ಕ್ಷಮೆಯಾಚಿಸಬೇಕು.

-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News